Shabnam Ali | ಸ್ವಾತಂತ್ರ್ಯ ಬಂದ ನಂತರ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ಹೆಣ್ಣು ಶಬನಂ ಅಲಿ: ಯಾರೀಕೆ? ಏನು ಅಪರಾಧ?
ಇಂಗ್ಲಿಷ್ ಮತ್ತು ಜಿಯಾಗ್ರಫಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ವಿದ್ಯಾವಂತೆ ಶಬನಂ, ಅದೇ ಊರಿನಲ್ಲಿ ತನ್ನ ಮುನೆ ಮುಂದೆಯೇ ಇದ್ದ ಸಲೀಂ ಎಂಬ ಮರಗೆಲಸದ ಯುವಕನನ್ನು ಮೆಚ್ಚಿಕೊಂಡಿದ್ದಳು. ಈ ಪ್ರೀತಿಗೆ ಮನೆಯವರು ಒಪ್ಪಿರಲಿಲ್ಲ.
ಉತ್ತರ ಪ್ರದೇಶದ ಶಬನಂ ಅಲಿ (38) ಈಗ ಸುದ್ದಿಯಲ್ಲಿದ್ದಾರೆ. ಭಾರತ ಸ್ವಾತಂತ್ರ್ಯ ಪಡೆದ ನಂತರ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ಮಹಿಳೆ ಈಕೆ ಎನ್ನುವುದು ಅದಕ್ಕೆ ಕಾರಣ. ತನ್ನ ಕುಟುಂಬದವರನ್ನು ಭೀಕರವಾಗಿ ಕೊಂದಿದ್ದು ಈಕೆ ಮಾಡಿದ್ದ ಅಪರಾಧ. ಈ ಅಪರಾಧದ ಹಿಂದೆ ಒಂದು ಪ್ರೀತಿಯ ಕಥೆಯೂ ಇರುವುದು ಗಮನಾರ್ಹ ಸಂಗತಿ.
ಬರೋಬ್ಬರಿ 13 ವರ್ಷಗಳ ಹಿಂದೆ, ಅಂದರೆ ಏಪ್ರಿಲ್ 14, 2008ರಂದು ಉತ್ತರ ಪ್ರದೇಶದಲ್ಲಿ ರಣಭೀಕರ ಹತ್ಯಕಾಂಡವೊಂದು ನಡೆದು ಹೋಗಿತ್ತು. ಅವತ್ತು ಹಾಲಿನಲ್ಲಿ ಮತ್ತು ಬರಿಸುವ ಔಷಧ ಬೆರೆಸಿ, ಅದನ್ನ ಕುಡಿಸಿ ತನ್ನದೇ ಕುಟುಂಬದ 7 ಮಂದಿಯನ್ನು ಇದೀಗ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶಬನಂ ಮತ್ತು ಪ್ರಿಯಕರ ಸಲೀಂ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದರು.
ತನ್ನದೇ ಕುಟುಂಬದವರನ್ನು ಕೊಲ್ಲಲು ಏನು ಕಾರಣ? ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆ ಬವಾನ್‌ಖೇರಿ ಗ್ರಾಮದ ಶಬನಂ ಅಲಿ ಇಂಗ್ಲಿಷ್ ಮತ್ತು ಜಿಯಾಗ್ರಫಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ವಿದ್ಯಾವಂತೆ. ತನ್ನದೇ ಊರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅದೇ ಊರಿನಲ್ಲಿ ತನ್ನ ಮುನೆ ಮುಂದೆಯೇ ಇದ್ದ ಸಲೀಂ ಎಂಬ ಮರಗೆಲಸದ ಯುವಕನನ್ನು ಮೆಚ್ಚಿಕೊಂಡಿದ್ದಳು. 