ಚಿಕ್ಕಬಳ್ಳಾಪುರ: ವಿಭಿನ್ನ ಪ್ರಯತ್ನ ಮಾಡುವುದರಲ್ಲಿ ಬಯಲು ಸೀಮೆಯ ರೈತರು ಎತ್ತಿದ ಕೈ. ಮತ್ತೆ ಮತ್ತೆ ತರಕಾರಿ, ಹಣ್ಣು ಹಂಪಲು, ಹೂ ಬೆಳೆಯುತ್ತಿದ್ದರೆ ನಿರೀಕ್ಷೆಯಷ್ಟು ಲಾಭ ಬರಲ್ಲ ಅಂತ ಈ ಬಾರಿ ವಾಣಿಜ್ಯ ಬೆಳೆ ಶುಂಠಿಯ ಮೊರೆ ಹೋಗಿದ್ದರು. ಪಾತಾಳದಿಂದ ಹನಿ ಹನಿ ನೀರು ಬಸಿದು ಶುಂಠಿ ಬೆಳೆದಿದ್ದರು. ಶುಂಠಿ ಸಹ ಫಲವತ್ತಾಗಿ ಬಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಶುಂಠಿಯ ಬೆಲೆ ತೀವ್ರವಾಗಿ ಕುಸಿದ ಕಾರಣ ರೈತರು ಈಗ ಯಾಕಾದರೂ ಶುಂಠಿಯ ಸಹವಾಸ ಮಾಡಿದೆವೋ ಅಂತ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶುಂಠಿಯನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಆದರೆ ಶುಂಠಿಯ ಸಹವಾಸ ಮಾಡಿದರೆ ಅದನ್ನು ಬರೋಬ್ಬರಿ ಒಂದು ವರ್ಷ ಮಕ್ಕಳ ಹಾಗೆ ನೋಡಿಕೊಳ್ಳಬೇಕು. ಅದೃಷ್ಟ ಖುಲಾಯಿಸಿದರೆ ಕೈ ತುಂಬಾ ಜಣ ಜಣ ಕಾಂಚಣ ಎಣಿಸಬಹುದು. ಇದೆ ಆಸೆಗಣ್ಣಿನಿಂದ ಚಿಕ್ಕಬಳ್ಳಾಪುರದ ಪ್ರಗತಿಪರ ರೈತರು ಪ್ರಥಮ ಬಾರಿಗೆ ಜಿಲ್ಲೆಯಾದ್ಯಂತ ನೂರಾರು ಹೆಕ್ಟರ್ಗಳಲ್ಲಿ ವಿಭಿನ್ನವಾಗಿ ಶುಂಠಿ ಬೆಳೆದಿದ್ದರು.
ಶುಂಠಿ ಸಹ ತುಂಬಾ ಫಲವತ್ತಾಗಿ ಬಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಶುಂಠಿಯನ್ನು ಕೇಳುವವರೆ ಇಲ್ಲದಂತಾಗಿದೆ. 60 ಕೆಜಿಯ ಒಂದು ಮೂಟೆಯ ಶುಂಠಿಗೆ ಕೇವಲ 900 ರೂಪಾಯಿ ಸಿಗುತ್ತಿದೆ. ಇದರಿಂದ ರೈತರಿಗೆ ಕೂಲಿ ಹಣ ಸಹ ಬರುತ್ತಿಲ್ಲ. ಬೆಳೆದ ಶುಂಠಿ ಜಮೀನಿನಲ್ಲೆ ಗೊಬ್ಬರವಾಗುವುದನ್ನು ಕಂಡ ರೈತರು ಬಂದಷ್ಟಾದರೂ ಬರಲಿ ಅಂತ ಅತ್ಯಂತ ಕಡಿಮೆ ಬೆಲೆಗೆ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ.
