ತಡರಾತ್ರಿಯವರೆಗೂ ರೆಸ್ಟೋರೆಂಟ್ಗಳಿಂದ ಶಬ್ದ; HSR ಬಡಾವಣೆ ನಿವಾಸಿಗಳ ಪರದಾಟ
ಶಬ್ದ ಮಾಲಿನ್ಯದಿಂದ ನಿವಾಸಿಗಳು ಕಷ್ಟಪಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ. ಆದರೆ, ಈ ಬಗ್ಗೆ ರೆಸ್ಟೋರೆಂಟ್ ಆಡಳಿತ ನಡೆಸುತ್ತಿರುವವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಬೆಂಗಳೂರು: HSR ಬಡಾವಣೆಯ 4ನೇ ವಲಯದಲ್ಲಿ ಸಮೀಪವಿರುವ ರೆಸ್ಟೋರೆಂಟ್ಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರು ನೀಡುತ್ತಿದ್ದಾರೆ. ಮಧ್ಯರಾತ್ರಿ 12 ಕಳೆದರೂ ರೆಸ್ಟೋರೆಂಟ್ಗಳು ತೆರೆದಿರುತ್ತವೆ. 1 ಗಂಟೆಯವರೆಗೆ ಹೋಟೆಲ್ ಕಾರ್ಯನಿರ್ವಹಿಸುತ್ತಿರುತ್ತದೆ. ದೊಡ್ಡದಾಗಿ ಹಾಡುಗಳು, ಮ್ಯೂಸಿಕ್, ಸಂಭ್ರಮಾಚರಣೆ ಮಾಡಲಾಗುತ್ತದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಬಹಳ ಕಷ್ಟ ಎದುರಿಸುವಂತಾಗಿದೆ.
ಶಬ್ದಮಾಲಿನ್ಯದಿಂದ ನಿವಾಸಿಗಳು ಕಷ್ಟಪಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ. ಆದರೆ, ಈ ಬಗ್ಗೆ ರೆಸ್ಟೋರೆಂಟ್ ಆಡಳಿತ ನಡೆಸುತ್ತಿರುವವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ವಿಚಾರವಾಗಿ ಸ್ಥಳೀಯರು ಹಾಗೂ ರೆಸ್ಟೋರೆಂಟ್ಗೆ ಸಂಬಂಧಪಟ್ಟವರ ನಡುವೆ ಸಣ್ಣಪುಟ್ಟ ವಾಗ್ವಾದಗಳು ನಡೆದ ಘಟನೆಗಳೂ ಆಗಿವೆ. ವಿಲಾಸಿ ರೆಸ್ಟೋರೆಂಟ್ಗಳಿಂದ ಬರುತ್ತಿರುವ ಶಬ್ದದಿಂದ ನಿದ್ದೆ ಮಾಡಲೂ ಕಷ್ಟವಾಗುತ್ತಿದೆ ಎಂದು ಹಲವು ಜನರು ಅಳಲು ತೋಡಿಕೊಂಡಿದ್ದಾರೆ. ಇಷ್ಟಾದ ಬಳಿಕವೂ ಯಾವುದೇ ಪ್ರಯೋಜನ ಉಂಟಾಗಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಈ ಕುರಿತು ದೂರು ನೀಡಿದರೆ, ದೂರು ನೀಡಿದ ಕೆಲವು ದಿನಗಳ ಕಾಲ ರೆಸ್ಟೋರೆಂಟ್ ಬೇಗ ಮುಚ್ಚಿದೆ. ಶಬ್ದ ಮಾಲಿನ್ಯವೂ ಕಡಿಮೆ ಮಾಡಿದೆ. ಆದರೆ, ಇದೆಲ್ಲಾ ಸ್ವಲ್ಪ ದಿನವಷ್ಟೇ. ಕೆಲವು ದಿನಗಳು ಕಳೆದ ಮೇಲೆ ಮತ್ತೆ ಮೊದಲಿನಂತೆ ರಾತ್ರಿ 1 ಗಂಟೆಯವರೆಗೂ ಶಬ್ದ ಮಾಲಿನ್ಯ, ಸಮಸ್ಯೆಗಳು ಮುಂದುವರಿದಿದೆ. ಹೊಗೆ ಸೂಸುವ ನಾಲೆಗಳು ಮಾಡುವ ಶಬ್ದ ಕೂಡ ಬಹಳ ಕಿರಿಕಿರಿ ಉಂಟುಮಾಡಿದೆ.
