ಲಕ್ಷಾಂತರ ರೂಪಾಯಿ ವೆಚ್ಚದ ಅರಣ್ಯ ಮಾಹಿತಿ ಕೇಂದ್ರ.. ಪಾಳು ಬಿದ್ದಿದೆ!

ಲಕ್ಷಾಂತರ ರೂಪಾಯಿ ವೆಚ್ಚದ ಅರಣ್ಯ ಮಾಹಿತಿ ಕೇಂದ್ರ.. ಪಾಳು ಬಿದ್ದಿದೆ!
ಅರಣ್ಯ ಮಾಹಿತಿ ಕೇಂದ್ರ

Forest Information Center: ಮುಖ್ಯವಾಗಿ ಈ ಅರಣ್ಯ ಮಾಹಿತಿ ಕೇಂದ್ರಕ್ಕೆ ಅನುದಾನ ಸಹ ಇಲ್ಲಾ. ಹೀಗಾಗಿ ಇದನ್ನ ನೋಡಿಕೊಳ್ಳಲು ಸಿಬ್ಬಂದಿಗಳು ಕೂಡಾ ಇಲ್ಲಾ. ಇನ್ನೂ ನಗರದಿಂದ ನಾಲ್ಕೈದು ಕಿಲೋಮೀಟರ್ ಕಾಡಿನಲ್ಲಿ ಈ ಮಾಹಿತಿ ಕೇಂದ್ರವಿದ್ದು ಮಕ್ಕಳು ಸಾರ್ವಜನಿಕರು ಇಲ್ಲಿಗೆ ಹೋಗಲು ವಾಹನದ ಸೌಕರ್ಯವೂ ಇಲ್ಲಾ.

sandhya thejappa

| Edited By: sadhu srinath

Feb 19, 2021 | 5:51 PM

ಬೀದರ್: ಮಕ್ಕಳಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅರಣ್ಯ ಮಾಹಿತಿ ಕೇಂದ್ರ ಸ್ಥಾಪಿಸಲಾಯಿತು. ಒಂದೊಂದು ಕಾಡು ಪ್ರಾಣಿಗೆ ಲಕ್ಷ ಲಕ್ಷ ರೂಪಾಯಿ ಕೊಟ್ಟು ತಂದಿಡಲಾಗಿದೆ. ಆದರೆ ಇಂತಹ ಒಂದು ಪ್ರಾಣಿ ಸಂಗ್ರಾಲಯ ಇದೆ ಎನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ. ಹೀಗಾಗಿ ಅಪರೂಪದ ಅರಣ್ಯ ಮಾಹಿತಿ ಕೇಂದ್ರ ಪಾಳು ಬಿದ್ದಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹುಲಿ, ಸಿಂಹ, ಚಿರತೆ, ಜಿಂಕೆ, ಕಾಡುಕೋಣ, ನಾನಾ ಬಗೆಯ ಪ್ರಾಣಿಗಳು ಇಲ್ಲಿದ್ದು ಇದರ ವೀಕ್ಷಿಸಲು ಜನರು ಬರುತ್ತಿಲ್ಲ. ನೈಜ ಕಾಡು ಪ್ರಾಣಿಗಳ ಚರ್ಮದಿಂದ ತಯಾರಿಸಿದ ಅಪರೂಪದ ವನ್ಯಜೀವಿಗಳು ಜಿಲ್ಲೆಯಲ್ಲಿವೆ. ಜನರಿಗೆ ಮಾಹಿತಿಯ ಕೊರತೆ, ಅರಣ್ಯ ಇಲಾಖೆಯ ಇಚ್ಚಾಶಕ್ತಿಯ ಕೊರತೆಯಿಂದ ಸದ್ಯ ಮಾಹಿತಿ ಕೇಂದ್ರ ಪಾಳುಬಿದ್ದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ಅರಣ್ಯ ಸಂಪತ್ತು ಜಿಲ್ಲೆಯಲ್ಲಿದೆ. ಜೊತೆಗೆ ಇಲ್ಲಿನ ಕಾಡು ಪ್ರದೇಶದಲ್ಲಿ ಚಿಂಕೆ, ಕೃಷ್ಣಮೃಗ, ಮೊಲ, ತೋಳ, ನರಿಗಳು ಇಲ್ಲಿ ಹೇರಳವಾಗಿದ್ದು ಇಲ್ಲಿನ ಜನರು ಆಗಾಗ ಈ ಕಾಡು ಪ್ರಾಣಿಗಳ ದರ್ಶನ ಮಾಡುತ್ತಾರೆ. ಆದರೆ ಇಲ್ಲಿನ ಜನರಿಗೆ, ಮಕ್ಕಳಿಗೆ ಹುಲಿ, ಸಿಂಹ, ಕಾಡುಕೋಣ, ಕಾಡುಕುರಿಗಳನ್ನ ಪುಸ್ತಕದಲ್ಲಿ ಮಾತ್ರ ನೋಡಿರುತ್ತಾರೆ ಅಥವಾ ಶ್ರೀಮಂತ ವರ್ಗದ ಜನರು ಮೃಗಾಲಯಕ್ಕೆ ಹೋಗಿ ನೋಡಿರುತ್ತಾರೆ. ಆದರೆ ಮದ್ಯಮವರ್ಗದ ಜನರಿಗೆ ಮಕ್ಕಳಿಗೆ ಈ ಅಪರೂಪದ ಪ್ರಾಣಿಗಳನ್ನ ನೋಡುವ ಭಾಗ್ಯ ಸಿಕ್ಕಿರುವುದಿಲ್ಲ.

