ರೇಪ್ ಆಗುವಾಗ ತಡೆಯಲು ಆಗದಿದ್ದರೆ ಎಂಜಾಯ್ ಮಾಡಬೇಕು: ರಮೇಶ್ ಕುಮಾರ್ ಹೇಳಿಕೆಗೆ ನಕ್ಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು.
ಬೆಳಗಾವಿ: ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ಈ ಹೇಳಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕರು. ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು. ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ 6 ಗಂಟೆಯವರೆಗೆ ಸಮಯ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದ್ದರು.
‘ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ. ನನಗೆ ಸದನದ ಬ್ಯುಸಿನೆಸ್ ನಡೆಯುವುದು ಮುಖ್ಯ. ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್ದ ಸಿಚುಯೇಷನ್ ಅನ್ನೋ ರೀತಿ ಆಗಿದೆ ರಮೇಶ್ ಕುಮಾರ್ ಅವರೇ’ ಎಂದು ಹೇಳಿದರು. ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಎದ್ದುನಿಂತು ಪ್ರತಿಕ್ರಿಯಿಸಿದ ರಮೇಶ್ಕುಮಾರ್, ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದರು. ಶಾಸಕ ರಮೇಶ್ ಕುಮಾರ್ ಮಾತಿಗೆ ಸ್ಪೀಕರ್ ಕಾಗೇರಿ ನಕ್ಕರು.
ಹಿಂದೆಯೂ ಇಂಥದ್ದೇ ಹೇಳಿಕೆ ನೀಡಿದ್ದ ರಮೇಶ್ ಕುಮಾರ್ ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದಾಗಲೂ ರಮೇಶ್ ಕುಮಾರ್ ಅವರು ಇಂಥದ್ದೇ ಹೇಳಿಕೆ ನೀಡಿದ್ದರು. ಬಿಜೆಪಿಯು ಅವರ ಹೇಳಿಕೆಯನ್ನು ಖಂಡಿಸಿ ರಾಜೀನಾಮೆಗೆ ಒತ್ತಾಯಿಸಿತ್ತು. ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ಕ್ಷಮೆಯಾಚಿಸಿದ್ದರು. ಆದರೆ ಇಂದು ರಮೇಶ್ ಕುಮಾರ್ ಮತ್ತೊಮ್ಮೆ ಅಂಥದ್ದೇ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿಯಿಂದ ಆಯ್ಕೆಯಾದವರು ಸಹ ಈ ಹೇಳಿಕೆಯನ್ನು ಖಂಡಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಫೆಬ್ರುವರಿ 13, 2019ರಂದು ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಆಡಿಯೊ ಕ್ಲಿಪ್ ಕುರಿತು ನಡೆಯುತ್ತಿದ್ದ ಚರ್ಚೆ ಕಾವೇರಿದಾಗ ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್ ಕುಮಾರ್ ಅವರು, ‘ನನ್ನ ಸ್ಥಿತಿ ರೇಪ್‌ಗೆ ಒಳಗಾದವರಂತಾಗಿದೆ’ ಎಂದಿದ್ದರು. ಈ ಕೀಳು ಅಭಿರುಚಿಯ ಹೇಳಿಕೆಯನ್ನು ಖಂಡಿಸದ ಸದಸ್ಯರು ನಕ್ಕಿದ್ದರು. ‘ರೇಪ್ ಒಂದೇ ಸಲ ಆಗಿ ಹೋಗಿರುತ್ತದೆ. ಆದರೆ ವಿಚಾರಣೆ ವೇಳೆ ಯಾರು ಮಾಡಿದರು, ಎಲ್ಲಿ ಮಾಡಿದರು, ಹೇಗೆ ಮಾಡಿದರು, ಎಷ್ಟೊತ್ತು ಮಾಡಿದರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಪದೇ ಪದೇ ಕೇಳಿ ಕಿರಿಕಿರಿ ಉಂಟು ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ನನ್ನ ಸ್ಥಿತಿಯೂ ಹಾಗೆಯೇ ಆಗಿದೆ’ ಎಂದು ಸದನದ ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್ ಕುಮಾರ್ ಹೇಳಿದ್ದರು.
ಸಾರ್ವಜನಿಕರು ನೇರಪ್ರಸಾರದಲ್ಲಿ ನೋಡುತ್ತಿರುವ (ಮಹಿಳೆಯರು ಸೇರಿದಂತೆ) ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನೆನ್ನೆ ರೇಪ್ ಸಂಬಂದ ಮಾಡಿದ ಒಂದು ವ್ಯಾಖ್ಯಾನ ಸರಿಯೇ? ಮಹಿಳೆಯನ್ನ ಹೀಯಾಳಿಸಿದ್ದು ಎಷ್ಟರ ಮಟ್ಟಿಗೆ ಸರಿ? ಇದು ಸದನದ ಮತ್ತು ಸ್ಪೀಕರ್ ಘನತೆಗೆ ತಕ್ಕುದಾಗಿತ್ತೆ??? @BSYBJP @hd_kumaraswamy @siddaramaiah @dineshgrao
— Sanjaya Gowdar S (@sanjayags) February 13, 2019
ಇದನ್ನೂ ಓದಿ: ಬಿಟ್ಕಾಯಿನ್ ಆರೋಪಿ ಶ್ರೀಕಿ ಉಳಿಸಲು ಸರ್ಕಾರದ ಯತ್ನ: ಪ್ರತಿಪಕ್ಷಗಳ ಆರೋಪ ಗೃಹ ಸಚಿವರ ಉತ್ತರ ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಎರಡು ದೊಡ್ಡ ಚಿತಾಗಾರ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ
Published On - 9:20 pm, Thu, 16 December 21