ಇದಕ್ಕೆ ಹೋಟೆಲ್ ಮಾಲಿಕರು ಕೂಡ ಸ್ಪಷ್ಟನೆ ನೀಡಿದ್ದಾರೆ. ಸ್ಥಳೀಯರು ದೂರು ನೀಡಿದ ಕಾರಣ ಹೊಗೆ ಕೊಳವೆಗಳನ್ನು ಮೇಲಿನ ಮಹಡಿಗೆ ಸ್ಥಳಾಂತರಿಸಿದೆವು. ಆದರೆ, ಇದರಿಂದ ಕೆಲಸಗಾರರಿಗೆ ಕೆಲಸ ಮಾಡಲು ಕಷ್ಟವಾಗಿ ಮತ್ತೆ ಯಥಾಸ್ಥಿತಿ ಮುಂದುವರಿಸಬೇಕಾಯಿತು ಎಂದು ತಿಳಿಸಿದ್ದಾರೆ. ಸ್ಥಳೀಯ ಜಿಮ್ಗಳಿಂದಲೂ ಇಂತಹುದೇ ಸಮಸ್ಯೆ ಎದುರಾಗಿರುವ ಬಗ್ಗೆ ನಾಗರಿಕರು ದೂರು ನೀಡಿದ್ದಾರೆ. ಪೊಲೀಸರಿಗೆ ಹಾಗೂ BBMPಯವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇಲ್ಲಿ ಕೇವಲ ಸಮಸ್ಯೆ ಉಂಟಾಗಿದೆ ಎಂದಷ್ಟೇ ಅಲ್ಲ. ಕೆಲವು ರೆಸ್ಟೋರೆಂಟ್ ಮಾಲೀಕರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಉದಾಹರಣೆಗಳೂ ಇವೆ. HSR ಬಡಾವಣೆ, 4ನೇ ವಲಯದ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ನ ಅಧ್ಯಕ್ಷ ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದರು. ಅವರು ಮನೆಯ ಸಮೀಪದ ರೆಸ್ಟೋರೆಂಟ್ ಅಡುಗೆ ಕೋಣೆಯಿಂದ ಬರುತ್ತಿದ್ದ ಶಬ್ದದಿಂದಲೂ ಕಿರಿಕಿರಿ ಅನುಭವಿಸುತ್ತಿದ್ದರು. ಈ ಕುರಿತು ಹೋಟೆಲ್ ಮಾಲೀಕರಿಗೆ ದೂರು ನೀಡಿದಾಗ, ಅವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೋಟೆಲ್ ಅಥವಾ ರೆಸ್ಟೋರೆಂಟ್ ಕಟ್ಟಡದ ನಡುವೆ ಕಾಂಕ್ರೀಟ್ ಕಟ್ಟಡ ಕಟ್ಟುವ ಭರವಸೆ ನೀಡಿದ್ದಾರೆ. ಅಡುಗೆ ಕೋಣೆ ಹಾಗೂ ಇತರ ಶಬ್ದಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದಾರೆ ಎಂದು ‘ರೆಸಿಡೆಂಟ್ಸ್ ವಾಚ್’ ಜಾಲತಾಣ ವರದಿ ಮಾಡಿದೆ.
BBMP ಯೋಜನೆ 2015ರ ಪ್ರಕಾರ ರಸ್ತೆ ಅಗಲ 40 ಅಡಿಗಿಂತ ಹೆಚ್ಚಿದ್ದರೆ, ಶೇ. 20ರಷ್ಟು ಸ್ಥಳವನ್ನು ವಾಣಿಜ್ಯ ಮತ್ತು ಇತರ ಕೆಲಸಗಳಿಗಾಗಿ ಬಳಸಬಹುದಾಗಿದೆ. ಅಂದರೆ, ವಾಣಿಜ್ಯ ಉದ್ಯಮಗಳು ನಡೆಯುವ ಪ್ರದೇಶಗಳಲ್ಲಿ ಶಬ್ದದ ಮಿತಿಯು, ವಾಸಕ್ಕೆ ನಿಗದಿಪಡಿಸಿದ ಸ್ಥಳಗಳಲ್ಲಿ ಇರುವ ಮಿತಿಗಿಂತ ಹೆಚ್ಚಾಗಿರುತ್ತದೆ. ಹಾಗಾಗಿ, BBMP ಶಬ್ದ ಮಾಲಿನ್ಯ ಸಮಸ್ಯೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎನ್ನಲಾಗುತ್ತಿದೆ.
ಮೊದಲು ಈ ಪ್ರದೇಶಗಳು ಜನವಸತಿ ಪ್ರದೇಶಗಳಾಗಿದ್ದವು. ಇತ್ತೀಚೆಗೆ ಈ ಪ್ರದೇಶಗಳನ್ನು ವಾಣಿಜ್ಯೀಕರಣ ಮಾಡಲಾಗುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಸರಿಯಾದ ಯೋಜನೆ ನಿರೂಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ: ಫೋನ್ ಕಳೆದುಹೋದರೆ ಏನು ಮಾಡಬೇಕು?
Published On - 8:55 pm, Fri, 19 February 21