ಉದ್ದು, ಹೆಸರು ಖರೀದಿ ಕೇಂದ್ರಗಳು ಖಾಲಿ; ನೋಂದಣಿ ಮಾಡಿಸಿದರೂ ಒಬ್ಬೇಒಬ್ಬ ರೈತನ ಸುಳಿವಿಲ್ಲ

ಮುಂಗಾರು ಹಂಗಾಮಿನಲ್ಲಿ ನಿರಂತರ ಸುರಿದ ಮಳೆಯಿಂದ ಹೆಸರು ಕಾಳು ಎಫ್‍ಎಕ್ಯೂ ಗುಣಮಟ್ಟದ ಕೊರತೆ ಎದುರಿಸುವಂತಾಗಿದೆ. ಹೀಗಾಗಿ ಬೆಂಬಲ ಬೆಲೆಗೆ ನೋಂದಣಿ ಮಾಡಿಸಿದ್ದರೂ ಕಾಳು ಖರೀದಿ ಆಗುವ ವಿಶ್ವಾಸವೇ ಇರಲಿಲ್ಲ ಎನ್ನುತ್ತಾರೆ ರೈತ ರಾಜಶೇಖರಯ್ಯ ಹಿರೇಮಠ.

ಉದ್ದು, ಹೆಸರು ಖರೀದಿ ಕೇಂದ್ರಗಳು ಖಾಲಿ; ನೋಂದಣಿ ಮಾಡಿಸಿದರೂ ಒಬ್ಬೇಒಬ್ಬ ರೈತನ ಸುಳಿವಿಲ್ಲ
ಬಾಗಿಲು ಮುಚ್ಚಿರುವ ಖರೀದಿ ಕೇಂದ್ರಗಳು
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Dec 18, 2020 | 2:59 PM

ಧಾರವಾಡ: ಜಿಲ್ಲೆಯಾದ್ಯಂತ ಉದ್ದು ಮತ್ತು ಹೆಸರು ಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದರೂ ರೈತರು ಯಾವ ಕೇಂದ್ರದಲ್ಲೂ ಕಾಳುಗಳನ್ನು ಮಾರಾಟ ಮಾಡಲೇ ಇಲ್ಲ. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು, ಉದ್ದು ಖರೀದಿ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿ, ಖರೀದಿ ಕೇಂದ್ರಗಳನ್ನು ತೆರೆದಿತ್ತು. ಹಾಗೇ ರೈತರು ತಮ್ಮ ಹೆಸರನ್ನು ಕೂಡ ನೋಂದಣಿ ಮಾಡಿದ್ದರು. ಆದರೆ ಇದುವರೆಗೂ ಒಂದೇ ಒಂದು ಕೇಂದ್ರದಲ್ಲೂ ರೈತರು ಬೆಳೆ ಮಾರಾಟ ಮಾಡಿಲ್ಲ.

11 ಖರೀದಿ ಕೇಂದ್ರ ಧಾರವಾಡ ಜಿಲ್ಲೆಯ ಹೆಸರು ಹಾಗೂ ಉದ್ದು ಬೆಳೆಗಾರರು ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿದ್ದರು. ಒತ್ತಡ ಹೆಚ್ಚಾದ ಬೆನ್ನಲ್ಲೇ ಜಿಲ್ಲಾಡಳಿತ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಿತು. ಇದರಲ್ಲಿ ಹೆಸರು ಖರೀದಿಗೆ 9 ಹಾಗೂ ಉದ್ದಿಗೆ 2 ಖರೀದಿ ಕೇಂದ್ರಗಳನ್ನು ಸೆ. 21ರಿಂದ ಪ್ರಾರಂಭಿಸಲಾಗಿತ್ತು. ಅ. 29ರವರೆಗೆ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಹೆಸರು ಮಾರಾಟಕ್ಕೆ 546 ಹಾಗೂ ಉದ್ದು ಮಾರಾಟಕ್ಕಾಗಿ 10 ಜನ ರೈತರಷ್ಟೇ ನೋಂದಣಿ ಮಾಡಿಕೊಂಡಿದ್ದರು.

ಹೀಗಾಗಿ ಮತ್ತೆ ನೋಂದಣಿ ಅವಧಿಯನ್ನು ನವೆಂಬರ್ ಇಡೀ ತಿಂಗಳು ವಿಸ್ತರಣೆ ಮಾಡಿದರೂ ಅಂತಿಮವಾಗಿ ಹೆಸರು ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು 572 ರೈತಷ್ಟೇ. ಇನ್ನು ರೈತರು ಖರೀದಿ ಕೇಂದ್ರಗಳಿಗೆ ತಂದು ಕೊಡುವ ಬೆಳೆಗಳ ಖರೀದಿಗೆ ಡಿ. 12 ಕೊನೆಯ ದಿನವಾಗಿತ್ತು. ಆದರೆ ಹೆಸರು ಮತ್ತು ಉದ್ದು ಬೆಳೆಗಳನ್ನು ಒಬ್ಬನೇ ಒಬ್ಬ ರೈತ ಖರೀದಿ ಕೇಂದ್ರಗಳಿಗೆ ತಂದು ಮಾರಾಟ ಮಾಡಿಲ್ಲ. ಈ ಅವಧಿಯಲ್ಲಿ ಯಾವ ರೈತರೂ ಖರೀದಿ ಕೇಂದ್ರದತ್ತ ಸುಳಿದಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಗಳು.

