ಗ್ರಾಮ ಪಂಚಾಯತಿ ಎಲೆಕ್ಷನ್​ನಲ್ಲಿ ಅವಿರೋಧವಾಗಿ ಆಯ್ಕೆಯಾದವರಿಗೆ ಶುರುವಾಯ್ತು ಢವ ಢವ

ವಿವಿಧ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳು ಹರಾಜು-ಆಮಿಷಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ ಅಂತಹ ಸದಸ್ಯ ಸ್ಥಾನಗಳ ಅಸಿಂಧುಗೊಳಿಸುತ್ತಿದೆ.

ಗ್ರಾಮ ಪಂಚಾಯತಿ ಎಲೆಕ್ಷನ್​ನಲ್ಲಿ ಅವಿರೋಧವಾಗಿ ಆಯ್ಕೆಯಾದವರಿಗೆ ಶುರುವಾಯ್ತು ಢವ ಢವ
ಮತ ಚಲಾವಣೆ
sandhya thejappa

|

Dec 22, 2020 | 4:21 PM

ಕೊಪ್ಪಳ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆ ಅವಿರೋಧವಾಗಿ ಆಯ್ಕೆಯಾದವರಿಗೆ ಸಂಕಟ ಎದುರಾಗಿದೆ. ಇದೀಗ ಜಿಲ್ಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರ ವಿರುದ್ದ ಅನಾಮಧೇಯ ದೂರು ಬಂದಿದ್ದು, AC ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

ವಿವಿಧ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳು ಹರಾಜು-ಆಮಿಷಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಹ ಸದಸ್ಯ ಸ್ಥಾನಗಳನ್ನು ಅಸಿಂಧುಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಸಹ ಈಗಾಗಲೇ ಅವಿರೋಧವಾಗಿ ಆಯ್ಕೆಯಾದ ಸದಸ್ಯ ಸ್ಥಾನಗಳ ಹರಾಜು-ಆಮಿಷದ ಬಗ್ಗೆ ಪುನಃ ಪರಿಶೀಲಿಸಲು AC ನೇತೃತ್ವದ ಸಮಿತಿ ರಚನೆಯಾಗಿದೆ.

ಅವಿರೋಧ ಆಯ್ಕೆಯಾದ ಸ್ಥಾನಗಳ ಬಗ್ಗೆ ಜಿಲ್ಲಾಡಳಿತ ಗಮನ ಜಿಲ್ಲೆಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಸುವ ಮೊದಲೇ ದೇವಸ್ಥಾನಗಳಿಗೆ ದೇಣಿಗೆ ನೀಡುವ ಅಭ್ಯರ್ಥಿ ಅಥವಾ ದೇವಸ್ಥಾನ ಜೀರ್ಣೋದ್ಧಾರ ಮಾಡುವಂಥ ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಮಾಡುವ ಮಾತು ಕೇಳಿ ಬಂದಿದ್ದವು. ಇದರಂತೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಹಾಗೂ ಯಲಬುರ್ಗಾ ತಾಲೂಕಿನ ಕೆಲವು ಗ್ರಾಮ ಪಂಚಾಯತಿಯಲ್ಲಿ ಮೀಸಲಾತಿ ಅನುಸಾರ ಸ್ಫರ್ಧೆಗೆ ಇಂಗಿತ ವ್ಯಕ್ತಪಡಿಸಿದ ಅಭ್ಯರ್ಥಿಗಳಿಂದ ದೇವಸ್ಥಾನದ ಹುಂಡಿಯ ಹೆಸರಲ್ಲಿ ಅವಿರೋಧ ಆಯ್ಕೆಯ ಕುರಿತು ಚರ್ಚೆಗಳು ಜೋರಾಗಿ ಕೇಳಿ ಬಂದಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಾಗಾಗಿ, ಅವಿರೋಧ ಆಯ್ಕೆಯಾದ ಸ್ಥಾನಗಳ ಬಗ್ಗೆ ಜಿಲ್ಲಾಡಳಿತವು ಹೆಚ್ಚಿನ ನಿಗಾ ವಹಿಸಿದೆ.

