ಬೆಂಗಳೂರು: ರಾಜ್ಯದಲ್ಲಿ ಡಿ.27ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಇದು ಮೂರೂ ಪಕ್ಷಗಳಿಗೆ ಬಹಳ ಮುಖ್ಯವಾಗಿದೆ. ತಳಮಟ್ಟದಲ್ಲಿ ಪಕ್ಷದ ಬಲಾಬಲವನ್ನು ಈ ಫಲಿತಾಂಶವೇ ಹೇಳಲಿರೋದ್ರಿಂದ, ಬಿಜೆಪಿ, ಕಾಂಗ್ರೆಸ್ ನಡುವೆ ನಾನಾ ಲೆಕ್ಕಾಚಾರಗಳು ಶುರುವಾಗಿವೆ. ಆದ್ರೆ ಜೆಡಿಎಸ್ ಮಾತ್ರ ಈ ಬಾರಿಯೂ ತನ್ನದೇ ಆದ ಗೇಮ್ ಪ್ಲ್ಯಾನ್ನಲ್ಲಿದೆ.
ಲೋಕಲ್ವಾರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಯಾರ ಕೈ ಮೇಲಾಗುತ್ತೆ, ಯಾರು ಮಕಾಡೆ ಮಲಗ್ತಾರೇ ಅನ್ನೋ ಲೆಕ್ಕಾಚಾರ ನಡೀತಿದೆ. ಪರಿಷತ್ ಕದನದ ಬಳಿಕ ನಡೆದಿರೋ ಸ್ಥಳೀಯ ಸಂಸ್ಥೆಗಳ ಫಲಿತಾಂಶದತ್ತ ಪಕ್ಷಗಳ ಗಮನ ಕೇಂದ್ರೀಕೃತವಾಗಿದೆ.
‘ಲೋಕಲ್ ಲಡಾಯಿ’ಯಲ್ಲಿ ಯಾರಿಗೆ ಬೀಳುತ್ತೆ ವಿಜಯ ಮಾಲೆ?
ಇಂದು ಹೊರಬೀಳಲಿರೋ ರಾಜ್ಯದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದತ್ತಲೇ ಮೂರೂ ಪಕ್ಷಗಳ ಚಿತ್ತ ನೆಟ್ಟಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಪಲಿತಾಂಶ ನೇರ ಪರಿಣಾಮ ಬೀರದಿದ್ರೂ, ಸ್ಥಳೀಯ ಮಟ್ಟದಲ್ಲಿ ಪಕ್ಷದ ಬಲಾಬಲ ಇದರ ಆಧಾರದಲ್ಲೇ ನಿರ್ಧಾರವಾಗಲಿದೆ. ಹೀಗಾಗಿ ಲೋಕಲ್ ಫೈಟ್ನ ರಿಸಲ್ಟ್ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಗೂ ಪ್ರತಿಷ್ಠೆ ಪ್ರಶ್ನೆಯಾಗಿದೆ.
‘ಲೋಕಲ್ ಸಮರ’ದಲ್ಲಿ ಯಾರಿಗೆ ಜಯ?
ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಡುವೆ ಚುನಾವಣೆ ನಡೆದಿದ್ದ ಕಾರಣ ಪ್ರಚಾರದಲ್ಲಿ ಪಕ್ಷಗಳ ಪ್ರಮುಖ ನಾಯಕರೇ ಭಾಗಿಯಾಗಿರಲಿಲ್ಲ. ಕೇವಲ 3-4 ಸಚಿವರಿಂದಷ್ಟೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ರು. ಹೀಗಾಗಿ ಸ್ಥಳೀಯ ನಾಯಕರ ಮುತುವರ್ಜಿಯಲ್ಲೇ ಚುನಾವಣೆ ನಡೆದಿತ್ತು. ಇನ್ನು ರಾಜ್ಯದಲ್ಲಿ ಆಡಳಿತ ಪಕ್ಷವಾಗಿರೋ ಬಿಜೆಪಿ, ಸಹಜವಾಗಿ ಹೆಚ್ಚು ಸ್ಥಾನ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ವಿಪಕ್ಷ ಕಾಂಗ್ರೆಸ್ ಕೂಡ ಹೆಚ್ಚು ಸ್ಥಾನ ಗೆದ್ದು ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ತಿದೆ. ಜೆಡಿಎಸ್ ಮಾತ್ರ ಈ ಬಾರಿಯೂ ಅಧಿಕಾರ ಹಿಡಿಯುವಲ್ಲಿ ಕಿಂಗ್ಮೇಕರ್ ಆಗೋ ಲೆಕ್ಕಾಚಾರದಲ್ಲಿದೆ ಎನ್ನಲಾಗ್ತಿದೆ.
ಒಟ್ನಲ್ಲಿ ಇಂದಿನ ಚುನಾವಣಾ ಫಲಿತಾಂಶದ ಮೇಲೆ ಮೂರೂ ಪಕ್ಷಗಳ ಚಿತ್ತ ನೆಟ್ಟಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾರ ಪಾರಮ್ಯ ಎಂಬುದಕ್ಕಷ್ಟೇ ಸೀಮಿತವಾಗಲಿರೋ ಚುನಾವಣೆಯಲ್ಲಿ, ಯಾರಿಗೆ ವಿಜಯ ಮಾಲೆ ಬೀಳುತ್ತೆ ಅನ್ನೋದು ಇನ್ನು ಕೆಲ ಸಮಯದಲ್ಲಿಯೇ ಗೊತ್ತಾಗಲಿದೆ.
ಇದನ್ನೂ ಓದಿ: Happiness Strategies: ಸದಾ ಖುಷಿಯಾಗಿರಲು ಈ ಮೂರು ನಿಯಮಗಳನ್ನು ಅಳವಡಿಸಿಕೊಳ್ಳಿ: ನಗುತ್ತಿರಿ