ರೈತರಿಗೆ ಎಫ್‍ಎಕ್ಯೂ ಗುಣಮಟ್ಟದ ಗುಮ್ಮ! ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ತೀವ್ರ ಹಾನಿಗೆ ಒಳಗಾಗಿದ್ದ ಹೆಸರು ಮತ್ತು ಉದ್ದು ಗುಣಮಟ್ಟ ಕಳೆದುಕೊಂಡಿದೆ. ಇಂಥ ಸಂದರ್ಭದಲ್ಲಿ ಎಫ್‍ಎಕ್ಯೂ ಗುಣಮಟ್ಟದ ಕಾಳು ಖರೀದಿಗೆ ಸರಕಾರ ಮಾರ್ಗಸೂಚಿ ರಚಿಸಿದೆ. ಆದರೆ, ಅಂಥ ಗುಣಮಟ್ಟದ ಕಾಳು ಬಹುತೇಕ ರೈತರ ಬಳಿ ಇಲ್ಲ. ಹೀಗಾಗಿ ಖರೀದಿ ಕೇಂದ್ರಕ್ಕೆ ಬೆಳೆಗಳನ್ನು ತೆಗೆದುಕೊಂಡು ಹೋದರೂ ಗುಣಮಟ್ಟ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ರೈತರನ್ನು ಕಾಡಿದೆ.

ಜೊತೆಗೆ ಪ್ರತಿ ಕ್ವಿಂಟಲ್‍ಗೆ ಸರಕಾರ ಬೆಂಬಲ ಬೆಲೆ ನೀಡಿದ್ದು ಹೆಸರಿಗೆ ರೂ. 7,196 ಮತ್ತು ಉದ್ದಿಗೆ ರೂ. 6,000 ರೂ. ಆದರೆ, ಹೊರಗಡೆ ಮಾರುಕಟ್ಟೆಯಲ್ಲಿ ಈ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡಲಾಗುತ್ತಿದೆ. ಅಲ್ಲದೇ ಖರೀದಿ ಕೇಂದ್ರಕ್ಕೆ ಕಾಳುಗಳನ್ನು ನೀಡಿದರೆ ಹಣಕ್ಕಾಗಿ ತಿಂಗಳುಗಟ್ಟಲೇ ಕಾಯಬೇಕು. ಆದರೆ ಅದಕ್ಕಿಂತ ಹೆಚ್ಚು ಅಥವಾ ಅದೇ ದರಕ್ಕೆ ಮಾರುಕಟ್ಟೆಯಲ್ಲಿ ಬೆಳೆಯನ್ನು ನೀಡಿದರೆ ತಕ್ಷಣವೇ ಹಣ ಕೈಗೆ ಬರುತ್ತದೆ. ಹೀಗಾಗಿ ಯಾವ ರೈತನೂ ಈ ಖರೀದಿ ಕೇಂದ್ರಗಳತ್ತ ಸುಳಿದೇ ಇಲ್ಲ.

ಹಾನಿಯಾದ ಪ್ರದೇಶ ಎಷ್ಟು ಗೊತ್ತಾ? ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ 46,543 ಹೆಕ್ಟೇರ್ ನಲ್ಲಿ ಬೆಳೆದ ಹೆಸರು ಬೆಳೆಯಲ್ಲಿ 44,245 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 5,684 ಹೆಕ್ಟೇರ್ ನಲ್ಲಿ ಬೆಳೆದಿದ್ದ ಉದ್ದು ಬೆಳೆಯ ಪೈಕಿ 5,083 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಇದರಿಂದ ಅಳಿದುಳಿದ ಕಾಳುಗಳು ಗುಣಮಟ್ಟದ ಕೊರತೆ ಎದುರಿಸುವಂತಾಗಿದೆ. ಹೀಗಾಗಿ ಹೆಸರು ನೋಂದಣಿ ಮಾಡಿಸಿಕೊಂಡರೂ ಮಾರಾಟಕ್ಕೆ ಮುಂದಾಗಲಿಲ್ಲ ಎನ್ನುತ್ತಾರೆ ರೈತರು. ಜಿಲ್ಲೆಯಲ್ಲಿ 2019ರಲ್ಲಿ ತೆರೆಯಲಾಗಿದ್ದ 8 ಖರೀದಿ ಕೇಂದ್ರಗಳಲ್ಲಿ 3169 ರೈತರು ನೋಂದಣಿ ಮಾಡಿಕೊಂಡಿದ್ದರು.

