ವಸೂಲಿ ದಂಧೆ: ತಿಹಾರ್ ಜೈಲಿನಲ್ಲಿದ್ದುಕೊಂಡೇ 200 ಕೋಟಿ ಹಣ ವಸೂಲಿ ಮಾಡಿದ ಸುಕೇಶ್ ಚಂದ್ರಶೇಖರ್
ಇವನ ಐಷಾರಾಮಿ ಬಂಗಲೆ, ಕಾರುಗಳನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರು: ಸುಕೇಶ್ ಚಂದ್ರಶೇಖರ್ ಎಂಬಾತ ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ಗಣ್ಯ ವ್ಯಕ್ತಿಗಳು, ಉದ್ಯಮಿಗಳನ್ನು ಬೆದರಿಸಿ ₹ 200 ಕೋಟಿ ವಸೂಲಿ ಮಾಡಿದ್ದಾನೆ. ಇವನ ವಂಚನೆಯ ಕಥೆ ಕೇಳಿ ದೆಹಲಿ ಪೊಲೀಸರೇ ದಂಗಾಗಿದ್ದಾರೆ. ಈಗ ಇವನ ಐಷಾರಾಮಿ ಬಂಗಲೆ, ಕಾರುಗಳನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ ₹200 ಕೋಟಿಯನ್ನು ಜನರಿಗೆ ಬ್ಲ್ಯಾಕ್ಮೇಲ್ ಮೂಲಕ ವಸೂಲಿ ಮಾಡಿದ್ದಾನೆ. ಈತನ ವಸೂಲಿ ದಂಧೆ ಕೇಳಿ ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ದಂಗಾಗಿದ್ದಾರೆ. ಇಷ್ಟಕ್ಕೂ ಈತ ಯಾವುದೋ ಮನೆಯಲ್ಲೋ, ಐಷಾರಾಮಿ ಹೊಟೆಲ್ನಲ್ಲೋ ಕುಳಿತು ಜನರಿಗೆ ಮಂಕುಬೂದಿ ಎರಚಿ ಹಣ ವಸೂಲಿ ಮಾಡಿಲ್ಲ. ಬದಲಿಗೆ ಜೈಲು ಅಧಿಕಾರಿಗಳ ಸರ್ಪಗಾವಲಿನಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ₹ 200 ಕೋಟಿ ಹಣವನ್ನು ಬೆದರಿಕೆ ಮೂಲಕ ವಸೂಲಿ ಮಾಡಿದ್ದಾನೆ. ಈತನ ಬೆದರಿಕೆಗೆ ಹೆದರಿ ದೊಡ್ಡದೊಡ್ಡ ಉದ್ಯಮಿಗಳು, ಶ್ರೀಮಂತರೇ ಜೈಲು ಹೊರಗಿರುವ ಈತನ ಸಹಚರರಿಗೆ ಕೋಟಿಗಟ್ಟಲೇ ಹಣ ನೀಡಿ ಇಂಗು ತಿಂದ ಮಂಗನಂತಾಗಿದ್ದಾರೆ.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ, ಬೆಂಗಳೂರಿನ ಹೃದಯಭಾಗದ ಪ್ರತಿಷ್ಠಿತ ಶಾಲೆಗಳಲ್ಲಿ ಓದಿದವ ಸುಕೇಸ್. ಶ್ರೀಮಂತನಾಗಬೇಕೆಂಬ ಹುಚ್ಚು ಬಾಲ್ಯದಿಂದಲೇ ಇವನಿಗಿತ್ತು. ಶ್ರೀಮಂತನಾಗಲು, ಐಷಾರಾಮಿ ಜೀವನ ನಡೆಸಲು ಈತ ಆಯ್ಕೆ ಮಾಡಿಕೊಂಡ ಮಾರ್ಗ ಕೆಟ್ಟದ್ದಾಗಿತ್ತು.
