ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ
ಶ್ರೀಕಾಂತ್ ಗುರಮ್ಮನವರ ಕುಟುಂಬಸ್ಥರು ಖುಷಿ ಖುಷಿಯಿಂದ ಮನೆಯ ಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಮನೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಹೂವು ಮುಡಿಸಿ ಶೃಂಗಾರ ಮಾಡಿದ್ದಾರೆ. ಗರ್ಭಿಣಿ ಆಕಳಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದು, ಆರತಿ ಬೆಳಗಿ ಆರ್ಶೀವದಿಸಿದ್ದಾರೆ.
ಗದಗ: ಪ್ರಾಣಿ-ಪಕ್ಷಿಗಳಿಗೆ ಮನೆ ಸದಸ್ಯ ಸ್ಥಾನ ನೀಡಿ ಪ್ರೀತಿಯಿಂದ ಸಾಕಿ ಸಲುಹಿದ ಅನೇಕ ಉದಾಹರಣೆಗಳಿವೆ. ವಿವಿಧ ಪ್ರಕಾರಗಳಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುವ ಪ್ರಾಣಿ ಪ್ರಿಯರೂ ಇದ್ದಾರೆ. ಆದರೆ ಗದಗದ ರೈತ ಕುಟುಂಬ ಒಂದು ಹೆಜ್ಜೆ ಮುಂದೆಯಿಟ್ಟಿದೆ. ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಮುದ್ದಿನಿಂದ ಸಾಕಿದ ಆಕಳು ಗೌರಿ ಮೊದಲ ಬಾರಿಗೆ ಗರ್ಭಧರಿಸಿದ್ದಾಳೆ. ಹೀಗಾಗಿ ಈ ಆಕಳಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಶ್ರೀಕಾಂತ್ ಗುರಮ್ಮನವರ ಕುಟುಂಬಸ್ಥರು ಖುಷಿ ಖುಷಿಯಿಂದ ಮನೆಯ ಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಮನೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಹೂವು ಮುಡಿಸಿ ಶೃಂಗಾರ ಮಾಡಿದ್ದಾರೆ. ಗರ್ಭಿಣಿ ಆಕಳಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದು, ಆರತಿ ಬೆಳಗಿ ಆರ್ಶೀವದಿಸಿದ್ದಾರೆ.
ಅಪ್ಪ ಕೊಟ್ಟ ಉಡುಗೊರೆ 20 ವರ್ಷಗಳ ಹಿಂದೆ ಬಸಪ್ಪ ಗುರಮ್ಮನ್ನವರ ಮಗಳು ಲಕ್ಷ್ಮೀಗೆ ಆಕಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ಆಕಳ ಮೊಮ್ಮಗಳು ಈಗ ಗರ್ಭಿಣಿ ಆಕಳು. ಲಕ್ಷ್ಮೀ ಈಗ ಆರು ವರ್ಷದ ಹಿಂದೆ ಮತ್ತೆ ತನ್ನ ತವರು ಮನೆಗೆ ಈ ಮೊಮ್ಮಗಳು ಗೌರಿಯನ್ನು ವಾಪಸ್ ಉಡುಗೊರೆಯಾಗಿ ನೀಡಿದ್ದಾರೆ. ಮಗಳು ಪ್ರೀತಿಯಿಂದ ಕೊಟ್ಟ ಆಕಳು ಗೌರಿಯನ್ನು ತವರು ಮನೆಯವರು ಅಷ್ಟೇ ಪ್ರೀತಿಯಿಂದ ಸಾಕಿದ್ದಾರೆ.
ಈ ಗೌರಿ ಈಗ ಏಳು ತಿಂಗಳ ತುಂಬು ಗರ್ಭಿಣಿ. ಹೀಗಾಗಿ ಇಡೀ ಕುಟುಂಬದ ಸದಸ್ಯರು ಮನೆಯ ಮೊಮ್ಮಗಳಂತೆ ಸಾಕಿದ ಗೌರಿಯ ಸೀಮಂತ ಕಾರ್ಯಕ್ರಮ ಖುಷಿ ಖುಷಿಯಿಂದ ಮಾಡಿದ್ದಾರೆ. ಸದ್ಯ ಮುದ್ದಿನ ಆಕಳಿನ ಕರುವಿಗೆ ರೈತ ಕುಟುಂಬ ಕಾತುರದಿಂದ ಕಾಯುತ್ತಿದೆ. ಈ ರೈತ ಕುಟುಂಬ ಮಕ್ಕಳಂತೆಯೇ ಸಾಕಿದ ಆಕಳಿಗೆ ಗರ್ಭಿಣಿ ಸ್ತ್ರೀಯರಂತೆ ಸೀಮಂತ ಮಾಡಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಹ್ಯಾಂಡ್‌ಪಂಪ್‌ನಿಂದ ನಾಯಿಗೆ ನೀರು ಕುಡಿಯಲು ಸಹಾಯ ಮಾಡುವ ಪೊಲೀಸ್ ಅಧಿಕಾರಿಯ ಚಿತ್ರ ವೈರಲ್.!
ಪ್ರೀತಿಯ ಶ್ವಾನಕ್ಕೆ ಇಡೀ ಕುಟುಂಬ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ಸಂಭ್ರಮಿಸಿದೆ
Published On - 12:39 pm, Sat, 3 July 21