Influenza: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಇನ್ಫ್ಲುಯೆನ್ಜ, ನಿಮ್ಮ ಮಕ್ಕಳಲ್ಲಿ ಜ್ವರ, ಶೀತ ಕಂಡುಬಂದರೆ ನಿರ್ಲಕ್ಷಿಸಬೇಡಿ
ಇತ್ತೀಚೆಗೆ ಮಕ್ಕಳಲ್ಲಿ ಇನ್ಫ್ಲುಯೆನ್ಜ ಕೇಸ್ಗಳು ಹೆಚ್ಚಾಗುತ್ತಿವೆ. ಹೀಗಾಗಿ ಇನ್ಫ್ಲುಯೆನ್ಜ ಕಡಿವಾಣಕ್ಕೆ ಪೋಷಕರು ಲಸಿಕೆ ಮೊರೆ ಹೋಗುತ್ತಿದ್ದು ನಗರದ ಮಕ್ಕಳ ಆಸ್ಪತ್ರೆಗಳಲ್ಲಿ ಇನ್ಫ್ಲುಯೆನ್ಜ ಲಸಿಕೆಗೆ ಬಾರಿ ಬೇಡಿಕೆ ಬಂದಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಶುರುವಾಗಿದೆ(Bengaluru Rain). ಇನ್ನೇನು ಮಳೆಗಾಲ ಆರಂಭವಾಗಲಿದ್ದು ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಶುರುವಾಗಿವೆ. ಇತ್ತೀಚೆಗೆ ಮಕ್ಕಳಲ್ಲಿ ಇನ್ಫ್ಲುಯೆನ್ಜ ಕೇಸ್ಗಳು ಹೆಚ್ಚಾಗುತ್ತಿವೆ(Influenza). ಹೀಗಾಗಿ ಇನ್ಫ್ಲುಯೆನ್ಜ ಕಡಿವಾಣಕ್ಕೆ ಪೋಷಕರು ಲಸಿಕೆ ಮೊರೆ ಹೋಗುತ್ತಿದ್ದು ನಗರದ ಮಕ್ಕಳ ಆಸ್ಪತ್ರೆಗಳಲ್ಲಿ ಇನ್ಫ್ಲುಯೆನ್ಜ ಲಸಿಕೆಗೆ ಬಾರಿ ಬೇಡಿಕೆ ಬಂದಿದೆ. ಫ್ಲೂ ಶಾಟ್ ಲಸಿಕೆಯನ್ನು ತಮ್ಮ ಮಕ್ಕಳಿಗೆ ಹಾಕಿಸಲು ಪೋಷಕರು ಮುಗಿಬಿದ್ದಿದ್ದಾರೆ.
ಈ ಲಸಿಕೆಯನ್ನ ವರ್ಷಕ್ಕೆ ಒಂದು ಬಾರಿ ಮಕ್ಕಳಿಗೆ ಹಾಕಬಹುದಾಗಿದ್ದು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡಲಿದೆ. ಹೀಗಾಗಿ ಪೋಷಕರು ಫ್ಲೋ ಶಾಟ್ ಲಸಿಕೆಯ ಮೊರೆ ಹೋಗುತ್ತಿದ್ದಾರೆ. ಇನ್ನು ಇನ್ಫ್ಲುಯೆನ್ಜ ಸೋಂಕು ಮಳೆಯ ಆರಂಭ ಅಥವಾ ಆರಂಭದ ನಂತರ ಹೆಚ್ಚು ಕಾಣಿಸಿಕೊಳ್ಳಬಹುದಾಗಿದ್ದು ಆರಂಭದಲ್ಲಿ ಜ್ವರ, ಕೆಮ್ಮು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಶ್ವಾಸಕೋಶದ ಮೇಲೂ ಹೆಚ್ಚು ಪರಿಣಾಮ ಬೀರಲಿದೆ. ಅಲ್ಲದೇ ಇದರ ಎಫೆಕ್ಟ್ ದೊಡ್ಡ ಪ್ರಮಾಣದಲ್ಲಿ ಬೀರಲಿದೆ. ಅಲ್ಲದೇ ಇನ್ಫ್ಲುಯೆನ್ಜ ಸೋಂಕು ಬೇಗ ರೂಪಾಂತರವಾಗಲಿದ್ದು, ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಪೋಷಕರಿಗೆ ಈ ಲಸಿಕೆ ನೀಡುವಂತೆ ವೈದ್ಯರು ಗೈಡ್ ಮಾಡುತ್ತಿದ್ದಾರೆ. ಶಾಲೆ ಆರಂಭಕ್ಕೂ ಮೊದಲೇ ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಮುಂದಾಗಿದ್ದಾರೆ.
ಇದನ್ನೂ ಓದಿ: H3N2 Influenza A Virus: H3N2 ವೈರಸ್‌ನ ರೋಗ ಲಕ್ಷಣ, ಚಿಕಿತ್ಸೆ, ಜತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಯಾವುವು?
ಇನ್ಫ್ಲುಯೆನ್ಜವು ಉಸಿರಾಟದ ವ್ಯವಸ್ಥೆಯ ಭಾಗವಾಗಿರುವ ಮೂಗು, ಗಂಟಲು ಮತ್ತು ಶ್ವಾಸಕೋಶದ ಸೋಂಕಾಗಿದೆ. ಈ ಸೋಂಕಿನಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳು ತಾವಾಗಿಯೇ ಗುಣಮುಖರಾಗುತ್ತಾರೆ. ಆದರೆ ಕೆಲವೊಮ್ಮೆ, ಇನ್ಫ್ಲುಯೆನ್ಜ ಮತ್ತು ಅದರ ತೊಡಕುಗಳು ಮಾರಣಾಂತಿಕವಾಗಬಹುದು.
ರೋಗ ಲಕ್ಷಣಗಳು
ಮೊದಲಿಗೆ, ಜ್ವರ ಬರುತ್ತದೆ. ಬಳಿಕ ನೆಗಡಿಯಾಗಿ ಮೂಗು ಸೋರುವುದು, ಸೀನುವಿಕೆ ಮತ್ತು ಗಂಟಲು ಕಿರಿಕಿರಿಯೊಂದಿಗೆ ಸಾಮಾನ್ಯ ಶೀತದಂತೆ ಭಾಸವಾಗುತ್ತೆ. ಬಳಿಕ ದಿನೇ ದಿನೇ ಜ್ವರ ಹೆಚ್ಛಾಗುತ್ತೆ. ಜ್ವರ, ಸ್ನಾಯು ಸೆಳೆತ, ಚಳಿ ಮತ್ತು ಬೆವರುವಿಕೆ, ತಲೆನೋವು, ನಿರಂತರ ಒಣ ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ದೌರ್ಬಲ್ಯ, ಗಂಟಲು ಕೆರತ, ಶೀತ, ಕಣ್ಣಿನ ನೋವು, ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳು ಕಂಡು ಬರುತ್ತವೆ. ಈ ರೋಗ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