ಗರ್ಭಿಣಿ ಸ್ತ್ರೀಯರ ಅನ್ನಕ್ಕೆ ಕನ್ನ ಹಾಕಿದ್ರೂ ಮಹಿಳಾ ಮತ್ತು ಮಕ್ಕಳ ಇಲಾಖೆ ಡೋಂಟ್ ಕೇರ್ ಅಂತಿದೆ!
ಆ ಜಿಲ್ಲೆಯಲ್ಲಿ ಇಷ್ಟು ದಿನ ಬಡವರ ಹೊಟ್ಟೆ ಸೇರಬೇಕಾದ ಅನ್ನ ಭಾಗ್ಯ ಅಕ್ಕಿಯ ಅಕ್ರಮ ದಂಧೆಕೋರರ ಪಾಲಾಗ್ತಾಯಿದ್ವು, ಆದ್ರೆ ಈಗ ಆ ಅಕ್ಕಿ ಕಳ್ಳರ ಕಣ್ಣು ಮಕ್ಕಳ ಅನ್ನದ ಮೇಲೂ ಬಿದ್ದಿದೆ. ಅನ್ನಭಾಗ್ಯ, ಅಂಗನವಾಡಿ ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ನೀಡಬೇಕಾದ ಪೌಷ್ಠಿಕ ಆಹಾರ ರಾಜಾರೋಷವಾಗಿ ಕಳ್ಳ ಸಾಗಾಟ ನಡೆಯುತ್ತಿದೆ.
ಗದಗ: ನಗರದ ಟ್ಯಾಗೋರ್ ರಸ್ತೆಯ ನಿವಾಸಿ ಬಸವರಾಜ ವಾಲಿ ಎನ್ನುವರು ತಮ್ಮ ಮನೆಯನ್ನು ಮಹಾಂತೇಶ ಎನ್ನುವ ವ್ಯಕ್ತಿಗೆ ಬಾಡಿಗೆ ನೀಡಿದ್ದಾರೆ. ಈ ಮನೆಯಲ್ಲಿ ಪಡಿತರ ಅಕ್ಕಿ, ಅಂಗನವಾಡಿ ಕೇಂದ್ರದ ಗೋಧಿ, ತೊಗರಿ ಬೆಳೆ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ರು.
ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ ಖದೀಮರು ಎಸ್ಕೇಪ್ ಆಗಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮಕ್ಕಳು, ಬಾಣಂತಿಯರು, ಗರ್ಭಿಣಿ ಸ್ತ್ರೀಯರಿಗೆ ನೀಡುವ ಗೋಧಿ ಹಿಟ್ಟಿನ ಚೀಲ, ಗೋಧಿ, ತೊಗರಿ ಬೇಳೆ ಪತ್ತೆಯಾಗಿದೆ. ಹಾಗೇ ಅನ್ನ ಭಾಗ್ಯ ಅಕ್ಕಿಯ 50 ಕೆಜಿಯ 100 ಕ್ಕೂ ಹೆಚ್ಚು ಚೀಲಗಳು ಪತ್ತೆಯಾಗಿವೆ. ಆದ್ರೆ ದಾಳಿ ನಡೆದ್ರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಯಾವ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿಲ್ಲ.
ವಿವಿಧ ಬ್ರ್ಯಾಂಡ್ ಹೆಸರಿನ ಚೀಲಗಳು ಪತ್ತೆ ಇನ್ನು ಅನ್ನ ಭಾಗ್ಯ ಅಕ್ಕಿಯನ್ನು ವಿವಿಧ ಬ್ರ್ಯಾಂಡ್ ಹೆಸರಿನಲ್ಲಿ 50 ಕೆಜಿ ತೂಕದ ಚೀಲಗಳನ್ನು ಶೇಖರಣೆ ಮಾಡಲಾಗಿದೆ. ತೂಕದ ಯಂತ್ರ, ವಿವಿಧ ಕಂಪನಿಯ ಬ್ರ್ಯಾಂಡ್ ಇರುವ ಚೀಲಗಳು ಸಹ ಪತ್ತೆಯಾಗಿವೆ. ಗದಗ ಜಿಲ್ಲೆಯಿಂದಲೇ ಬೇರೆ ಬೇರೆ ಬ್ರ್ಯಾಂಡ್ ಚೀಲಗಳಲ್ಲಿ ವಿವಿಧೆಡೆಗೆ ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮನೆ ಬಾಡಿಗೆ ಪಡೆದು ದೊಡ್ಡ ದೊಡ್ಡ ಕುಳಗಳು ಈ ದಂಧೆ ಮಾಡ್ತಾಯಿರೋ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಅಕ್ರಮ ಅನ್ನಭಾಗ್ಯ ದಂಧೆ ಪ್ರಕರಣಗಳು ಇತ್ತೀಚೆಗೆ ದಾಖಲಾಗಿವೆ. ಆದ್ರೂ ಕೂಡಾ ಅಕ್ಕಿ ದಂಧೆಕೋರರು ಅಕ್ರಮವಾಗಿ ಅಕ್ಕಿ ದಂಧೆಯನ್ನು ಅವ್ಯಾಹತವಾಗಿ ನಡೆಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಗಂಗಾವತಿಯಲ್ಲಿ.. ಅಕ್ರಮವಾಗಿ ‘ಅನ್ನಭಾಗ್ಯ’ ಅಕ್ಕಿ ಸಾಗಿಸುತ್ತಿದ್ದ 4 ಲಾರಿ ಖಾಕಿ ವಶಕ್ಕೆ