Omicron: ಕರ್ನಾಟಕದ ಮತ್ತೆ ಐವರಲ್ಲಿ ಒಮಿಕ್ರಾನ್ ಸೋಂಕು: ಸೋಂಕಿತರ ಒಟ್ಟು ಸಂಖ್ಯೆ 8ಕ್ಕೆ ಏರಿಕೆ
Coronavirus: ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ
ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ (ಡಿ 16) ಮತ್ತೆ ಐವರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು ಎಂಟು ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಂತೆ ಆಗಿದೆ. ಈ ಪೈಕಿ ನಾಲ್ಕು ಪ್ರಕರಣಗಳು ಹೈರಿಸ್ಕ್ ದೇಶದ ಸಂಪರ್ಕದಿಂದ ಬಂದಿವೆ. ಒಂದು ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದೆ ಸೋಂಕು ದೃಢಪಟ್ಟಿದೆ. ವಿದೇಶಿಯರ ಸಂಪರ್ಕದಿಂದ ಸೋಂಕು ಬಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.
ಬೆಳಗಾವಿಯಲ್ಲಿಯೂ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. 52 ವರ್ಷದ ಈ ವ್ಯಕ್ತಿಗೆ ನೈಜಿರಿಯಾದಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಬೆಳಗಾವಿಗೆ ಪ್ರಯಾಣ ಮಾಡಿದ್ದರು. ಪ್ರಸ್ತುತ ಸೋಂಕಿತ ವ್ಯಕ್ತಿಯು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 13ನೇ ತಾರೀಖು ಇವರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಇವರೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಮದುವೆಗೆ ಹೋಗಿ ಬಂದಿದ್ದವರಿಗೆ ಒಮಿಕ್ರಾನ್ ದೆಹಲಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿಬಂದಿದ್ದ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ ಒಮಿಕ್ರಾನ್ ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕಿತರು ಬೆಂಗಳೂರಿನ ಮಹದೇವಪುರ ನಿವಾಸಿಗಳು. 70 ವರ್ಷದ ಮಹಿಳೆ, 36 ವರ್ಷದ ಪುರುಷ ಸೋಂಕಿತರಿಗೆ ಒಮಿಕ್ರಾನ್ ದೃಢಪಟ್ಟಿತ್ತು. ಡಿಸೆಂಬರ್ 3ರಂದು ಇವರು ದೆಹಲಿಯಿಂದ ವಾಪಸ್ ಬಂದಿದ್ದರು. ಈ ಇಬ್ಬರಿಂದ ಮತ್ತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಮಹದೇವಪುರ ವಲಯದ ಒಮಿಕ್ರಾನ್ ಪ್ರಕರಣವು ಆತಂಕವನ್ನು ಹೆಚ್ಚಿಸಿದೆ.
ಇಂಗ್ಲೆಂಡ್ನಿಂದ ಹಿಂದಿರುಗಿದ್ದ ಯುವತಿಗೆ ಒಮಿಕ್ರಾನ್ ಇಂಗ್ಲೆಂಡ್ನಿಂದ ವಾಪಸಾಗಿದ್ದ ಯುವತಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಯುವತಿಯು ಡಿ.13ರಂದು ಇಂಗ್ಲೆಂಡ್ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೊದಲಿಗೆ ಟೆಸ್ಟ್ ಮಾಡಿದಾಗ ಕೊವಿಡ್ ಪಾಸಿಟಿವ್ ಬಂದಿತ್ತು. ಡಿ.13ರಂದೇ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ನಂತರ ಡಿ.14ರಂದು ಯುವತಿಯ ಮನವಿ ಮೇರೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಸದ್ಯಕ್ಕೆ ಸೋಂಕಿತ ಯುವತಿಯ ಆರೋಗ್ಯ ಸ್ಥಿರವಾಗಿದೆ. ಒಮಿಕ್ರಾನ್ ಸೋಂಕಿತೆ ಯಾರ ಜತೆಗೂ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಈ ಯುವತಿಯು ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು ಎಂದು ಮೂಲಗಳು ಹೇಳಿವೆ.
ಇಂದಿನ 16/12/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/IxeOU2m7p9 @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/9QWgvpNRBK
— K’taka Health Dept (@DHFWKA) December 16, 2021
ರಾಜ್ಯದಲ್ಲಿ 303 ಮಂದಿಗೆ ಸೋಂಕು ಒಮಿಕ್ರಾನ್ ಆತಂಕದ ನಡುವೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಗುರುವಾರ (ಡಿ.16) ಒಟ್ಟು 303 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರಿನಲ್ಲಿ 197 ಜನರು ಸೇರಿದ್ದಾರೆ. ಕೊರೊನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 7158ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ರೇಪ್ ಆಗುವಾಗ ತಡೆಯಲು ಆಗದಿದ್ದರೆ ಎಂಜಾಯ್ ಮಾಡಬೇಕು: ರಮೇಶ್ ಕುಮಾರ್ ಹೇಳಿಕೆಗೆ ನಕ್ಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದನ್ನೂ ಓದಿ: Gender Sensitivity: ಬೇಕಾಬಿಟ್ಟಿಯಾಗಿ ರೇಪ್ ಪದ ಬಳಕೆಗೆ ವಿಧಾನಸಭಾ ಸದಸ್ಯೆಯರ ಆಕ್ಷೇಪ
Published On - 10:36 pm, Thu, 16 December 21