ನೆರೆ ರಾಜ್ಯ ಕೇರಳದಲ್ಲಿ ಆತಂಕ ಸೃಷ್ಟಿಸಿದ ಜ್ವರ: ಕರ್ನಾಟಕದ ಶಾಲಾ-ಕಾಲೇಜುಗಳಿಗೆ ಆರೋಗ್ಯ ಇಲಾಖೆ ಅಲರ್ಟ್
ನೆರೆ ರಾಜ್ಯ ಕೇರಳದಲ್ಲಿ ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನಲೆ ರಾಜ್ಯದ ಶಾಲಾ ಕಾಲೇಜುಗಳು ಸೇರಿದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.
ಬೆಂಗಳೂರು: ನೆರೆ ರಾಜ್ಯ ಕೇರಳ(Kerala)ದಲ್ಲಿ ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನಲೆ ರಾಜ್ಯದ ಶಾಲಾ ಕಾಲೇಜುಗಳು ಸೇರಿದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ. ಕೇರಳದಲ್ಲಿ ಕಳೆದೊಂದು ವಾರದಿಂದ ಜ್ವರ(Fever)ಆರ್ಭಟ ಜಾಸ್ತಿಯಾಗಿದೆ. ಪ್ರತಿನಿತ್ಯ ಬರೊಬ್ಬರಿ 10 ಸಾವಿರ ಜ್ವರದ ಕೇಸ್ಗಳು ದಾಖಲಾಗುತ್ತಿದೆ. ಈ ಮೂಲಕ ಕೇರಳದಲ್ಲಿ ಚಿಕುನ್ ಗುನ್ಯಾ, ಡೆಂಗ್ಯೂ, ಹಕ್ಕಿ ಜ್ವರ, ಹಂದಿ ಜ್ವರ, ವೈರಲ್ ಫೀವರ್, ಹೆಪಟೈಟಿಸ್ ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ.
ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಲು ಸೂಚನೆ
ಕೇರಳದಲ್ಲಿ ಜ್ವರ ಏರಿಕೆ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಕೇರಳದ ಗಡಿಭಾಗದ ಜಿಲ್ಲೆಗಳಾದ ಬೆಂಗಳೂರು ಸೇರಿದಂತೆ ಮಂಗಳೂರು, ಮಡಿಕೇರಿ, ಕಾಸರಗೋಡು, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಸೂಚನೆ ನೀಡಲಾಗಿದ್ದು, ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಸರ್ಕಾರಿ ಶಾಲೆ ವಿಜ್ಞಾನ ಶಿಕ್ಷಕರಿಗೆ ಸ್ಪೆಷಲ್ ಟ್ರೈನಿಂಗ್
ಇನ್ನು ಈ ಕುರಿತು ಈಗಾಗಲೇ ಸರ್ಕಾರಿ ಶಾಲೆ ವಿಜ್ಞಾನ ಶಿಕ್ಷಕರಿಗೆ ಸ್ಪೆಷಲ್ ಟ್ರೈನಿಂಗ್ ನೀಡಲಾಗಿದೆ. ಫೀವರ್ ಹೇಗೆ ಪತ್ತೆ ಹಚ್ಚಬೇಕು? ಮಗುವಿಗೆ ಜ್ವರ ಬಂದರೆ ಏನು ಮಾಡಬೇಕು?, ಡೆಂಘಿ, ಮಲೇರಿಯಾ, ಚಿಕೂನ್ ಗೂನ್ಯ, ಟೈಫೆಡ್ ಜ್ವರದ ಗುಣಲಕ್ಷಣಗಳು ಏನೇನು?, ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಿಳಿಸಲಾಗಿದೆ. ಸದ್ಯ ನೆರೆಯ ಕೇರಳದಲ್ಲಿ 898 ಡೆಂಗ್ಯೂ ಪ್ರಕರಣಗಳು, 78 ಹೆಪಟೈಟಿಸ್ , 24 ಮಲೇರಿಯಾ, 11 ಟೈಫೆಡ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯಕ್ಕೂ ಕೇರಳ ಜ್ವರದ ಆತಂಕ ಶುರುವಾಗಿದೆ.
ರಾಜ್ಯದಲ್ಲಿ 2000 ಗಡಿ ದಾಟಿದ ಡೆಂಗ್ಯೂ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 2180 ಡೆಂಗ್ಯೂ ಕೇಸ್ಗಳು ಪತ್ತೆಯಾಗಿವೆ. ಅದರಲ್ಲಿ 732 ಕೇಸ್ಗಳು ಬೆಂಗಳೂರಿನಲ್ಲಿಯೇ ಬೆಳಕಿಗೆ ಬಂದಿದೆ. ಇನ್ನುಳಿದಂತೆ 77260 ಜನರ ರಕ್ತದ ಸ್ಯಾಂಪಲ್ಸ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ 534 ಚಿಕನ್ ಗುನ್ಯಾ ಸೇರಿದಂತೆ 84ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗುತ್ತಿದ್ದು, ಮತ್ತಷ್ಟು ಕೇಸ್ ಹೆಚ್ಚಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಮುಂಜಾಗೃತ ಕ್ರಮವಹಿಸಲು ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