ಕೂಡಲೇ ಕರ್ನಾಟಕ ಬಿಜೆಪಿಯ ಅನಿಮೇಟೆಡ್ ವಿಡಿಯೋ ಡಿಲೀಟ್ ಮಾಡಿ; ಎಕ್ಸ್ಗೆ ಚುನಾವಣಾ ಆಯೋಗ ಸೂಚನೆ
ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿಯ ಕರ್ನಾಟಕ ಘಟಕ ಹಂಚಿಕೊಂಡಿದ್ದ ಅನಿಮೇಟೆಡ್ ವಿಡಿಯೋವನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ಗೆ (ಟ್ವಿಟ್ಟರ್) ಸೂಚಿಸಿದೆ.
ಬೆಂಗಳೂರು: ಬಿಜೆಪಿಯ ಕರ್ನಾಟಕ ಘಟಕವು (Karnataka BJP) ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ (Social Media X) ಹಂಚಿಕೊಂಡಿರುವ ಮುಸ್ಲಿಂ ಮೀಸಲಾತಿ ಕುರಿತಾದ ಅನಿಮೇಟೆಡ್ ವಿಡಿಯೋ ಕಾನೂನು ಚೌಕಟ್ಟನ್ನು ಉಲ್ಲಂಘಿಸುತ್ತದೆ. ಹೀಗಾಗಿ, ಕೂಡಲೇ ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗ (Election Commission) ಎಕ್ಸ್ಗೆ ಸೂಚನೆ ನೀಡಿದೆ. ಈ ಬಗ್ಗೆ ಬಿಜೆಪಿಗೆ ಈ ಹಿಂದೆ ಸೂಚನೆ ನೀಡಲಾಗಿದ್ದರೂ ಆ ವಿಡಿಯೋವನ್ನು ಡಿಲೀಟ್ ಮಾಡದ ಹಿನ್ನೆಲೆಯಲ್ಲಿ ನೇರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ಗೆ ಪತ್ರ ಬರೆಯಲಾಗಿದೆ.
ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಪೋಸ್ಟ್ ಅನ್ನು ತೆಗೆದುಹಾಕಲು ಭಾರತದ ಚುನಾವಣಾ ಆಯೋಗವು ಎಕ್ಸ್ (ಹಿಂದಿನ ಟ್ವಿಟರ್)ಗೆ ನಿರ್ದೇಶಿಸಿದೆ. ಆ ವಿಡಿಯೋ ಮುಸ್ಲಿಂ ಸಮುದಾಯದ ಕಡೆಗೆ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರುತ್ತಿದೆ ಎಂದು ಸೂಚಿಸುವ ಅನಿಮೇಷನ್ ಅನ್ನು ಒಳಗೊಂಡಿತ್ತು. ಬಿಜೆಪಿ ವಿರುದ್ಧ ಕಾಂಗ್ರೆಸ್ ಕೂಡ ಎಫ್‌ಐಆರ್ ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ವಿಡಿಯೋದಲ್ಲಿ ಏನಿತ್ತು?:
ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದ ಅನಿಮೇಷನ್ ವಿಡಿಯೋದಲ್ಲಿ ಒಂದು ಗೂಡಿನಲ್ಲಿ 3 ಮೊಟ್ಟೆಗಳಿರುತ್ತವೆ. ಆ ಮೊಟ್ಟೆಗಳನ್ನು SC, ST ಮತ್ತು OBC ಎಂದು ಟ್ಯಾಗ್ ಮಾಡಲಾಗಿದೆ. ಮುಸ್ಲಿಮರನ್ನು ಪ್ರತಿನಿಧಿಸುವ ಮತ್ತೊಂದು ಮೊಟ್ಟೆಯನ್ನು ಆ ಗೂಡಿಗೆ ಸೇರಿಸಲಾಗುತ್ತದೆ. ಆ ಮೊಟ್ಟೆಯೊಡೆದ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಕೋಳಿಗೆ ಮಾತ್ರ ಆಹಾರ ನೀಡುತ್ತಿರುವುದು ಒಂದು ಸಮುದಾಯದ ಕಡೆಗೆ ಒಲವು ತೋರುತ್ತಿದೆ ಎಂಬುದರ ಸಂಕೇತವಾಗಿತ್ತು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ರಾಜ್ಯ ಬಿಜೆಪಿ ನಾಯಕರಿದ್ದಾರೆ: ರವಿಕುಮಾರ್ ಗಣಿಗ, ಶಾಸಕ