6ನೇ ತರಗತಿ ಅರ್ಧಕ್ಕೆ ಬಿಟ್ಟಿದ್ದ ಸಲೀಂನನ್ನು ಶಬನಂ ಪ್ರೀತಿಸುವ ವಿಚಾರ ಮನೆಯವರಿಗೆ ಹೇಗೋ ಗೊತ್ತಾಗಿತ್ತು. ಸುಶಿಕ್ಷಿತ ಮಗಳು ಕೂಲಿ ಕೆಲಸದವನನ್ನು ಪ್ರೀತಿಸುವುದನ್ನು ಮನೆಯವರು ಒಪ್ಪಿರಲಿಲ್ಲ. ಸೂಫಿ ಮುಸ್ಲಿಂ ಪಂಗಡದ ಶಬನಂ ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿತ್ತು. ಶಬನಂ ತಂದೆ ಅದೇ ಊರಿನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಸಲೀಂ ಜೊತೆಗಿನ ಪ್ರೀತಿಗೆ ಒಪ್ಪದ ತನ್ನ ಇಡೀ ಕುಟುಂಬವನ್ನ ಹತ್ಯೆಗೈಯಲು ಶಬನಂ ಸಂಚು ರೂಪಿಸಿದ್ದಳು. ರಾತ್ರಿ ಊಟವಾದ ಮೇಲೆ ಹಾಲು ಕುಡಿಯುವುದು ಆಕೆಯ ಮನೆಯವರ ವಾಡಿಕೆ. 2008ರ ಏಪ್ರಿಲ್ 14ರಂದು ಹಾಲಿಗೆ ಮತ್ತು ಬರಿಸುವ ಔಷಧಿ ಬೆರೆಸಿ ಎಲ್ಲರಿಗೂ ಕುಡಿಯಲು ಕೊಟ್ಟಿದ್ದಳು. ಎಚ್ಚರ ತಪ್ಪಿ ಮಲಗಿದ್ದವರನ್ನು ಪ್ರಿಯಕರ ಸಲೀಂ ಜೊತೆಗೂಡಿ ಕೊಡಲಿಯಿಂದ ಕೊಚ್ಚಿ ಕೊಂದಳು. 10 ತಿಂಗಳ ಪುಟ್ಟ ಮಗುವನ್ನೂ ಬಿಡದೇ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ನಂತರ ತನಗೇನೂ ಗೊತ್ತೇ ಇಲ್ಲ ಎಂಬಂತೆ ಮನೆ ಮುಂದೆ ಕೂಗಿ ನಾಟಕವಾಡಿದ್ದಳು.
ಶಬನಂ ಮಾಡಿದ ಕೃತ್ಯ ಕೆಲವೇ ದಿನಗಳಲ್ಲಿ ಆಚೆ ಬಂದಿತ್ತು. ಉತ್ತರ ಪ್ರದೇಶದ ಪೊಲೀಸರು ಸಲೀಂ ಹಾಗೂ ಶಬನಂಳನ್ನ ಬಂಧಿಸಿದ್ದರು. ಭೀಕರ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಶಬನಂ ಏಳು ವಾರಗಳ ಗರ್ಭಿಣಿಯಾಗಿದ್ದಳು.
ಶಬನಂ-ಸಲೀಂಗೆ ಗಲ್ಲು ಶಿಕ್ಷೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. 29 ಮಂದಿಯನ್ನು ಸಾಕ್ಷಿ ಎಂದು ಪರಿಗಣಿಸಿದ ನ್ಯಾಯಾಧೀಶರು 649 ಪ್ರಶ್ನೆಗಳನ್ನು ಕೇಳಿ, 160 ಪುಟಗಳ ತೀರ್ಪು ನೀಡಿದರು. ಶಬನಂ ಮತ್ತು ಸಲೀಂ ಇಬ್ಬರಿಗೂ ಸೆಷನ್ ನ್ಯಾಯಾಲಯ ಮರಣದಂಡನೆ ವಿಧಿಸಿತು. ಮರಣದಂಡನೆ ಪ್ರಶ್ನಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಮರಣದಂಡನೆ ತೀರ್ಪನ್ನ ಎತ್ತಿಹಿಡಿದಿತ್ತು. 2015ರಲ್ಲಿ ಶಬನಂ ಸುಪ್ರೀಂಕೋರ್ಟ್ ಮೊರೆ ಹೋದರು. ಅಲ್ಲಿಯೂ ಆಕೆಗೆ ಸೋಲಾಗಿತ್ತು. ಎಲ್ಲಾ ಹಾದಿ ಮುಚ್ಚಿದಾಗ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿ ಈ ಅರ್ಜಿ ತಿರಸ್ಕರಿಸಿದರು. ಜನವರಿ 23ರಂದು ಸುಪ್ರೀಂಕೋರ್ಟ್ ಮರಣದಂಡನೆ ಆದೇಶವನ್ನು ಖಾಯಂ ಮಾಡಿತು.