ಹೀಗಾಗಿ ಕಾಡು ಪ್ರಾಣಿಗಳನ್ನ ಹತ್ತಿರದಿಂದ ತೋರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲ ಬಾರಿ 1997 ರಲ್ಲಿ ಅರಣ್ಯ ಮಾಹಿತಿ ಕೇಂದ್ರ ಸ್ಥಾಪಿಸಲಾಯಿತು. ಇದರಲ್ಲಿ ನೈಜ ಕಾಡು ಪ್ರಾಣಿಗಳ ಚರ್ಮದಿಂದ ಜೀವವಿರುವ ಪ್ರಾಣಿಗಳಂತೆ ತಯಾರಿಸಿದ ಹಾಗೂ ಅದೇ ರೀತಿ ಕಾಣಿಸುವ ಹುಲಿ, ಸಿಂಹ, ಕಾಡುಎಮ್ಮೆ, ಕಾಡುಕುರಿ, ಕಡವೆ, ನೀಲಗಾಯಿ, ಚಿರತೆ ಹೀಗೆ ಹತ್ತು ಹಲವಾರು ಪ್ರಾಣಿಗಳು ಇಲ್ಲಿದ್ದು ಇದರ ಬಳಕೆ ಮಾತ್ರ ಮಕ್ಕಳಿಗೆ ಆಗುತ್ತಿಲ್ಲ. ಇದರ ಬಗ್ಗೆ ಅರಣ್ಯ ಇಲಾಖೆಯವರು ಪ್ರಚಾರ ಮಾಡಿದರೆ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಕಾಡು ಪ್ರಾಣಿಗಳ ನೋಡುವುದರ ಜೊತೆಗೆ ಮಕ್ಕಳ ಅಧ್ಯಯನಕ್ಕೂ ಅನುಕೂಲವಾಗಲಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಅರಣ್ಯ ಮಾಹಿತಿ ಕೇಂದ್ರದಲ್ಲಿರುವ ಪ್ರಾಣಿಗಳು

ಜೀವಂತಿಕೆ ಪಡೆದ ಸತ್ತ ಪಾಣಿ ಪಕ್ಷಿಗಳು ಇಲ್ಲಿರುವ ಪ್ರಾಣಿಗಳಿಗೆ ಜೀವವಿಲ್ಲ. ಆದರೆ ಜೀವಂತಿಕೆ ಇದೆ. ಚರ್ಮ ಪ್ರಸಾಧನ/ಪ್ರಾಣಿ ಪ್ರಸಾಧನ ಕಲೆಯ ಮೂಲಕ ಸತ್ತ ಪ್ರಾಣಿಗಳೂ ಜೀವಂತವಿರುವ ಪ್ರಾಣಿಗಳ ಹಾಗೆ ಕಾಣುವಂತೆ ಮಾಡಲಾಗಿದೆ. ಅಳಿವಿನಂಚಿನ ಸರೀಸೃಪಗಳು, ಪ್ರಾಣಿ, ಪಕ್ಷಿ ಸೇರಿದಂತೆ 10 ಕ್ಕೂ ಹೆಚ್ಚು ಸತ್ತ ಪ್ರಾಣಿಗಳು ಈ ಸಂಗ್ರಹಾಲಯದಲ್ಲಿ ಜೀವಂತಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕಾಗಿ ಈ ಅರಣ್ಯ ಮಾಹಿತಿ ಕೇಂದ್ರವನ್ನು ಅಳಿದು ಬದುಕಿದ ಪ್ರಾಣಿಗಳ ತಾಣ ಎನ್ನುತ್ತಾರೆ.

ಜಿಲ್ಲೆಯ ಅತೀ ಹಳೆಯ ಪ್ರಾಣಿ ಸಂಗ್ರಾಲಯವಾಗಿದ್ದು 23 ವರ್ಷಗಳ ಹಿಂದೆ ಇದನ್ನ ಇಲ್ಲಿ ಸ್ಥಾಪಿಸಲಾಗಿದೆ. ಶಾಲೆ, ಕಾಲೇಜು ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗಲಿ ಜೊತೆಗೆ ಕಾಡು ಪ್ರಾಣಿ ಜೀವಂತವಿದ್ದಾಗ ಹೇಗೆ ಇರುತ್ತದೆ. ಅದರ ಆಕಾರ, ಉದ್ದ, ಅಗಲ, ಬಣ್ಣ, ಅದರ ಕಣ್ಣುಗಳು, ಕಾಲು, ಹೀಗೆ ಎಲ್ಲವನ್ನ ಮಕ್ಕಳಿಗೆ ತೋರಿಸಿ ಕಾಡು ಅವುಗಳ ಬದುಕಿನ ಬಗ್ಗೆ ತಿಳಿಸುವ ಉದ್ದೇಶದಿಂದ ಸ್ಥಾಪನೆ ಮಾಡಲಾಯಿತು. ಕಾಲ ಕಳೆದಂತೆ ಈ ಅರಣ್ಯ ಮಾಹಿತಿ ಕೇಂದ್ರಕ್ಕೆ ಮಕ್ಕಳು ಬರಲು ಹಿಂದೇಟು ಹಾಕಿದ ಪರಿಣಾಮದ ಜೊತೆಗೆ ಅರಣ್ಯ ಇಲಾಖೆಯವರು ಇದರ ಬಗ್ಗೆ ಪ್ರಚಾರ ಮಾಡದೆ ಇರುವುದರಿಂದ ಇಂದು ಹಾಳಾಗುತ್ತಿದೆ.