2017ರಲ್ಲೇ ದೆಹಲಿ ಪೊಲೀಸರಿಂದ ಬಂಧನ ಸುಕೇಶ್ ಚಂದ್ರಶೇಖರ್ ಹೆಸರು ದೆಹಲಿ ಪೊಲೀಸರಿಗೆ ಹೊಸದೇನೂ ಅಲ್ಲ. ನಾಲ್ಕು ವರ್ಷಗಳ ಹಿಂದೆಯೇ ದೆಹಲಿ ಪೊಲೀಸರು ಈತನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳಿಸಿದ್ದರು. ಆ ಪ್ರಕರಣವೂ ರೋಚಕ. ತಮಿಳುನಾಡಿನ ಟಿಟಿವಿ ದಿನಕರನ್ಗೆ ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಯಾದ ಎರಡೆಲೆ ಚಿಹ್ನೆಯನ್ನು ನಿಮ್ಮ ಬಣಕ್ಕೆ ಕೊಡಿಸುತ್ತೇನೆ. ಕೇಂದ್ರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ಸಂಪರ್ಕವಿದೆ. ಅವರ ಮೂಲಕ ನಿಮ್ಮ ರಾಜಕೀಯ ಪಕ್ಷದ ಬಣಕ್ಕೆ ಎರಡೆಲೆ ಚಿಹ್ನೆ ಸಿಗುವಂತೆ ಮಾಡುತ್ತೇನೆ. ಇದಕ್ಕಾಗಿ ನನಗೆ ₹50 ಕೋಟಿ ನೀಡಬೇಕೆಂದು ಟಿಟಿವಿ ದಿನಕರನ್ಗೆ ಬೇಡಿಕೆ ಇಟ್ಟಿದ್ದ. ಈತನ ಮಾತು ನಂಬಿ ದಿನಕರನ್ ಸ್ಪಲ್ಪ ಹಣ ಕೂಡ ಕೊಟ್ಟಿದ್ದರು. ಬಳಿಕ ಚುನಾವಣಾ ಚಿಹ್ನೆ ಸಿಗದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
ಆಗ ದೆಹಲಿ ಪೊಲೀಸರು ಅಖಾಡಕ್ಕಿಳಿದು ದೆಹಲಿಯ ಹಯಾತ್ ಹೊಟೆಲ್ನ ಕೊಠಡಿಯ ಮೇಲೆ ದಾಳಿ ನಡೆಸಿದ್ದರು. ಸುಕೇಶ್ ಚಂದ್ರಶೇಖರ್ ತಂಗಿದ್ದ ರೂಮಿನಲ್ಲಿ ಬರೋಬ್ಬರಿ ₹1.3 ಕೋಟಿ ಪತ್ತೆಯಾಗಿತ್ತು. ಇಷ್ಟು ಹಣವನ್ನು ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಜಪ್ತಿ ಮಾಡಿದ್ದರು. ಬಳಿಕ ಸುಕೇಶ್ ಚಂದ್ರಶೇಖರ್ನನ್ನು ಬಂಧಿಸಿದ್ದರು. ಚೆನ್ನೈ, ಬೆಂಗಳೂರಿಗೆ ಕರೆತಂದು ಆಗ ವಿಚಾರಣೆ ನಡೆಸಿದ ಬಳಿಕ ಜೈಲಿಗಟ್ಟಿದ್ದರು.
ಟಿಡಿಪಿ ಸಂಸದನಿಗೂ ಬ್ಲಾಕ್ ಮೇಲ್ ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದ ಸಂಸದರಾಗಿದ್ದ ರಾಯಪಟ್ಟಿ ಸಾಂಬಶಿವರಾವ್ ಅವರಿಗೂ ಈತ ಬ್ಲ್ಯಾಕ್ಮೇಲ್ ಮಾಡಿದ್ದ. ತಾನು ಸಿಬಿಐ, ಕೇಂದ್ರದ ಗೃಹ ಇಲಾಖೆಯ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ. ನಿಮ್ಮ ವಿರುದ್ಧ ಕೇಸ್ ಬಂದಿದೆ. ಈ ಕೇಸ್ನಿಂದ ಬಚಾವಾಗಲು 100 ಕೋಟಿ ರೂಪಾಯಿ ಹಣ ನೀಡಬೇಕೆಂದು ಬ್ಲ್ಯಾಕ್ಮೇಲ್ ಮಾಡಿದ್ದ.
