AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ವಡಿ ಒಡೆಯರ್​, ವಿಶ್ವೇಶ್ವರಯ್ಯ ಕನಸಿನ ಕೂಸು KSDL​, ಸಾಬೂನು ಕಾರ್ಖಾನೆಯನ್ನು ಸ್ವಚ್ಛಗೊಳಿಸುವುದು ಎಂದರೆ ಇದೇನಾ?ಬಿಜೆಪಿಗೆ ಹೆಚ್​ಡಿಕೆ ಟಾಂಗ್

"ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್​ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಕರ್ನಾಟಕ ಬಿಜೆಪಿ ಸರ್ಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಣಿ ಟ್ವೀಟ್​ ಮಾಡಿದ್ದಾರೆ.

ನಾಲ್ವಡಿ ಒಡೆಯರ್​, ವಿಶ್ವೇಶ್ವರಯ್ಯ ಕನಸಿನ ಕೂಸು KSDL​, ಸಾಬೂನು ಕಾರ್ಖಾನೆಯನ್ನು ಸ್ವಚ್ಛಗೊಳಿಸುವುದು ಎಂದರೆ ಇದೇನಾ?ಬಿಜೆಪಿಗೆ ಹೆಚ್​ಡಿಕೆ ಟಾಂಗ್
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
TV9 Web
| Updated By: ವಿವೇಕ ಬಿರಾದಾರ|

Updated on:Mar 03, 2023 | 2:35 PM

Share

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakashappa) ಪುತ್ರನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta Officers) ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumarswamy) ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​​ ಶಾ (Amit Shah) ವಿರುದ್ಧ ಟ್ವೀಟ್​ ಮಾಡಿ ವ್ಯಂಗ್ಯವಾಡಿದ್ದಾರೆ. “ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್​ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಕರ್ನಾಟಕ ಬಿಜೆಪಿ ಸರ್ಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ” ಹ್ಯಾಶ್​ಟ್ಯಾಗ್​ ಕಮೀಷನ್_ರಾಜ್ಯವಲ್ಲ_ಕರ್ನಾಟಕ ಎಂದು ಬರೆದು ಟ್ವೀಟ್​ ಮಾಡಿದ್ದಾರೆ.

ಮುಂದವರೆದು “ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಸಾಬೂನು ಕಾರ್ಖಾನೆಯನ್ನು ಸ್ವಚ್ಚಗೊಳಿಸುವುದು ಎಂದರೆ ಇದೇನಾ? ನಿಮ್ಮ “ಸ್ವಚ್ಚ ಭಾರತ್‌” ಪರಿಕಲ್ಪನೆಯೇ ಅದ್ಭುತ!! ವಾರೆವ್ಹಾ.. ಅಮಿತ್‌ ಶಾ ಅವರೇ!! ಅಮಿತ್ ಶಾ ಅವರೇ ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗಂಡಾಂತರ ಮಾಡುವುದಾ?” ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಡಬಲ್ ಎಂಜಿನ್ ಕರ್ನಾಟಕ ಸರ್ಕಾರ 40% ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ ಸಾಬೂನು ಕಾರ್ಖಾನೆಯನ್ನು 40% ಕಮೀಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಸರ್ಕಾರ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ? ಶಾಸಕರ ಪುತ್ರರತ್ನ ಪಸಂದಾಗಿರಿಸಿದ್ದ ಕಂತೆಗಳು ಯಾರ ಹುಂಡಿಗೆ? ಶಾಸಕರ ಮನೆಯಲ್ಲೇ 6 ಕೋಟಿ ಸಿಕ್ಕರೆ, ಇನ್ನು 40% ಪರ್ಸಂಟ್‌ ಚರಂಡಿಯಲ್ಲಿ ತೆವಳುತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು “ಕಮೀಷನ್‌ ರಾಜ್ಯ” ಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ? ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ನಿನ್ನೆ ನಾನು ಹೇಳಿದ್ದೆ, ಈ ರೀತಿ ಪರ್ಸಂಟೇಜ್ ವ್ಯವಹಾರ ಮುಂದುವರಿದರೆ ಮುಂದೆ 10 ಪರಪ್ಪನ ಅಗ್ರಹಾರ ಜೈಲುಗಳಾನ್ನಾದರೂ ಕಟ್ಟಿಸಬೇಕಾಗುತ್ತದೆ ಎಂದು. ಕಳೆದ ಮೂರೂವರೆ ವರ್ಷದಿಂದ ಕಮೀಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರ್ಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ. ಕಾಂಗ್ರೆಸ್‌ 20%, ಬಿಜೆಪಿ 40% ಕರ್ನಾಟಕವನ್ನು ‘ಕಮೀಷನ್‌ ರಾಜ್ಯ’ ಮಾಡಿದ ಪಾಪ ಈ ರಾಷ್ಟ್ರೀಯ ಪಕ್ಷಗಳದ್ದು, ಇಂಥ ಪಾಪದ ದುಡ್ಡಿನಿಂದಲೇ ಚುನಾವಣೆ ನಡೆಸುವ ಕಮೀಷನ್‌ʼ ಗೇಡಿ ಪಕ್ಷಗಳ ಅಸಲಿ ಮುಖವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕರ್ನಾಟಕಕ್ಕೆ ʼಕಮೀಷನ್‌ ರಾಜ್ಯʼ ಎಂಬ ಹಣೆಪಟ್ಟಿ ಶಾಶ್ವತವಾಗುವ ಅಪಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಥ ಪ್ರಕರಣಗಳೆಲ್ಲ ಕೊನೆಗೆ ಏನಾದವು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತು. ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅವು ತನಿಖೆ ನಡೆಸುತ್ತಿರುವ ಪ್ರಕರಣಗಳು ಯಾವ ರೀತಿ ಹಳ್ಳ ಹಿಡಿದು ಹೋಗಿವೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ. ಜನತಾ ನ್ಯಾಯಾಲಯದಲ್ಲೇ ಇಂಥ ನಿರ್ಲಜ್ಜ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ಜನರದ್ದೇ ಅಂತಿಮ ತೀರ್ಪು ಹಾಗೂ ಜನರೇ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 2023ಕ್ಕೆ ಆರೂವರೆ ಕೋಟಿ ಕನ್ನಡಿಗರು ನೀಡುವ ಜನಾದೇಶ ಈ ದಿಕ್ಕಿನಲ್ಲೇ ಇರುತ್ತದೆ ಎಂಬ ವಿಶ್ವಾಸ ನನ್ನದು. 40% ಕಮಿಷನ್​ಗೆ ಸಾಕ್ಷಿ ಸಿಕ್ಕಿದೆ ಅಲ್ವಾ? ಬಿಜೆಪಿಗರೇ. ತಿನ್ನಲ್ಲ, ತಿನ್ನಲಿಕ್ಕ ಬಿಡಲ್ಲ ಅಂತ ಹೇಳಿರುವ ಮೋದಿ ಅವರಿಗೆ ಸಾಕ್ಷಿ ಸಮೇತ ಸಿಕ್ಕುಹಾಕಿಕೊಂಡಿರುವ ಬಿಜೆಪಿ ಶಾಸಕರ ಬಗ್ಗೆ ಮಾತನಾಡುವ ಧೈರ್ಯ ಇದೆಯಾ? ಭ್ರಷ್ಟಾಚಾರದಿಂದ ಚುನಾವಣಾ ಸಂಪತ್ತಿನ ಕ್ರೋಢೀಕರಣದಲ್ಲಿ ತೊಡಗಿದೆಯಾ? ಎಂದು ಕೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:52 pm, Fri, 3 March 23