ವಾಣಿಜ್ಯ ಬೆಳೆಯ ಹಿಂದೆ ಬಿದ್ದು ಕೈ ಸುಟ್ಟುಕೊಂಡ ರೈತ
ತಾಲೂಕಿನ ಅಗಲಗುರ್ಕಿ ಗ್ರಾಮದ ಪ್ರಗತಿಪರ ರೈತ ರಾಮಾಂಜಿ ಎಂಬುವವರು ಇದೆ ಪ್ರಥಮ ಬಾರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 6 ಎಕರೆ ಜಮೀನಿನಲ್ಲಿ 30 ಲಕ್ಷ ರೂಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿದ್ದಾರೆ. ಶುಂಠಿ ಸಹ ಫಲವತ್ತಾಗಿ ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವ ಕಾರಣ ರಾಮಾಂಜಿಯ ಕನಸು ನುಚ್ಚು ನೂರಾಗಿದೆ.
ಶುಂಠಿ ಬೆಳೆದು 60 ಕೆ ಜಿ ಮೂಟೆಗೆ ನಾಲ್ಕು ಸಾವಿರ ರೂಪಾಯಿ ಹಣ ಕೊಟ್ಟು ಖರೀದಿ ಮಾಡುತ್ತೀವಿ ಅಂತ ಶುಂಠಿ ನಾಟಿ ಮಾಡಲು ಪ್ರೋತ್ಸಾಹ ನೀಡಿದ್ದ ವರ್ತಕರು ಈಗ ನಾಪತ್ತೆಯಾಗಿದ್ದಾರೆ. ಇದರಿಂದ ನೊಂದ ರಾಮಾಂಜಿ ಕಳೆದ ಎರಡು ತಿಂಗಳಿಂದ ಶುಂಠಿಯನ್ನು ಭೂಮಿಯಲ್ಲೆ ಬಿಟ್ಟಿದ್ದರು. ಕೊನೆಗೆ ಶುಂಠಿ ಕೊಳೆಯುತ್ತಿರುವ ಕಾರಣ ಬಂದಷ್ಟಾದರು ಬರಲಿ ಅಂತ ಸ್ಥಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಂಠಿಯನ್ನು ಕೇಳಿದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಬೆಳೆಯುತ್ತಿದ್ದ ಶುಂಠಿಗೆ ಭಾರಿ ಬೇಡಿಕೆಯಿತ್ತು. ಈಗ ರೈತರು ಎಲ್ಲೆಡೆ ಶುಂಠಿ ಬೆಳೆಯುತ್ತಿದ್ದಾರೆ. ಇದರಿಂದ ಅಗತ್ಯಕ್ಕಿಂತ ಹೆಚ್ಚಿಗೆ ಶುಂಠಿ ಮಾರುಕಟ್ಟೆಗೆ ಆಗಮಿಸುತ್ತಿರುವ ಕಾರಣ ಸ್ವತಃ ಶುಂಠಿ ವರ್ತಕರು ರೈತರು ಬೆಳೆದ ಶುಂಠಿ ಖರೀದಿ ಮಾಡುತ್ತಿಲ್ಲ. ಮತ್ತೊಂದೆಡೆ ಕೆಲವು ದೇಶಗಳಿಗೆ ರಫ್ತು ಆಗುತ್ತಿದ್ದ ಶುಂಠಿಯನ್ನು ಈಗ ರಫ್ತುದಾರರು ಮುಂದೆ ಬರುತ್ತಿಲ್ಲ. ಇದೆಲ್ಲದರ ಪರಿಣಾಮ ರೈತರ ಸಂಕಷ್ಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ
ರದ್ದಿ ಪೇಪರ್ ಮಾರಿ.. ಬಸ್ ನಿಲ್ದಾಣ ನಿರ್ಮಿಸಿದ ಧಾರವಾಡದ ವೀರ ಸಾವರಕರ ಗೆಳೆಯರ ಬಳಗ
ದೇವನಹಳ್ಳಿ: ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ.. ರೈತ ಮಹಿಳೆ ಗಂಭೀರ
Published On - 6:33 pm, Mon, 8 March 21