ನಾಲ್ಕು ವರ್ಷದಿಂದ ಜೈಲುವಾಸ ಸುಕೇಶ್ ಚಂದ್ರಶೇಖರ್ ಕಳೆದ ನಾಲ್ಕು ವರ್ಷಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಮೊಬೈಲ್ ಪೋನ್ ಮೂಲಕ ದೆಹಲಿಯ ಗಣ್ಯ ವ್ಯಕ್ತಿಗಳು, ಉದ್ಯಮಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಬರೋಬ್ಬರಿ ₹190ರಿಂದ 200 ಕೋಟಿ ವರೆಗೂ ಹಣವನ್ನು ಜನರಿಂದ ಬೆದರಿಸಿ ವಸೂಲಿ ಮಾಡಿದ್ದಾನೆ.
ಜೈಲಿನ ಹೊರಗಿದ್ದ ಈತನ ಇಬ್ಬರು ಸಹಚರರು ಗಣ್ಯವ್ಯಕ್ತಿಗಳು, ಉದ್ಯಮಿಗಳಿಂದ ಈತನ ಪರವಾಗಿ ಹಣ ಪಡೆದಿದ್ದಾರೆ. ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ₹ 50 ಕೋಟಿ ವಸೂಲಿ ಮಾಡಿರಬಹುದು ಎಂದು ಪೊಲೀಸರು ಲೆಕ್ಕ ಹಾಕಿದ್ದರು. ಆದರೆ, ಬಳಿಕ ವಸೂಲಿ, ವಂಚನೆಯ ಮೊತ್ತವು ಬರೋಬ್ಬರಿ ₹ 200 ಕೋಟಿ ರೂಪಾಯಿ ಎಂದು ಪೊಲೀಸರಿಗೆ ಗೊತ್ತಾಯಿತು. ಹೀಗಾಗಿ ಪ್ರಕರಣವನ್ನು ಆರ್ಥಿಕ ಅಪರಾಧಗ ವಿಭಾಗಕ್ಕೆ (Economic Offence Wing) ವರ್ಗಾಯಿಸಲಾಯಿತು. ದೊಡ್ಡಮೊತ್ತ, ಗಣ್ಯ ವ್ಯಕ್ತಿಗಳು ಭಾಗಿಯಾಗಿರುವ ಪ್ರಕರಣವಾಗಿರುವುದರಿಂದ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ದೊಡ್ಡದೊಡ್ಡ ಉದ್ಯಮ ಸಂಸ್ಥೆಗಳೇ ಈಗ ಸುಕೇಶ್ ಚಂದ್ರಶೇಖರ್ನಿಂದ ವಂಚನೆಗೊಳಗಾಗಿವೆ.
