ಲಾಕ್ಡೌನ್ ವೇಳೆ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ಮೊತ್ತ 15 ಲಕ್ಷ ರೂ; ಹಸುಗಳಿಗೆ ಮೇವು ಪೂರೈಕೆ ಮೊತ್ತ 3 ಲಕ್ಷ ರೂ: ಬಿಬಿಎಂಪಿ
ಬಿಬಿಎಂಪಿ ನೀಡಿರುವ ಸಮರ್ಥನೆ ಪ್ರಕಾರ ಬೆಂಗಳೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿದ್ದು, ಅವುಗಳಿಗೆ ದಿನಕ್ಕೆ 250 ಗ್ರಾಂ ಬೇಯಿಸಿದ ಮಾಂಸದಂತೆ ಊಟ ಒದಗಿಸಲಾಗಿದೆಯಂತೆ. ಒಟ್ಟು ಮೂರು ಲಕ್ಷ ನಾಯಿಗಳಿಗೆ ಲಾಕ್ಡೌನ್ ಅವಧಿಯಲ್ಲಿ ಆಹಾರ ನೀಡಿದ ಮೊತ್ತ 15 ಲಕ್ಷ ರೂಪಾಯಿ ಆಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.
ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಹೇರಿದ ಲಾಕ್ಡೌನ್ ಮನುಷ್ಯರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆಯೋ ಅಷ್ಟೇ ತೊಂದರೆಯನ್ನು ಮನುಷ್ಯರನ್ನು ಅವಲಂಬಿಸಿ ಬದುಕುವ ಮೂಕ ಪ್ರಾಣಿಗಳಿಗೂ ಉಂಟುಮಾಡಿದೆ. ಹೋಟೆಲ್, ಬೀದಿ ಬದಿ ಅಂಗಡಿಗಳು ಅಥವಾ ಕೆಲ ಮನೆಯವರು ನೀಡುತ್ತಿದ್ದ ಆಹಾರವನ್ನೇ ನಂಬಿಕೊಂಡು ಬದುಕಿದ್ದ ಬೀದಿನಾಯಿ, ಬೀದಿ ಹಸುಗಳು ಲಾಕ್ಡೌನ್ ಸಂದರ್ಭದಲ್ಲಿ ಹಸಿವಿನಿಂದ ನರಳಾಡಿವೆ. ಇದನ್ನು ನೋಡಲಾಗದೇ ಕೆಲ ಸ್ವಯಂಸೇವಕರು ತಾವೇ ಮುಂದೆ ನಿಂತು ಅವುಗಳಿಗೆ ಆಹಾರ ಒದಗಿಸಿದ್ದಾರೆ ಕೂಡಾ. ಆದರೆ, ಈ ಬಾರಿಯ ಲಾಕ್ಡೌನ್ ಸಂದರ್ಭದಲ್ಲಿ ಬೀದಿ ಪ್ರಾಣಿಗಳ ಹಸಿವು ನೀಗಿಸಿದ ವೆಚ್ಚ ಎಂದು ಬಿಬಿಎಂಪಿ ಬಿಡುಗಡೆ ಮಾಡಿರುವ ಬಿಲ್ ಎಲ್ಲರ ಹುಬ್ಬೇರುವಂತೆ ಮಾಡಿ ಅನುಮಾನಕ್ಕೂ ಕಾರಣವಾಗಿದೆ.
ಲಾಕ್ಡೌನ್ನಲ್ಲಿ ಬೆಂಗಳೂರಿನಲ್ಲಿರುವ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ವೆಚ್ಚ ಎಂದು ಬಿಬಿಎಂಪಿ 15 ಲಕ್ಷ ರೂಪಾಯಿ ಬಿಲ್ ಮಾಡಿದೆ. ಇತ್ತ ಅನಾಥ ಹಸುಗಳ ಹಸಿವು ನೀಗಿಸಿದ ವೆಚ್ಚ ಎಂದು 3 ಲಕ್ಷ ರೂಪಾಯಿ ಬಿಲ್ ಮಾಡಿದೆ. ಸದ್ಯ ಈ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆಯೇ ಇಷ್ಟೊಂದು ಮೊತ್ತವನ್ನು ಬಿಬಿಎಂಪಿ ನಿಜವಾಗಿಯೂ ವ್ಯಯಿಸಿದೆಯಾ ಎನ್ನುವ ಅನುಮಾನ ಮೂಡಿದೆ.
ಆದರೆ, ಬಿಬಿಎಂಪಿ ನೀಡಿರುವ ಸಮರ್ಥನೆ ಪ್ರಕಾರ ಬೆಂಗಳೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿದ್ದು, ಅವುಗಳಿಗೆ ದಿನಕ್ಕೆ 250 ಗ್ರಾಂ ಬೇಯಿಸಿದ ಮಾಂಸದಂತೆ ಊಟ ಒದಗಿಸಲಾಗಿದೆಯಂತೆ. ಒಟ್ಟು ಮೂರು ಲಕ್ಷ ನಾಯಿಗಳಿಗೆ ಲಾಕ್ಡೌನ್ ಅವಧಿಯಲ್ಲಿ ಆಹಾರ ನೀಡಿದ ಮೊತ್ತ 15 ಲಕ್ಷ ರೂಪಾಯಿ ಆಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.
ಅನಾಥ ಹಸುಗಳ ವಿಚಾರಕ್ಕೆ ಬಂದರೆ ಬಿಬಿಎಂಪಿ ಹೇಳಿರುವ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು 800ಕ್ಕೂ ಹೆಚ್ಚು ಅನಾಥ ಹಸುಗಳಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಅವುಗಳಿಗೆ ಮೇವು ಒದಗಿಸಿದ ಮೊತ್ತ 3 ಲಕ್ಷ ರೂಪಾಯಿ ಆಗಿದೆ ಎನ್ನಲಾಗಿದೆ. ಅಲ್ಲದೇ ಈ ಕಾರ್ಯಕ್ಕೆ ಖಾಸಗಿ ಸಂಸ್ಥೆಗಳು ಕೂಡಾ ಕೈ ಜೋಡಿಸಿದ್ದು, ಕೆಲವೆಡೆ ಖಾಸಗಿಯವರ ಸಹಾಕರದೊಂದಿಗೆ ಹಸು ಹಾಗೂ ನಾಯಿಗಳಿಗೆ ಆಹಾರ ಒದಗಿಸಲಾಗಿದೆ ಎಂದು ತಿಳಿಸಲಾಗಿದೆ.
ಆದರೆ, ಈ ದೊಡ್ಡ ಮೊತ್ತವನ್ನು ನಿಜವಾಗಿಯೂ ಮೂಕ ಪ್ರಾಣಿಗಳ ಹಸಿವು ನೀಗಿಸಲೆಂದೇ ಖರ್ಚು ಮಾಡಲಾಗಿದೆಯಾ? ಇಲ್ಲವೇ ಅವುಗಳ ಹೊಟ್ಟೆ ತುಂಬಿಸುವ ಹೆಸರಲ್ಲಿ ಬೇರೆಡೆಗೆ ಹೋಗಿದೆಯಾ? ಎಂದು ಎದ್ದಿರುವ ಅನುಮಾನಕ್ಕೆ ಸ್ಪಷ್ಟ ಉತ್ತರ ನೀಡುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ.