ಬೆಂಗಳೂರು: ರಾಜ್ಯದಲ್ಲಿ ಮಂಕಿಪಾಕ್ಸ್ (Monkeypox) ಸೋಂಕು ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ (Health Department)ಯಿಂದ ಹೊಸ ಆದೇಶ ಹೊರಬಿದ್ದಿದ್ದು, ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ಗಳನ್ನು ಮೀಸಲಿಡುವಂತೆ ಆದೇಶ ಹೊರಡಿಸಿದೆ. ಆದೇಶದ ಅನ್ವಯ ಶಂಕಿತ ಪ್ರಕರಣಗಳು ವರದಿಯಾದಾಗ ಚಿಕಿತ್ಸೆ ನೀಡಲು ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕನಿಷ್ಠ 2 ಬೆಡ್ ಮೀಸಲಿಡಬೇಕು. ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ಡಿಎಸ್ಓಗಳು ವಿಮಾನ ನಿಲ್ದಾಣ ಆರೋಗ್ಯಾಧಿಕಾರಿ ಜೊತೆ ಸಮನ್ವಯ ಸಾಧಿಸಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ನಡೆಸಬೇಕು. ಶಂಕಿತ ಪ್ರಕರಣಗಳು ವರದಿಯಾದಲ್ಲಿ ಬೆಂಗಳೂರಿನ ಇಂದಿರಾನಗರದ ಸಾಂಕ್ರಾಮಿಕ ರೋಗ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Monkeypox: ಮಂಕಿಪಾಕ್ಸ್ ವೈರಸ್ನಿಂದ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಅಪಾಯ: WHO
ಅಲ್ಲದೆ, ಶಂಕಿತ ಪ್ರಕರಣಗಳಿಂದ ಮಾದರಿಗಳನ್ನು ಸಂಗ್ರಹಿಸಿ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ ಇಲ್ಲಿಗೆ ನೇರವಾಗಿ ಅಥವಾ ಬೆಂಗಳೂರಿನ ಎನ್‌ಐವಿ ಮೂಲಕ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಐಡಿಎಸ್ಪಿ ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ ಎನ್. ರಾಜ್ಯಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಪ್ರಪಂಚದಾದ್ಯಂತ 27 ದೇಶಗಳಲ್ಲಿ ಒಟ್ಟು 780 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಬಹುತೇಕ ಸೋಂಕುಗಳು ಮಂಕಿಪಾಕ್ಸ್ ಎಂಡೆಮಿಕ್ ಆಗಿಲ್ಲದ 4 ವಲಯಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ. ಮಂಕಿಪಾಕ್ಸ್‌ನ್ನು ಎಂಡೆಮಿಕ್ ಎಂದು ಗುರುತಿಸಲಾಗಿರುವ ದೇಶಗಳಲ್ಲಿ ಒಂದೇ ಒಂದು ಸೋಂಕು ಕಂಡುಬಂದರೂ ಅದನ್ನು ಸೋಂಕು ಸ್ಫೋಟ ಎಂದು ಗುರುತಿಸಲಾಗುತ್ತದೆ. ಕ್ಯಾಮರೂನ್, ಕೇಂದ್ರ ಆಫ್ರಿಕಾ, ಕಾಂಗೋ, ಗಾಬನ್, ಘಾನಾ, ಲಿಬಿಯಾ, ನೈಜೀರಿಯಾ, ಬೆನಿನ್ ಮತ್ತು ದಕ್ಷಿಣ ಸೂಡಾನ್‌ಗಳನ್ನು ಮಂಕಿಪಾಕ್ಸ್ ಎಂಡೆಮಿಕ್ ದೇಶಗಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Monkeypox: ಮಂಕಿಪಾಕ್ಸ್ ವೈರಸ್ ಕುರಿತು ಜನರ ಸಂದೇಹಗಳಿಗೆ ಇಲ್ಲಿದೆ ವೈದ್ಯರಿಂದ ಉತ್ತರ
ಲೈಂಗಿಕ ಆರೋಗ್ಯ ಮತ್ತು ಇತರ ಆರೋಗ್ಯ ಸೇವೆಯ ಮೂಲಕ ಮಂಕಿಪಾಕ್ಸ್ ಸೋಂಕು ಹೆಚ್ಚಾಗಿದ್ದು, ಸೋಂಕು ಹೆಚ್ಚಳದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಆರೋಗ್ಯ ಕೇಂದ್ರಗಳ ಪಾತ್ರ ಹೆಚ್ಚಿದೆ. ಅಲ್ಲದೇ ಸಲಿಂಗಿಗಳಲ್ಲಿ ಸೋಂಕಿನ ಪ್ರಮಾಣ ಹೆಚಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 am, Tue, 7 June 22