ಯಾದಗಿರಿ: ಸಾಮಾನ್ಯವಾಗಿ ಬರದ ನಾಡಿನಲ್ಲಿ ಬೇಸಾಯ ಮಾಡುವುದು ಕಷ್ಟದ ಕೆಲಸ. ಒಣ ಬೇಸಾಯದಲ್ಲಿ ರೈತರು ಬೆಳೆ ಬೆಳೆದು ಮಳೆ ಬಾರದೆ ಹೋಗಿ ಬೆಳೆ ಕಳೆದುಕೊಂಡು ಕಂಗಲಾಗಿದ್ದಾರೆ. ಆದರೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗುಂಜನೂರ ಗ್ರಾಮದಲ್ಲಿ ಓರ್ವ ರೈತ ಭರ್ಜರಿಯಾಗಿ ಬೆಳೆ ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಸಿಹಿಯಾದ ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಎಷ್ಟೇ ಮಳೆ ಬಂದರು ಬರಗಾಲ ಕಟ್ಟಿಟ್ಟ ಬುತ್ತಿ. ಯಾವ ಬೆಳೆ ಬೆಳೆದರು ರೈತರಿಗೆ ನಿರೀಕ್ಷಿತ ಲಾಭ ಸಿಗುವುದಿಲ್ಲ. ಹೀಗಾಗಿ ತಾಲೂಕಿನ ಬಹುತೇಕ ಗ್ರಾಮದ ಜನರ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಆದರೆ ಗುಂಜನೂರಿನ ರೈತ ಮಾತ್ರ ಇಡೀ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ತೊಗರಿ, ಹೆಸರು ಹಾಗೂ ಹತ್ತಿ ಬೆಳೆ ಬೆಳೆದು ನಷ್ಟವಾಗುತ್ತಿತ್ತು. ಆದರೆ ರೈತ ಸಂಗರಡ್ಡಿ ಕಳೆದ ಮೂರು ವರ್ಷಗಳಿಂದ ನಿರಾವರಿ ಬೆಳೆ ಬೆಳೆದು ಕೈ ತುಂಬಾ ಲಾಭ ಪಡೆಯುತ್ತಿದ್ದಾರೆ.
ಆರಂಭದಲ್ಲಿ ಬಾಳೆ ಬೆಳೆದು ಯಶಸ್ಸು ಕಂಡಿದ್ದ ಸಂಗರಡ್ಡಿ ಈಗ ತನ್ನ ಎರಡು ಜಮೀನಿನಲ್ಲಿ ಬೇಸಿಗೆ ರಾಜ ಕಲ್ಲಂಗಡಿ ಬೆಳೆದು ಸಾಧನೆ ಮಾಡಿದ್ದಾರೆ. ತೋಟಗಾರಿಕೆ ಇಲಾಖೆಯ ಸಹಾಯದಿಂದ ತನ್ನ ಎರಡು ಎಕರೆ ಜಮೀನಿನಲ್ಲಿ ₹1.5 ಲಕ್ಷ ಖರ್ಚು ಮಾಡಿ ಬಂಪರ್ ಬೆಳೆ ಬೆಳೆದಿದ್ದಾರೆ. ಕೇವಲ ಎರಡು ತಿಂಗಳ ಬೆಳೆಯಾದ ಕಲ್ಲಂಗಡಿ ಬೆಳೆ ಬೆಳೆದು ₹8 ಲಕ್ಷ ರೂಪಾಯಿ ಲಾಭ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ ಸಂಗರೆಡ್ಡಿ.
ಫೆಬ್ರವರಿ ತಿಂಗಳಲ್ಲಿ ಕಲ್ಲಂಗಡಿ ಬೀಜ ನಾಟಿ ಮಾಡಿದ ಸಂಗರಡ್ಡಿ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಪಡೆದು ಜಮೀನಿಗೆ ಡ್ರಿಪ್ ಮಾಡಿಸಿದ್ದಾರೆ. ಜಮೀನಿನಲ್ಲಿ ಒಂದು ಬೋರ್ವೆಲ್ ಹಾಕಿಸಿಕೊಂಡು ಕಲ್ಲಂಗಡಿ ಬೆಳೆಗೆ ನೀರು ಪೂರೈಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಬೆಳೆ ಕೈಗೆ ಬಂದಿದ್ದು ಖುದ್ದು ಹೈದ್ರಾಬಾದ್ನಿಂದ ಕಲ್ಲಂಗಡಿ ಖರೀದಿಗೆ ಸಂಗರಡ್ಡಿ ಜಮೀನಿಗೆ ಬಂದಿದ್ದಾರೆ.
ಇನ್ನು ಸಂಗರಡ್ಡಿ ಅವರು ನಿರಂತರವಾಗಿ ಎರಡು ತಿಂಗಳುಗಳ ಕಾಲ ಜಮೀನು ಬಿಟ್ಟು ಎಲ್ಲೂ ಹೋಗಿಲ್ಲ. ಅಷ್ಟರಮಟ್ಟಿಗೆ ಬೆಳೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಇದೇ ಪರಿಶ್ರಮದಿಂದ ಇಂದು ಕೇವಲ ಎರಡು ಎಕ್ಕರೆಯಲ್ಲಿ ₹8 ಲಕ್ಷ ಲಾಭ ಪಡೆದಿದ್ದಾರೆ. ಇನ್ನು ಫಸಲು ಚೆನ್ನಾಗಿ ಬಂದಿರುವ ಕಾರಣಕ್ಕೆ ಬೀಜ ಪೂರೈಸಿದ ಕಂಪನಿಯ ಪ್ರತಿನಿಧಿಗಳು ಹಾಗೂ ಯಾದಗಿರಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಸಂಗರಡ್ಡಿ ಬೆಳೆದ ಬೆಳೆ ನೋಡಿ ಶಬ್ಬಾಸ್ ಎಂದಿದ್ದಾರೆ. ಇನ್ನು ಇದೆ ರೀತಿ ರೈತರು ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಪಡೆದು ವಿವಿಧ ಲಾಭದಾಯಕ ಬೆಳೆ ಬೆಳೆದರೆ ಎಲ್ಲಾ ರೈತರು ಸಮೃದ್ಧರಾಗುತ್ತಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಅಜೀಮೋದ್ದಿನ್.
ಒಟ್ಟಿನಲ್ಲಿ ಮಳೆ ನೀರನ್ನೇ ನಂಬಿಕೊಂಡು ಸಂಪ್ರದಾಯಿಕ ಬೆಳೆ ಬೆಳೆದು ರೈತರು ನಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ ಇಂತಹದೊಂದು ಬೆಳೆ ಬೆಳೆದು ಸಂಗರಡ್ಡಿ ಕೃಷಿಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.
(ವರದಿ: ಅಮೀನ್ ಹೊಸುರು- 99809 14141)
ಇದನ್ನೂ ಓದಿ:
ಕಬ್ಬಿನ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದ ಅನ್ನದಾತರು; ಭರ್ಜರಿ ಫಸಲು ಪಡೆದು ಇತರರಿಗೆ ಮಾದರಿ
ಬಿಜಿನೆಸ್ ಬಿಟ್ಟು ಕೃಷಿಯತ್ತ ವಾಲಿದ ಪದವೀಧರ; ಕೈ ಹಿಡಿದು ಕಾಪಾಡುತ್ತಿದೆ ’ಹಳದಿ ಕಲ್ಲಂಗಡಿ‘
(Farmer who made profit by growing watermelon in yadgir)