ಸುಕೇಶ್ ಚಂದ್ರಶೇಖರನ್ನ ಸಹಚರರಾದ ದೀಪಕ್ ರಾಮದಾನಿ, ಪ್ರದೀಪ್ ರಾಮದಾನಿಯನ್ನು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿ, ಮಾಡೆಲ್ ಟೌನ್ನಲ್ಲಿ ಬಂಧಿಸಲಾಗಿದೆ. ಇವರಿಂದ ಹಣ ಎಣಿಸುವ ಮೆಷಿನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದೀಪಕ್ ರಾಮದಾನಿ, ಪ್ರದೀಪ್ ರಾಮದಾನಿ ಇಬ್ಬರೂ ಸುಕೇಶ್ ಹೇಳಿದ ವ್ಯಕ್ತಿಗಳ ಬಳಿ ಹೋಗಿ ಕೋಟಿಗಟ್ಟಲೆ ಹಣ ಪಡೆದುಕೊಂಡು ಬರುತ್ತಿದ್ದರು. ಜೈಲಿನ ಹೊರಗಿದ್ದ ಇವರನ್ನು ಬಳಸಿಕೊಂಡೇ ಸುಕೇಶ್ ಚಂದ್ರಶೇಖರ್ ಬರೋಬ್ಬರಿ ₹ 200 ಕೋಟಿ ವಸೂಲಿ ಮಾಡಿದ್ದಾನೆ. ಸುಕೇಶ್ ಚಂದ್ರಶೇಖರ್ ವಿರುದ್ಧ ದೇಶಾದ್ಯಂತ 24 ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತರಿಗೆ ತಾವು ಮೋಸ ಹೋಗಿದ್ದು ಗೊತ್ತಾದ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಸುಕೇಶ್ ಚಂದ್ರಶೇಖರ್ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ತಿಹಾರ್ ಜೈಲಿನಲ್ಲಿ ಸುಕೇಶ್ ಬಳಕೆ ಮಾಡುತ್ತಿದ್ದ ಪೋನ್ ಜಫ್ತಿ ಮಾಡಲಾಗಿದೆ. ಪೋರೆನ್ಸಿಕ್ ಪರೀಕ್ಷೆಗೆ ಈ ಪೋನ್ ಕಳಿಸಲಾಗಿದೆ. ಸುಕೇಶ್ನ ಕ್ರಿಮಿನಲ್ ಚಟುವಟಿಕೆಗೆ ಬ್ರೇಕ್ ಹಾಕಲು ದೆಹಲಿಯ ತಿಹಾರ್ ಜೈಲಿನಿಂದ ರೋಹಿಣಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಚೆನ್ನೈನಲ್ಲಿ ಐಷಾರಾಮಿ ಬಂಗಲೆ ಬೆದರಿಸಿ ವಸೂಲಿ ಮಾಡಿದ ಹಣದಲ್ಲೇ ಸುಕೇಶ್ ಚಂದ್ರಶೇಖರ್ ಚೆನ್ನೈನಲ್ಲಿ ಬೀಚ್ ಫ್ರಂಟ್ ಬಂಗಲೆ ಖರೀದಿಸಿದ್ದ. ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಬಂಗಲೆ ಮೇಲೆ ದಾಳಿ ನಡೆಸಿ, 16 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಬಂಗಲೆಯಲ್ಲಿ ₹ 82 ಲಕ್ಷ ನಗದು, 2 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಚಿತ್ರನಟಿ ಲೀನಾ ಮಾರಿಯ ಪೋಲ್ ಆರೋಪಿ ಸುಕೇಶ್ನ ಪ್ರೇಯಸಿ. ಈಕೆ ಕೆಲ ಸಿನಿಮಾ, ಸಾಕ್ಷ್ಯಚಿತ್ರ, ಕಿರುಚಿತ್ರಗಳಲ್ಲಿ ನಟಿಸಿದ್ದಾಳೆ. ಈ ಲೀನಾ ಮಾರಿಯ ಪೋಲ್ಗಳನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದಾದ ಬಳಿಕ ಈಗ ಚೆನ್ನೈನ ಬೀಚ್ ಫ್ರಂಟ್ ಬಂಗಲೆ ಮೇಲೆ ದಾಳಿ ನಡೆಸಿದ್ದಾರೆ.
(Enforcement Directorate Attaches Sukesh Narayan assets over extortion)
ಇದನ್ನೂ ಓದಿ: ಬೆಂಗಳೂರು: ಪಶ್ಚಿಮ ವಿಭಾಗ ಪೊಲೀಸರಿಂದ ದಾಖಲೆ ಪ್ರಮಾಣದಲ್ಲಿ 4 ಕೋಟಿ ರೂಪಾಯಿ ದಂಡ ವಸೂಲಿ
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಪರಿಚಯವಾದ ಮಹಿಳೆಯಿಂದ ವಿಡಿಯೋ ಕಾಲ್‌ನಲ್ಲಿ ಅಸಭ್ಯ ವರ್ತನೆ, ಹಣಕ್ಕಾಗಿ ಬೆದರಿಕೆ: ಬಿಜೆಪಿ ಮುಖಂಡನಿಂದ ದೂರು