ಉತ್ತರ ಪ್ರದೇಶದ ಮಥುರಾದ ವಧಾಸ್ಥಾನದಲ್ಲಿ ಇಬ್ಬರನ್ನೂ ಗಲ್ಲಿಗೆ ಏರಿಸಲಾಗುತ್ತೆ. ಗಲ್ಲಿಗೇರಿಸುವ ದಿನಾಂಕ ನಿಗದಿಯಾಗಿಲ್ಲ, ನಿರ್ಭಯ ಕೇಸ್‌ನಲ್ಲಿ ಅಪರಾಧಿಗಳನ್ನ ಗಲ್ಲಿಗೇರಿಸಿದ್ದ ಹ್ಯಾಂಗ್‌ಮ್ಯಾನ್ ಪವನ್ ಜಲ್ಲದ್, ಈ ಇಬ್ಬರನ್ನೂ ಗಲ್ಲಿಗೇರಿಸಲಿದ್ದಾರೆ.
ಶಬನಂ ಮಗುವಿಗೆ ಈಗ 12 ವರ್ಷ ತನ್ನದೇ ಕುಟುಂಬದ 7 ಮಂದಿಯನ್ನು ಹತ್ಯೆಗೈಯುವಾಗ ಶಬನಂ 7 ವಾರಗಳ ಗರ್ಭಿಣಿಯಾಗಿದ್ದಳು. 2008ರ ಡಿಸೆಂಬರ್ ತಿಂಗಳಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಶಬನಂ ಮಗುವಿಗೆ ಈಗ 12 ವರ್ಷ. ಆಕೆಯ ಸ್ನೇಹಿತ, ಬುಲಂದ್ಶಹರ್ನ ಉಸ್ಮಾನ್ ಸೈಫ್ ಈ ಮಗುವನ್ನು ದತ್ತು ಪಡೆದಿದ್ದಾನೆ. ಇವರಿಬ್ಬರೂ ಒಂದೇ ಕಾಲೇಜಿನ ವಿಧ್ಯಾರ್ಥಿಯಾಗಿದ್ದರು. ಉಸ್ಮಾನ್ ಸೈಫಿಗಿಂತ ಶಬನಂ ಎರಡು ವರ್ಷ ದೊಡ್ಡವಳಾಗಿದ್ದಳು. ಒಮ್ಮೆ ಉಸ್ಮಾನ್ ಸೈಫ್ಗೆ ಕಾಲೇಜು ಶುಲ್ಕಕಟ್ಟಲು ಹಣವಿರಲ್ಲ. ಆಗ ಇದೇ ಶಬನಂ ಸಹಾಯ ಮಾಡಿದ್ದಳು. ದಯಾಗುಣವಿದ್ದ ಶಬನಂ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ಕೊಲ್ಲುತ್ತಾಳೆ ಅಂದ್ರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಉಸ್ಮಾನ್ ಸೈಫ್ ಹೇಳಿದ್ದಾನೆ.
ಮಹಿಳೆಯರಿಗಾಗಿ ಪ್ರತ್ಯೇಕ ವಧಾಸ್ಥಳ ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ವಧಾಸ್ಥಳವನ್ನು 150 ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. 1870ರಲ್ಲಿ ಬ್ರಿಟಿಷರ ಕಾಲದಲ್ಲಿ ಮಥುರಾ ಜೈಲಿನಲ್ಲಿ ಮಹಿಳೆಯರನ್ನು ಗಲ್ಲಿಗೆ ಹಾಕಲು ಈ ಕೊಠಡಿಯನ್ನು ನಿರ್ಮಿಸಲಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಇದುವರೆಗೂ ಇಲ್ಲಿ ಯಾರನ್ನೂ ಗಲ್ಲಿಗೆ ಹಾಕಿಲ್ಲ. ದೇಶದಲ್ಲಿ ಮಹಿಳೆಯರನ್ನು ಗಲ್ಲಿಗೇರಿಸಲೆಂದು ಇರುವ ಏಕೈಕ ಸ್ಥಳವಿದು. ಇದೇ ವಧಾಸ್ಥಳದಲ್ಲಿ ಶಬನಂ ಗಲ್ಲಿಗೇರಳಿದ್ದಾಳೆ.
ಇದನ್ನೂ ಓದಿ: ಕೊನೆಗೂ ಫಲಿಸಿತು ನಿರ್ಭಯಾ ತಾಯಿಯ ನಿರಂತರ ಹೋರಾಟ
Published On - 5:18 pm, Fri, 19 February 21