ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು

| Updated By: ಆಯೇಷಾ ಬಾನು

Updated on: Aug 12, 2024 | 2:18 PM

ಕಲ್ಯಾಣ ಕರ್ನಾಟಕ ಭಾಗದ ಜನರ ಜೀವನಾಡಿ ಅಂತಲೇ ತುಂಗಭದ್ರಾ ಜಲಾಶಯವನ್ನು ಕರೆಯುತ್ತಾರೆ. ಈ ಡ್ಯಾಂ ನೀರಿನ ಮೇಲೆಯೇ ನಾಲ್ಕು ಜಿಲ್ಲೆಯ ಬಹುತೇಕ ಜನರ ಬದುಕು ನಿಂತಿರೋದು. ಈ ನೀರೆ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲ. ಈ ಡ್ಯಾಂ ತುಂಬಿದ್ರೆ ನಾಲ್ಕು ಜಿಲ್ಲೆಯ ಜನರ ಸಂತಸ ಇಮ್ಮಡಿಯಾಗುತ್ತದೆ. ಡ್ಯಾಂ ನಲ್ಲಿರೋ ನೀರು ಖಾಲಿಯಾಗುತ್ತಾ ಹೋದಂತೆ ನಾಲ್ಕು ಜಿಲ್ಲೆಯ ಜನರಿಗೆ ಸಂಕಷ್ಟ ಶುರುವಾಗುತ್ತದೆ. ಆದ್ರೆ ಇದೀಗ ಜಲಾಶಯದ ಒಂದು ಗೇಟ್ ಕಿತ್ತುಕೊಂಡು ಹೋಗಿರೋದರಿಂದ ಡ್ಯಾಂ ದುರಸ್ಥಿ ಮಾಡಲು ಡ್ಯಾಂನಲ್ಲಿರೋ ನೀರನ್ನು ಖಾಲಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು
ತುಂಗಭದ್ರಾ ಜಲಾಶಯ
Follow us on

ಕೊಪ್ಪಳ, ಆಗಸ್ಟ್​.12: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯವನ್ನು (Tungabhadra Dam) ನಿರ್ಮಾಣ ಮಾಡಲಾಗಿದೆ. ಒಟ್ಟು 105.788 ಟಿಎಂಸಿಯಷ್ಟು ನೀರನ್ನು ಸಂಗ್ರಹಿಸುವ ಸಾಮಾರ್ಥ್ಯ ಡ್ಯಾಂ ಹೊಂದಿದೆ. ಮೊನ್ನೆವರಗೆ ಮಲೆನಾಡಿನಲ್ಲಿ ಸುರಿದ ಮಳೆಗೆ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿತ್ತು. ಡ್ಯಾಂ ಭರ್ತಿಯಾಗಿದ್ದು ಎಲ್ಲರ ಸಂತಸ ಇಮ್ಮಡಿಗೊಳಿಸಿತ್ತು. ಆಗಸ್ಟ್ 13 ರಂದು ಸಿಎಂ ಸಿದ್ದರಾಮಯ್ಯನವರೇ ಬಾಗಿನ ಅರ್ಪಿಸಲಿಕ್ಕೆ ಬರಲು ಕಾರ್ಯಕ್ರಮ ನಿಗಧಿಯಾಗಿತ್ತು. ಆದ್ರೆ ಸಂತಸ ಹೆಚ್ಚು ದಿನ ಉಳಿಯದೇ, ಮತ್ತೆ ಸಂಕಷ್ಟ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಡ್ಯಾಂನಲ್ಲಿನ ನೀರು ಖಾಲಿಯಾಗುತ್ತಿದೆ. ಇದು ನದಿ ಪಾತ್ರದ ಕೆಳಭಾಗದ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ಡ್ಯಾಂ ಖಾಲಿಯಾದ್ರೆ ರೈತರಿಗೆ ಸಂಕಷ್ಟ

ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆ ಪೈಕಿ ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿಯೇ ಸರಿಸುಮಾರು ಏಳು ಲಕ್ಷ ಎಕರೆ ಪ್ರದೇಶದಲ್ಲಿ ಡ್ಯಾಂ ನೀರನ್ನು ನಂಬಿ ರೈತರು ಕೃಷಿ ಮಾಡುತ್ತಾರೆ. ಇನ್ನು ತುಂಗಭದ್ರಾ ಜಲಾಶಯದ ನೀರನ್ನು ಬಳಸಿಕೊಂಡು ಹೆಚ್ಚಿನ ರೈತರು ಭತ್ತವನ್ನು ಬೆಳೆಯುತ್ತಾರೆ. ಇದೇ ಕಾರಣಕ್ಕೆ ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಭತ್ತದ ಕಣಜ ಅಂತ ಕೂಡಾ ಕರೆಯುತ್ತಾರೆ. ಕಳೆದ ವರ್ಷ ಬರಗಾಲದಿಂದ ಡ್ಯಾಂ ತುಂಬಿರಲಿಲ್ಲಾ. ಹೀಗಾಗಿ ರೈತರಿಗೆ ಎರಡನೇ ಬೆಳೆಗೆ ಕೂಡಾ ನೀರು ಬಿಟ್ಟಿರಲಿಲ್ಲಾ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು.