ಸದಸ್ಯ ಸ್ಥಾನವನ್ನೇ ಅಸಿಂಧುಗೊಳಿಸುತ್ತಿರುವ ರಾಜ್ಯ ಚುನಾವಣಾ ಆಯೋಗ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 73 ಗ್ರಾಮ ಪಂಚಾಯತಿಯ 1,321 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಪೈಕಿ 111 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಇನ್ನೂ 1,210 ಸದಸ್ಯ ಸ್ಥಾನಗಳಿಗೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗಿದ್ದು, 3,331 ಜನರು ಅಂತಿಮವಾಗಿ ಕಣದಲ್ಲಿದ್ದಾರೆ. 2ನೇ ಹಂತದ ಚುನಾವಣೆಯಲ್ಲಿ 169 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1,206 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿವೆ. ಈ ಮಧ್ಯೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳು ನಾಮಪತ್ರ ಸಲ್ಲಿಸುವ ಹಂತದಲ್ಲಿ ಹರಾಜು ಹೆಸರಲ್ಲಿ ಹಂಚಿಕೆಯಾಗುತ್ತಿರುವ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಹರಾಜು-ಆಮಿಷ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂತಹ ಸದಸ್ಯ ಸ್ಥಾನವನ್ನೇ ಅಸಿಂಧುಗೊಳಿಸುತ್ತಿವೆ.

ಇದೆಲ್ಲವನ್ನು ಗಮನಿಸಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಈಗಾಗಲೇ ಅವಿರೋಧ ಆಯ್ಕೆಯಾದ ಸದಸ್ಯರ ಮೇಲೆ ನಿಗಾವಹಿಸಿದ್ದಾರೆ. ಅಭ್ಯರ್ಥಿಯು ಜನತೆಗೆ ಹಣದ ಆಮಿಷ ಒಡ್ಡಿದ್ದಾರಾ? ದೇವಸ್ಥಾನಗಳಿಗೆ ಏನಾದರೂ ಕಾಣಿಕೆ ನೀಡಿದ್ದಾರಾ? ಎನ್ನುವ ವಿಷಯದ ಕುರಿತು ಜನರಿಂದಲೇ ಪುನಃ ಮಾಹಿತಿ ಪಡೆದು ಪಾರದರ್ಶಕವಾಗಿ ಪರಿಶೀಲಿನಾ ವರದಿ ಸಲ್ಲಿಸುವಂತೆ AC ನೇತೃತ್ವದ ಸಮಿತಿ ರಚಿಸಿದ್ದಾರೆ. ಹೀಗಾಗಿ AC ಸ್ಥಳೀಯ ಚುನಾವಣಾಧಿಕಾರಿಗಳ ನೇತೃತ್ವದ ತಂಡದೊಂದಿಗೆ ಅವಿರೋಧ ಆಯ್ಕೆಯಾದ ಸ್ಥಾನಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ವರದಿ ಬಂದ ಬಳಿಕ ಚುನಾವಣಾ ಆಯೋಗಕ್ಕೆ ಅದನ್ನು ಸಲ್ಲಿಸಿದ ನಂತರ ಅವಿರೋಧ ಸ್ಥಾನ ಘೋಷಣೆ ಮಾಡಲು ಚಿಂತನೆ ನಡೆಸಿದ್ದಾರೆ.

ಕೆಲವು ಗ್ರಾಮ ಪಂಚಾಯತಿ ಸ್ಥಾನಗಳ ಹರಾಜು-ಆಮಿಷದ ಕುರಿತಂತೆ ಅನಾಮಧೇಯ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸದಸ್ಯ ಸ್ಥಾನಗಳ ಕುರಿತು ಪುನಃ ಪರಿಶೀಲನೆ ನಡೆಸಿ ವರದಿ ನೀಡುವಂತೆ ಎಸಿ ನೇತೃತ್ವದಲ್ಲಿ ಸಮಿತಿಗೆ ಸೂಚಿಸಿದ್ದೇನೆ. ಸಮಿತಿ ವರದಿ ಅನುಸಾರ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ತಿಳಿಸಿದರು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಸ್ಪರ್ಧೆ; ಕೆಳಹಂತದ ಅಖಾಡಕ್ಕಿಳಿಯಲೇನು ಕಾರಣ?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada