ಹೊರನಾಡು, ಶೃಂಗೇರಿ ಸೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚನೆ: ತೆಲಂಗಾಣದ ಇಬ್ಬರ ಬಂಧನ

ಕರ್ನಾಟಕದ ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಪ್ರಮುಖ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಂದ ಕೋಟಿಗಟ್ಟಲೆ ಹಣ ವಂಚಿಸುತ್ತಿದ್ದ ತೆಲಂಗಾಣ ಮೂಲದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಭಕ್ತರು ಆನ್‌ಲೈನ್ ಸೇವೆಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಸುವಂತೆ ಹಾಗೂ ಸೈಬರ್ ವಂಚನೆಗಳಿಂದ ಎಚ್ಚರದಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಹೊರನಾಡು, ಶೃಂಗೇರಿ ಸೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚನೆ: ತೆಲಂಗಾಣದ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Sep 30, 2025 | 10:33 AM

ಚಿಕ್ಕಮಗಳೂರು, ಸೆಪ್ಟೆಂಬರ್ 30: ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ (Karnataka) ಪ್ರತಿಷ್ಠಿತ ದೇವಾಲಯಗಳ (Karnataka Temples) ಹೆಸರಿನಲ್ಲಿ ನಕಲಿ ವೆಬ್‌ಸೈಟ್ (Fake Website) ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ (Telangana) ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬವರನ್ನು ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ.

ಆರೋಪಿಗಳು Www.Devaseva.com ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದಿದ್ದು, ಅದರ ಮೂಲಕ ದೇಶದ ಮತ್ತು ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಸಿ ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ಹಣ ಪಡೆದು ಭಕ್ತರನ್ನು ವಂಚಿಸುತ್ತಿದ್ದರು.

ಹೊರನಾಡು ದೇಗುಲಕ್ಕೆ ಬರುತ್ತಿತ್ತು ನಿರಂತರ ದೂರು

ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಉಪವ್ಯವಸ್ಥಾಪಕ ರಾಘವೇಂದ್ರ ಅವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದು, ವಂಚನೆಗೆ ಒಳಗಾದ ಭಕ್ತರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಆನ್​ಲೈನ್ ಮೂಲಕ ಸೇವೆ, ಪ್ರಸಾದ ಪಡೆಯುವ ಭಕ್ತರೇ ಎಚ್ಚರ

ಭಕ್ತರು ವಿಶೇಷ ಪೂಜೆ, ಪ್ರಸಾದ ಅಥವಾ ಸೇವೆಗಾಗಿ ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವ ಮೊದಲು ದೇವಾಲಯಗಳ ಅಧಿಕೃತ ವೆಬ್‌ಸೈಟ್‌ ಅಥವಾ ದೇವಾಲಯ ನಿರ್ವಹಣಾ ಮಂಡಳಿಯನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪರಿಶೀಲಿಸುವುದು ಉತ್ತಮ. ಅನಧಿಕೃತ ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ಹಂಚಬೇಡಿ. ಯಾವುದೇ ಸಂಶಯಾಸ್ಪದ ವೆಬ್‌ಸೈಟ್‌ ಅಥವಾ ವಂಚನೆ ಪ್ರಯತ್ನ ಕಂಡುಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಂ ಪೋರ್ಟಲ್​ಗೆ (www.cybercrime.gov.in) ದೂರು ನೀಡಿ ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