ಈ ಬಾರಿ ಕೂಡಾ ನಾಲ್ಕು ಜಿಲ್ಲೆಯಲ್ಲಿ ಮುಂಗಾರು ಮಳೆ ಆಗಿದ್ದು ಅಷ್ಟಕಷ್ಟೇ. ಇನ್ನು ಜುಲೈ ಮೊದಲ ವಾರದಲ್ಲಿ ಕೂಡಾ ಡ್ಯಾಂ ನಲ್ಲಿ ನೀರಿರಲಿಲ್ಲಾ. ಡ್ಯಾಂ ಡೆಡ್ ಸ್ಟೋರೆಜ್ ತಲುಪಿತ್ತು. ಹೀಗಾಗಿ ಜೂನ್, ಜುಲೈ ತಿಂಗಳಲ್ಲಿ ಕೂಡ ಡ್ಯಾಂ ಕೆಳಭಾಗದ ಜನರು ಭತ್ತವನ್ನು ನಾಟಿ ಮಾಡಿರಲಿಲ್ಲಾ. ಆದ್ರೆ ಜುಲೈ ಮೊದಲ ವಾರದ ನಂತರ ಮಲೆನಾಡ ಮಳೆಗೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಹೀಗಾಗಿ ಜುಲೈ ತಿಂಗಳ ಅಂತ್ಯಕ್ಕೆ ಡ್ಯಾಂ ತುಂಬಿತ್ತು. ಡ್ಯಾಂಗೆ ನೀರು ಬರ್ತಾಯಿದ್ದಂತೆ, ಕೃಷಿಕರ ಮೊಗದಲ್ಲಿ ಮಂದಹಾಸ ಹೆಚ್ಚಾಗಿತ್ತು. ರೈತರು ಸಂತಸದಿಂದ ಭತ್ತ ನಾಟಿ ಆರಂಭಿಸಿದ್ದರು. ಆದ್ರೆ ಇದೀಗ ಮತ್ತೆ ಡ್ಯಾಂ ನಲ್ಲಿನ ನೀರು ಖಾಲಿ ಮಾಡುತ್ತಿರುವದರಿಂದ ಕೃಷಿಕರಿಗೆ ಸಂಕಷ್ಟ ಆರಂಭವಾಗುತ್ತದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ

ಎರಡನೇ ಬೆಳೆಗಿಂತ ಮೊದಲ ಬೆಳೆಗೆ ಸರಿಯಾಗಿ ನೀರು ಸಿಗುತ್ತಾ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ. ಯಾಕಂದ್ರೆ ಡ್ಯಾಂ ಗೇಟ್ ರಿಪೇರಿ ಮಾಡಬೇಕಾದ್ರೆ ಸರಿಸುಮಾರು ಆರವತ್ತರಿಂದ ಆರವತ್ತೈದು ಟಿಎಂಸಿ ನೀರು ಖಾಲಿಯಾಗಬೇಕು. 65 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂ ನಲ್ಲಿ ಉಳಿಯೋದು ಕೇವಲ ನಲವತ್ತು ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರ ಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯೋದು ಕೇವಲ ಇಪ್ಪತ್ತೈದು ಟಿಎಂಸಿ ನೀರು ಮಾತ್ರ. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳೋದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

ಕುಡಿಯುವ ನೀರಿಗೆ ಕೂಡಾ ತತ್ವಾರ ಸಾಧ್ಯತೆ

ಇನ್ನು ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದ್ರೆ ಇದೀಗ ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

ಜಲಚರಗಳಿಗೆ ತಪ್ಪಲ್ಲಾ ಸಂಕಷ್ಟ

ತುಂಗಭದ್ರಾ ಜಲಾಶಯದ ಕೆಳಭಾಗವನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ಈ ಭಾಗದಲ್ಲಿ ನೀರುನಾಯಿ ಸೇರಿದಂತೆ ಅನೇಕ ಜಲಚರಗಳಿವೆ. ಕಳೆದ ಬಾರಿ ಬೇಸಿಗೆಯಲ್ಲಿ ನದಿ ಸಂಪೂರ್ಣವಾಗಿ ಬತ್ತಿತ್ತು. ಹೀಗಾಗಿ ನೀರುನಾಯಿಗಳು ಸೇರಿದಂತೆ ಅನೇಕ ಜಲಚರಗಳು ಕೂಡಾ ಸಾಕಷ್ಟು ತೊಂದರೆ ಅನುಭವಿಸಿದ್ದವು. ಡ್ಯಾಂ ನಿಂದ ಮೊನ್ನೆ ನೀರನ್ನು ಬಿಟ್ಟ ನಂತರ, ನೀರುನಾಯಿಗಳು ಪ್ರತ್ಯಕ್ಷವಾಗಿದ್ದವು. ಬೇಸಿಗೆಯಲ್ಲಿ ನೀರು ಖಾಲಿಯಾದ್ರೆ ಮತ್ತೆ ಬೇಸಿಗೆಯಲ್ಲಿ ಜಲಚರಗಳು ತೊಂದರೆ ಅನುಭವಿಸುತ್ತವೆ.

ಸದ್ಯ ಡ್ಯಾಂ ಗೇಟ್ ದುರಸ್ಥಿಯಾದ ನಂತರ ಮಲೆನಾಡಿನಲ್ಲಿ ಮಳೆಯಾದ್ರೆ ಮಾತ್ರ ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತದೆ. ಹಿಂಗಾರು ಮಳೆ ಕೈಕೊಟ್ಟರೆ ತುಂಗಭದ್ರಾ ಜಲಾಶಯ ಬೇಸಿಗೆ ಆರಂಭದಲ್ಲಿಯೇ ಬತ್ತಿದ್ರು ಅಚ್ಚರಿಯಿಲ್ಲ. ಕಳೆದ ವರ್ಷ ಡ್ಯಾಂ ಡೆಡ್ ಸ್ಟೋರೆಜ್ ಹಂತ ತಲುಪಿತ್ತು. ಆದ್ರೆ ಈ ಬಾರಿ ಡ್ಯಾಂ ತುಂಬಿದ್ರು ಕೂಡಾ ನೀರು ಖಾಲಿಯಾಗುತ್ತಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:15 pm, Mon, 12 August 24