ಈ ಸಲ ಕೇವಲ 572 ರೈತರಷ್ಟೇ ನೋಂದಣಿ ಮಾಡಿಸಿಕೊಂಡಿದ್ದಾರೆ. ತೆರೆಯಲಾಗಿದ್ದ ಹೆಸರು 9 ಖರೀದಿ ಕೇಂದ್ರಗಳ ಪೈಕಿ ಹೆಬಸೂರಿನ ಪಿಕೆಪಿಎಸ್ ಕೇಂದ್ರದಲ್ಲಿ ರೈತರ ನೋಂದಣಿಯೂ ಆಗಿಲ್ಲ. ಉಳಿದಂತೆ ಧಾರವಾಡದ ಎಪಿಎಂಸಿ ಮುಖ್ಯ ಪ್ರಾಂಗಣ, ಹುಬ್ಬಳ್ಳಿ ಅಮರಗೋಳದ ಎಪಿಎಂಸಿ ಮುಖ್ಯ ಪ್ರಾಂಗಣ, ಉಪ್ಪಿನಬೆಟಗೇರಿಯ ಪಿಕೆಪಿಎಸ್ ಕೇಂದ್ರಗಳಲ್ಲಿ ನೋಂದಣಿ ನೂರರ ಗಡಿ ದಾಟಿದರೆ, ಉಳಿದೆಡೆ ಬೆರಳಿಕೆಯಷ್ಟೇ ಆಗಿತ್ತು. ಇನ್ನು ಉದ್ದು ಖರೀದಿಗಾಗಿ ತೆರೆದಿದ್ದ 2 ಕೇಂದ್ರಗಳಲ್ಲಿ 10 ಜನ ರೈತರಷ್ಟೇ ನೋಂದಣಿ ಮಾಡಿಕೊಂಡಿದ್ದರು. ಆದರೆ ಅವರು ಬೆಳೆ ಮಾರಾಟಕ್ಕೆ ಮುಂದಾಗಿಲ್ಲ ಎನ್ನುತ್ತಾರೆ ಕೇಂದ್ರ ಸಿಬ್ಬಂದಿ.

ಅಧಿಕಾರಿಗಳು ಮತ್ತು ರೈತರು ಏನಂತಾರೆ? ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಸಹಕಾರ ಮರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕಿ ಗಾಯಿತ್ರಿ ಪವಾರ್, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಂಬೆಲ ಬೆಲೆ ಯೋಜನೆಯಡಿ ತೆರೆದಿರುವ ಹೆಸರು ಹಾಗೂ ಉದ್ದು ಖರೀದಿ ಕೇಂದ್ರಗಳಿಗೆ ರೈತರಿಂದ ಸ್ಪಂದನೆ ಸಿಗದಂತಾಗಿದ್ದು, ರೈತರ ನೋಂದಣಿಗೆ ನೀರಸ ಪ್ರತಿಕ್ರಿಯೆ ಜೊತೆಗೆ ಒಂದೇ ಒಂದು ಕಾಳು ಖರೀದಿ ಪ್ರಕ್ರಿಯೆಗೂ ಇಲ್ಲದಂತಾಗಿದೆ ಎಂದಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ನಿರಂತರ ಸುರಿದ ಮಳೆಯಿಂದ ಹೆಸರು ಕಾಳು ಎಫ್‍ಎಕ್ಯೂ ಗುಣಮಟ್ಟದ ಕೊರತೆ ಎದುರಿಸುವಂತಾಗಿದೆ. ಹೀಗಾಗಿ ಬೆಂಬಲ ಬೆಲೆಗೆ ನೋಂದಣಿ ಮಾಡಿಸಿದ್ದರೂ ಕಾಳು ಖರೀದಿ ಆಗುವ ವಿಶ್ವಾಸವೇ ಇರಲಿಲ್ಲ. ಒಂದು ವೇಳೆ ಮಾರಾಟವಾದರೂ ಆ ಹಣಕ್ಕಾಗಿ ತಿಂಗಳುಗಟ್ಟಲೇ ಕಾಯಬೇಕು. ಆದ್ದರಿಂದ ಮಾರುಕಟ್ಟೆಯಲ್ಲಿಯೇ ಹೆಸರು ಮಾರಾಟ ಮಾಡಿದ್ದೇನೆ. ಉತ್ತಮ ಬೆಲೆ ಸಿಗುವುದರೊಂದಿಗೆ ಮಾರಾಟ ಮಾಡಿದ ಕೂಡಲೇ ಕೈಗೆ ಹಣ ಬಂತು ಎನ್ನುತ್ತಾರೆ  ಹೆಸರು ಬೆಳೆದ ರೈತ ರಾಜಶೇಖರಯ್ಯ ಹಿರೇಮಠ.

ತೊಗರಿಗೆ ಪ್ರೋತ್ಸಾಹ ಧನ ನೀಡದ ರಾಜ್ಯ ಸರ್ಕಾರ.. ಖರೀದಿ ಕೇಂದ್ರವೂ ಆರಂಭವಿಲ್ಲ: ಬೆಳೆಗಾರರ ಆಕ್ರೋಶ