ಈ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಮತ್ತು ರಾಜ್ಯ ಮುಖ್ಯಸ್ಥ ಬಿ.ವೈ ವಿಜಯೇಂದ್ರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರನ್ನು ಬೆದರಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಹೇಳಲು ಈ ರೀತಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
India Election Commission orders X to delete post by PM Modi’s ruling party that showed Congress feeding a bird representing Muslims, which then removes three other birds representing disadvantaged groups from a nest. The video has 9 million plus views. pic.twitter.com/OKVgC6xa2x
— Aditya Kalra (@adityakalra) May 7, 2024
ಬಿಜೆಪಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವ ಉದ್ದೇಶವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದ ಪರವಾಗಿದೆ ಎಂದು ಬಿಂಬಿಸುವ ಮೂಲಕ ಮತ ಕೇಳುವುದಾಗಿದೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಹೇಳಿಕೊಂಡಿತ್ತು.
ಏಪ್ರಿಲ್‌ನಲ್ಲಿ ಕೂಡ ಕರ್ನಾಟಕ ಕಾಂಗ್ರೆಸ್ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ‘ಕಾಂಗ್ರೆಸ್ ಪ್ರಣಾಳಿಕೆ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆ’ ಎಂಬ ಶೀರ್ಷಿಕೆಯಲ್ಲಿ ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಕಾಂಗ್ರೆಸ್ ದೂರು ದಾಖಲಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಪ್ರಾಯೋಜಕತ್ವದೊಂದಿಗೆ ಡ್ರೈವರ್ ಕಾರ್ತೀಕ್ ವಿದೇಶದಲ್ಲಿ ಮಜಾ ಮಾಡುತ್ತಿದ್ದಾನೆ: ಆರ್ ಅಶೋಕ
ಇದೀಗ ಎಕ್ಸ್ಗೆ ಪತ್ರ ಬರೆದಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ) ಬಿಜೆಪಿಯ ಕರ್ನಾಟಕ ಘಟಕವು ಹಂಚಿಕೊಂಡಿರುವ “ಆಕ್ಷೇಪಾರ್ಹ ಪೋಸ್ಟ್” ಅನ್ನು ತಕ್ಷಣವೇ ತೆಗೆದುಹಾಕುವಂತೆ ಕೇಳಿದೆ. ‘ಬಿಜೆಪಿ4ಕರ್ನಾಟಕ’ ಪೋಸ್ಟ್ ಕಾನೂನು ಚೌಕಟ್ಟಿನ ಉಲ್ಲಂಘನೆಯಾಗಿದೆ ಎಂದು ತಿಳಿಸಲು ನನಗೆ ಸೂಚಿಸಲಾಗಿದೆ. ಈ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಸೈಬರ್ ಕ್ರೈಂ ವಿಭಾಗ, ಬೆಂಗಳೂರು ಮೂಲಕ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ನಿಮ್ಮ ಗಮನಕ್ಕೆ ತರಲಾಗಿದೆ. ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಈಗಾಗಲೇ 05.05.2024ರಂದು ಎಕ್ಸ್ಗೆ ನಿರ್ದೇಶನ ನೀಡಿದ್ದರೂ, ಆ ಪೋಸ್ಟ್ ಅನ್ನು ಇನ್ನೂ ತೆಗೆದುಹಾಕಲಾಗಿಲ್ಲ”ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 pm, Tue, 7 May 24