ಅನುದಾನ ಕೊರತೆ ಮುಖ್ಯವಾಗಿ ಈ ಅರಣ್ಯ ಮಾಹಿತಿ ಕೇಂದ್ರಕ್ಕೆ ಅನುದಾನ ಸಹ ಇಲ್ಲಾ. ಹೀಗಾಗಿ ಇದನ್ನ ನೋಡಿಕೊಳ್ಳಲು ಸಿಬ್ಬಂದಿ ಕೂಡಾ ಇಲ್ಲಾ. ಇನ್ನು, ನಗರದಿಂದ ನಾಲ್ಕೈದು ಕಿಲೋ ಮೀಟರ್ ಕಾಡಿನಲ್ಲಿ ಈ ಮಾಹಿತಿ ಕೇಂದ್ರವಿದ್ದು ಮಕ್ಕಳು, ಸಾರ್ವಜನಿಕರು ಇಲ್ಲಿಗೆ ಹೋಗಲು ವಾಹನದ ಸೌಕರ್ಯವೂ ಇಲ್ಲಾ. ಹೀಗಾಗಿ ಅಪರೂಪದಲ್ಲಿ ಅಪರೂಪದಂತಿರುವ ಈ ಪ್ರಾಣಿ ಸಂಗ್ರಾಲಯ ಹಾಳಾಗುತ್ತಿದೆ. ಈ ಬಗ್ಗೆ ಅಧಿಕಾರಿಯನ್ನ ಕೇಳಿದರೆ ಯಾರು ಬೇಕಾದರೂ ಬಂದು ಇಲ್ಲಿ ವೀಕ್ಷಣೆ ಮಾಡಬಹುದು. ಆದರೆ ಜನರು ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಅರಣ್ಯ ಮಾಹಿತಿ ಕೇಂದ್ರದಲ್ಲಿರುವ ಜಿಂಕೆಗಳು

ಪಾಳುಬಿದ್ದ ಅರಣ್ಯ ಮಾಹಿತಿ ಕೇಂದ್ರ

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸತ್ತ ಪ್ರಾಣಿಗಳ ಚರ್ಮ ಸಂರಕ್ಷಿಸಿ ಆ ಪ್ರಾಣಿಯ ರೂಪವನ್ನೇ ಇಲ್ಲಿ ಕೊಡಲಾಗಿರುವ ಪ್ರಾಣಿಗಳು ಇಲ್ಲಿವೆ. ಸರಿ ಸುಮಾರು 23 ವರ್ಷಗಳು ಉರುಳಿದರೂ ಕೂಡಾ ಇಲ್ಲಿರುವ ಪಾಣಿಗಳಿಗೆ ಏನೂ ಆಗಿಲ್ಲ. ಇನ್ನು ಜೀವಂತವಿರುವ ಪ್ರಾಣಿಗಳಿಗಿಂತ ಹೆಚ್ಚಿನ ಆರ್ಕಷಣೆಯೊಂದಿಗೆ ಕಾಣಿಸುತ್ತಿದ್ದು ಇದರ ಬಗ್ಗೆ ಶಾಲೆ ಕಾಲೇಜು ಮಟ್ಟದಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಿ ಮಕ್ಕಳನ್ನ ಇಲ್ಲಿಗೆ ಕರೆ ತರುವಂತೆ ಮಾಡಿದರೆ ಕಾಡು ಪ್ರಾಣಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದಂತಾಗುವುದರ ಜೊತೆಗೆ ಈ ಅರಣ್ಯ ಮಾಹಿತಿ ಕೇಂದ್ರ ಜಿಲ್ಲೆಯಲ್ಲಿರೋದಕ್ಕೆ ಬೆಲೆ ಬಂದಂತಾಗುತ್ತದೆ.

ಇದನ್ನೂ ಓದಿ: ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು

ಇದನ್ನೂ ಓದಿ: Shabnam Ali | ಸ್ವಾತಂತ್ರ್ಯ ಬಂದ ನಂತರ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ಹೆಣ್ಣು ಶಬನಂ ಅಲಿ: ಯಾರೀಕೆ? ಏನು ಅಪರಾಧ?

Follow us on

Most Read Stories

Click on your DTH Provider to Add TV9 Kannada