ದಾವಣಗೆರೆ, ಆಗಸ್ಟ್ 4: ಚಿತ್ರದುರ್ಗ (Chitradurga) ಜಿಲ್ಲೆಯ ಸಿರಿಗೆರೆ ತರಳಬಾಳು ಗುರುಪೀಠ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ಸ್ವಾಮೀಜಿರನ್ನು ಪೀಠದಿಂದ ಕೆಳಗೆ ಇಳಿಸಲು ಶಾಸಕ ಶಾಮನೂರ ಶಿವಶಂಕರಪ್ಪ (shamanur shivashankarappa) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಆಗಸ್ಟ್ 18ರಂದು ಸಿರಿಗೆರೆ ತರಳಬಾಳು ಮಠಕ್ಕೆ ಹೋಗಲು ನಿರ್ಧಾರ ಮಾಡಲಾಗಿದೆ. ಸ್ವಾಮೀಜಿರನ್ನು ಪೀಠದಿಂದ ಕೆಳಗೆ ಇಳಿಸಲು ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ.
ಸಿರಿಗೆರೆ ತರಳಬಾಳು ಗುರುಪೀಠ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ದ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತ್ರತ್ವದಲ್ಲಿ ಸ್ವಾಮೀಜಿ ವಿರುದ್ದ ಸ್ವ ಜಾತಿಯವರಿಂದಲೇ ಆಕ್ರೋಶ ವ್ಯಕ್ತವಾಗಿದೆ. ಹಾಲಿ ಶಾಸಕ ಬಿಪಿ ಹರೀಶ್, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಮಾಜಿ ಸಚಿವ ಬಿಸಿ ಪಾಟೀಲ್, ಎಸ್ಎ ರವೀಂದ್ರನಾಥ ಸೇರಿದಂತೆ ಪ್ರಮುಖರಿಂದ ಸ್ವಾಮೀಜಿರನ್ನು ಪೀಠದಿಂದ ಕೆಳಗೆ ಇಳಿಸುವ ಬಗ್ಗೆ ದಾವಣಗೆರೆ ನಗರದ ಹೊರವಲಯದ ಅಪೂರ್ವ ರೆಸಾರ್ಟ್ನಲ್ಲಿ ಮಹತ್ವದ ಸಭೆ ಮಾಡಲಾಗಿದೆ.
ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದು, ಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಭಕ್ತರ ಆಗ್ರಹದಿಂದ ತ್ಯಾಗ ಮಾಡಲಿಲ್ಲ. ನಂತರ ಮಠದ ಟ್ರಸ್ಟ್ ತಿದ್ದು ಮಾಡಿಕೊಂಡಿದ್ದಾರೆ. ಅದು ಅಗತ್ಯ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜನ್ಮದಿನ
ಕೋರ್ಟನಲ್ಲಿ ಈ ವಿಚಾರ ಇದೆ. ನಾವು ಕೆಲ ಜನ ಸೇರಿ ನಿರ್ಧಾರ ಮಾಡಬೇಕಾಗಿದೆ. ವೈಭವದಿಂದ ಇದ್ದ ಸಿರಿಗೆರೆ ಮಠಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸ್ವಾಮೀಜಿ ನಾನೇ ಇರುತ್ತೇನೆ ಎಂದು ಹಠ ಮಾಡಿದರೆ ಸಿರಿಗೆರೆ ಹಾಗೂ ಸಾಣಿಹಳ್ಳಿ ಸ್ವಾಮೀಜಿಗಳ ಬದಲಾಗಲಿ. ಉತ್ತರಾಧಿಕಾರಿಗಳನ್ನ ಮಾಡಲಿ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ನಾವು ನಡೆಸಲು ಬಂದವರು ಮಠದ ವಿರೋಧಿಗಳಲ್ಲ. ಮಠದಲ್ಲಿ ನಡೆಯುತ್ತಿರುವ ವ್ಯವಹಾರದ ಬಗ್ಗೆ ಧ್ವನಿ ಎತ್ತದಿದ್ದರೇ ಮಠ ಹಾಳಾಗಿ ಹೋಗುತ್ತದೆ. ಸಿರಿಗೆರೆ ಮಠ ಶಿಸ್ತಿಗೆ ಹೆಸರಾಗಿತ್ತು. ಈಗ ಬೇರೆಯವರು ನಮಗೆ ಬಂದು ಬುದ್ದಿ ಹೇಳುವ ಸ್ಥಿತಿ ಬಂದಿದೆ. ಮೊದಲು ಗುರುಗೆ ಹೆದರಿ ಶಿಷ್ಯರು ಇರುತ್ತಿದ್ದರು. ಆದರೆ ಸಿರಿಗೆರೆ ಮಠದ ಸ್ವಾಮೀಜಿ ಭಕ್ತರನ್ನ ಹೆದರಿಸುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಕೊಟ್ಟೂರು ತರಳಬಾಳು ಹುಣ್ಣಿಮೆ: ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ ಎಂದ ಶಿವಾಚಾರ್ಯ ಶ್ರೀ
ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರು ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಠದ ಆಸ್ತಿ ತಿನ್ನಲು ಬಹಳ ಜನ ಇದ್ದಾರೆ. ಅವರೇ ಸ್ವಾಮೀಜಿ ಪರ ಇದ್ದಾರೆ. ನಾನು ಈ ಹಿಂದೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ ಸಾಣಿಹಳ್ಳಿ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೆ. ಸಾಣಿಹಳ್ಳಿ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೇ ತಪ್ಪಾಯಿತು. ಸಿರಿಗೆರೆ ಸ್ವಾಮೀಜಿ ನಮ್ಮ ಯಾವುದೇ ಕಾರ್ಯಕ್ರಮಕ್ಕೆ ಕರೆದಿಲ್ಲ. ಮಠಕ್ಕೆ ನೂತನ ಪೀಠಾಧಿಪತಿ ಆಗಬೇಕು. ಸಂಘದ ಬೈಲಾ ತಿದ್ದುಪಡಿ ಸರಿ ಮಾಡಬೇಕು. ಇದಕ್ಕೆ ನಾನು ಹೋರಾಟ ಮಾಡಲು ಸಿದ್ದ ಎಂದು ಹೇಳಿದ್ದಾರೆ.
ಹಿರಿಯ ಮುಖಂಡ ಅಣಬೇರು ರಾಜಣ್ಣ ಪ್ರತಿಕ್ರಿಯಿಸಿದ್ದು, ತಕ್ಷಣಕ್ಕೆ ಮುಂದಿನ ಪೀಠಾಧಿಪತಿ ನೇಮಕ ಆಗಬೇಕು. ಸಾಧು ಲಿಂಗಾಯತ ಸಮಾಜದ ಸಿರಿಗೆರೆ ತರಳುಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಬೇಕಾದವನ್ನ ಸಂಘಕ್ಕೆ ಸೇರಿಸಿದ್ದಾರೆ. ಕೆಲ ಗುಂಡಾಗಳನ್ನ ಸೇರಿಸಿಕೊಂಡಿದ್ದಾರೆ. ಸ್ವಾಮೀಜಿಗಳು ತಕ್ಷಣಕ್ಕೆ ಹೊಸ ಪೀಠಾಧಿಪತಿ ಮಾಡಬೇಕು. ಮಠದ ಸಂಘದ ಬೈಲಾ ಬದಲಿಸಿದ್ದಾರೆ. ಇದು ಸರಿಯಾಗಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.