ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ರಿಲ್ಯಾಕ್ಸ್ ಮೂಡ್ಗೆ ಜಾರಿದ ಸಿದ್ದು-ಡಿಕೆಶಿ: ಹೋಗಿದ್ದೆಲ್ಲಿಗೆ?
ಇಂದಿಗೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಿದೆ. ನಿರಂತರ ಎಲೆಕ್ಷನ್ ಸಮಾವೇಶ, ರ್ಯಾಲಿ, ಕ್ಯಾಂಪೇನ್ಗಳಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಹೌದು...ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲು ಪ್ರತ್ಯೇಕವಾಗಿ ರೆಸಾರ್ಟ್ಗೆ ತೆರಳಿದ್ದಾರೆ.
ಬೆಂಗಳೂರು, (ಮೇ.07): ಕರ್ನಾಟಕದಲ್ಲಿ(Karnataka) ನಡೆದ ಎರಡು ಹಂತ ಲೋಕಸಭಾ ಚುನಾವಣೆ (Loksabha Elections 2024) ಇಂದಿಗೆ ಮುಕ್ತಾಯವಾಗಿದೆ. ಈ ಬಾರಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಪಣತೊಟ್ಟಿದ್ದ ಕಾಂಗ್ರೆಸ್ (Congress) ತಮ್ಮ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರಚಾರ ನಡೆಸಿದೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DJ Shivakumar) ಅವರು ನಿರಂತರವಾಗಿ ಎಲೆಕ್ಷನ್ ಸಮಾವೇಶ, ರ್ಯಾಲಿ, ಕ್ಯಾಂಪೇನ್ಗಳಲ್ಲಿ ಭಾಗಿಯಾಗಿದ್ದರು. ಕಳೆದ ಎರಡೂ ತಿಂಗಳಿನಿಂದ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದ ಮೂಲೆ-ಮೂಲೆಗೆ ತೆರಳಿ ತಮ್ಮ ಅಭ್ಯರ್ಥಿಗಳ ಪ್ರಚಾರ ಮಾಡಿದ್ದಾರೆ. ಇದೀಗ ಚುನಾವಣೆ ಮುಗಿಯುತ್ತಿದ್ದಂತೆಯೇ ಉಭಯ ನಾಯಕರು ವಿಶಾಂತ್ರಿಗೆ ಜಾರಿದ್ದಾರೆ. ಹೌದು..ಡಿಸಿಎಂ ಡಿಕೆ ಶಿವಕುಮಾರ್ ಚಿಕ್ಕಮಗಳೂರಿನ ರೆಸಾರ್ಟ್ವೊಂದಕ್ಕೆ ಹೋಗಿದ್ದರೆ, ಸಿದ್ದರಾಮಯ್ಯ ಊಟಿಯತ್ತ ಮುಖ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಡಿಕೆ ಶಿವಕುಮಾರ್ ಕುಟುಂಬ ವಾಸ್ತವ್ಯ
ನಿರಂತರ ಸಮಾವೇಶ, ರ್ಯಾಲಿ, ಪ್ರಚಾರದಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಅವರು ಇದೀಗ ವಿಶಾಂತ್ರಿ ಭಯಸಿದ್ದಾರೆ. ಆದ್ರೆ, ಅವರ ಮೇಲೆ ಹಾಸನ ಪೆನ್ಡ್ರೈವ್ ಬಿಡುಗಡೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಡಿಕೆ ಶಿವಕುಮಾರ್ ಮೇಲೆ ಮುಗಿಬಿದ್ದಿದ್ದಾರೆ. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ಡಿಕೆಶಿ ಕುಟುಂಬ ಸಮೇತ ರೆಸಾರ್ಟ್ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರಿನ ಸಾರಾಯ್ ರೆಸಾರ್ಟ್ನಲ್ಲೇ ಡಿಕೆಶಿ ಕುಟುಂಬ ವಾಸ್ತವ್ಯ ಹೂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಸೋದರ ಡಿ.ಕೆ.ಸುರೇಶ್, ಶಾಸಕರಾದ ಡಾ.ರಂಗನಾಥ್, ಇಕ್ಬಾಲ್ ಹುಸೇನ್ ಕೂಡ ರೆಸಾರ್ಟ್ಗೆ ತಂಗಿದ್ದಾರೆ. ಸೆರಾಯ್ ರೆಸಾರ್ಟ್ ಡಿ.ಕೆ.ಶಿವಕುಮಾರ್ ಅಳಿಯ ಅಮಾರ್ತ್ಯ ಒಡೆತನದಾಗಿದ್ದು, ನಾಳೆ(ಮೆ 08) ಸಂಜೆವರೆಗೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.
ಸೆರಾಯ್ ರೆಸಾರ್ಟ್ ಬಿಗಿ ಭದ್ರತೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹಾಸನ ಪೆನ್ಡ್ರೈವ್ ಆರೋಪ ಕೇಳಿಬಂದಿದೆ. ಹೀಗಾಗಿ ಜೆಡಿಎಸ್ ನಾಯಕರು, ಕಾರ್ಯಕರ್ತರು ಡಿಕೆಶಿ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಇದರ ಮಧ್ಯೆ ಡಿಕೆ ಶಿವಕುಮಾರ್ ರೆಸಾರ್ಟ್ನಲ್ಲಿ ವಿಶ್ರಾಂತಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಚಿಕ್ಕಮಗಳೂರು ತಾಲೂಕಿನ ಮೂಕ್ತಿಹಳ್ಳಿ ಬಳಿಯ ಸೆರಾಯ್ ರೆಸಾರ್ಟ್ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಓರ್ವ DySP, ಇನ್ಸ್ಪೆಕ್ಟರ್ ಸೇರಿ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೆಸಾರ್ಟ್ ನೊಳಗೆ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಕಾಂಗ್ರೆಸ್ ಶಾಸಕರು ಸೇರಿದಂತೆ ಮುಖಂಡರ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ.
ಊಟಿಯತ್ತ ಸಿದ್ದರಾಮಯ್ಯ ಚಿತ್ತ
ಸದ್ಯ ರಾಜ್ಯದಲ್ಲಿ ಲೋಕಸಭಾ ಮತದಾನ ಇಂದಿಗೆ ಅಂತ್ಯವಾಗಿದೆ. ಜೂನ್ 4 ರಂದು ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಡಲಿದೆ. ಹಾಸನ ಅಶ್ಲೀಲ ವಿಡಿಯೋ ಪ್ರಕರಣ, ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಕಾಂಗ್ರೆಸ್- ಜೆಡಿಎಸ್ ಮಧ್ಯೆ ವಾಕ್ಸಮರ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಕ್ಕೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಇನ್ನು ವಿಡಿಯೋಗಳನ್ನ ರಿಲೀಸ್ ಮಾಡಿರೋದು ಡಿಸಿಎಂ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಎಲ್ಲ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದ್ದರು ಸಿಎಂ ಸಿದ್ದರಾಮಯ್ಯ, ಇವುಗಳಿಗೆ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ವಿಶ್ರಾಂತಿಗೆ ಹೋಗಿದ್ದಾರೆ. ಸಚಿವ ಹೆಚ್.ಸಿ ಮಹದೇವಪ್ಪ ಜೊತೆ 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ಊಟಿಗೆ ತೆರಳುತ್ತಿದ್ದಾರೆ. ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಬಳಿಕ ಮೈಸೂರಿನಿಂದ ಊಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ತೆರಳಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