
ಬೆಂಗಳೂರು, (ಜುಲೈ 05): ಕರ್ನಾಟಕ ಬಿಜೆಪಿಯಲ್ಲಿನ (Karnataka BJP) ಒಳಜಗಳಗಳಿಗೆ ಬ್ರೇಕ್ ಹಾಕುವ ಕಾರ್ಯ ಶುರುವಾಗಿದೆ. ಹೌದು….ಮೊನ್ನೆ ನಡೆದ ಆರ್ ಎಸ್ ಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಕ್ಷದೊಳಗೆ ಮೊದಲು ಸಮನ್ವಯ ಮೂಡಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಆಗಾಗ ಸಭೆ ಸೇರುವುದೇ ಸಮನ್ವಯತೆ ಮೂಡಲು ಏಕೈಕ ಪರಿಹಾರ ಎಂಬುದನ್ನೂ ರಾಜ್ಯ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಲಾಗಿತ್ತು. ಇದರ ಬೆನ್ನಲ್ಲೇ ಇಂದು (ಜುಲೈ 05) ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ನಡುವೆ ಸಂಧಾನ ಮಾಡಿಸಿದ್ದು, ಈ ಸಂಧಾನ ಯಶಸ್ವಿಯಾಗಿದೆ.
ಇಂದು (ಜುಲೈ 05) ಬಿಜೆಪಿ ಕೋರ್ ಕಮಿಟಿ ಸಭೆ ಆರಂಭಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿದ್ದು, ಸಂಘ ಪರಿವಾರ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಸಭೆಯಲ್ಲಿ ಉಲ್ಲೇಖಿಸಿ ಇನ್ಮುಂದೆ ಬಹಿರಂಗ ಹೇಳಿಕೆ ನೀಡದಂತೆ ಸುಧಾಕರ್, ವಿಶ್ವನಾಥ್ ಹಾಗೂ ಸದಾನಂದಗೌಡ ಅವರಿಗೆ ತಾಕೀತು ಮಾಡಲಾಗಿದೆ. ಅಲ್ಲದೇ ಏನೇ ಸಮಸ್ಯೆಯಿದ್ರೂ ಪಕ್ಷದ ಕಚೇರಿಗೆ ಬಂದು ಚರ್ಚೆ ನಡೆಸಬೇಕು. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕೂಡ ಬಹಿರಂಗವಾಗಿ ಚರ್ಚಿಸಬೇಡಿ. ಇದು ನಿಮ್ಮ ಸಮಸ್ಯೆ ಅಷ್ಟೇ ಅಲ್ಲೇ, ಪಕ್ಷಕ್ಕೂ ಸಮಸ್ಯೆ ತಂದೊಡ್ಡಲಿದೆ. ದೊಡ್ಡ ಸಮಸ್ಯೆ ಆದ್ರೆ ನಾಯಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.
ಬಹಿರಂಗವಾಗಿ ಏಕವಚನದಲ್ಲಿ ಪರಸ್ಪರ ಬೈದಾಡಿಕೊಂಡು ಸವಾಲು ಹಾಕಿದ್ದ ಡಾ.ಕೆ.ಸುಧಾಕರ್ ಮತ್ತು S.R.ವಿಶ್ವನಾಥ್ ನಡುವೆ ನಡೆದ ಸಂಧಾನ ಸಭೆ ಸಕ್ಸಸ್ ಆಗಿದೆ. ಹಿರಿಯರ ಸಮ್ಮುಖದಲ್ಲಿ ಸಂಧಾನ ಆಗಿದ್ದು, ಜಟಾಪಟಿಯನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಪರಸ್ಪರ ಕಿತ್ತಾಡಿಕೊಳ್ಳೋದು ಇಬ್ಬರಿಗೂ ಶೋಭೆ ತರಲ್ಲ. ಪರಸ್ಪರ ಹೇಳಿಕೆಗಳನ್ನ ಕೊಡದಂತೆ ಇಬ್ಬರಿಗೂ ಸೂಚನೆ ನೀಡಲಾಗಿದೆ. ಹಿರಿಯರ ಮಾತಿಗೆ ಮನ್ನಣೆ ನೀಡಿದ ಇಬ್ಬರು ಸುಧಾಕರ್ ಹಾಗೂ ವಿಶ್ವನಾಥ್ ಪರಸ್ಪರ ಶೇಕ್ ಹ್ಯಾಂಡ್ ಮಾಡಿಕೊಂಡರು.
ಒಟ್ಟಿನಲ್ಲಿ ಆರ್ಎಸ್ಎಸ್ ನಾಯಕರು ಕೆಲವೊಂದಿಷ್ಟು ಬುದ್ಧಿ ಹೇಳಿದ್ದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು,ಕೆಲ ಸಲಹೆ ಸೂಚನೆಗಳೊಂದಿಗೆ ಪಕ್ಷದೊಳಗಿನ ಒಳಜಗಳಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಆದ್ರೆ, ನಾಯಕರು ಜಗಳ ಮಾಡಿಕೊಳ್ಳದೇ ಇಲ್ಲಿಗೆ ಕೈ ಬಿಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
Published On - 8:59 pm, Sun, 5 July 26