ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಆಪ್ತನೆಂದು ಹೇಳಿಕೊಂಡು ಡಿಹೆಚ್ಓಗೆ 7 ಲಕ್ಷ ರೂ. ವಂಚನೆ
ವಂಚಕನ ಬಲೆಗೆ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಬಿದ್ದಿದ್ದಾರೆ. ನಾನು ಸಿದ್ದರಾಮಯ್ಯ ಆಪ್ತ, ನಿಮ್ಮ ವಿವಾದವನ್ನು ಬಗೆಹರಿಸುತ್ತೇನೆ ಅಂತ ವಂಚಕ ರಾಮಯ್ಯ ಡಿಹೆಚ್ಓ ಜಯಶ್ರೀ ಅವರಿಂದ ಬರೊಬ್ಬರಿ 7 ಲಕ್ಷ ರೂ. ಪಡೆದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಡಿಹೆಚ್ಓ ಸಿಸಿಬಿಗೆ ದೂರು ನೀಡಿದ್ದಾರೆ.
ಬಾಗಲಕೋಟೆ, ಜುಲೈ 12: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಪ್ತ ಅಂತ ಹೇಳಿಕೊಂಡು ಬಾಗಲಕೋಟೆ (Bagalkot) ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀಗೆ ಏಳು ಲಕ್ಷ ರೂ. ವಂಚಿಸಿದ್ದಾನೆ. ರಾಮಯ್ಯ ವಂಚಿಸಿದ ಆರೋಪಿ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗೆ ಕಿತ್ತಾಟ ನಡೆದಿತ್ತು. ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗಾಗಿ ಜಯಶ್ರೀ ಎಮ್ಮಿ ಹಾಗೂ ಶಾಸಕ ಹೆಚ್ವೈ ಮೇಟಿ ಅಳಿಯ ರಾಜ್ಕುಮಾರ್ ಮಧ್ಯೆ ಜಟಾಪಟಿ ನಡೆದಿತ್ತು. ಒಂದು ದಿನ ಬೆಳಗ್ಗೆ ರಾಜ್ಕುಮಾರ್ ಯರಗಲ್ ಡಿಹೆಚ್ಓ ಕುರ್ಚಿಯಲ್ಲಿ ಕೂತಿದ್ದರು.
ತಮ್ಮ ಕುರ್ಚಿಯಲ್ಲಿ ಕೂತಿದ್ದ ರಾಜ್ಕುಮಾರ್ ಯರಗಲ್ ಅವರನ್ನು ಕಂಡಿದ್ದ ಜಯಶ್ರೀ ಕುರ್ಚಿ ಬಿಟ್ಟುಕೊಡುವಂತೆ ಹೇಳಿದ್ದರು. ಆದರೆ ರಾಜ್ಕುಮಾರ್ ಯರಗಲ್ ಕುರ್ಚಿ ಬಿಟ್ಟು ಕೊಡಲಿಲ್ಲ. ಬದಲಿಗೆ “ಇಂದಿನಿಂದ ನಾನೇ ಡಿಹೆಚ್ಓ ಸರ್ಕಾರದಿಂದ ಆದೇಶ ತಂದಿದ್ದೇನೆಂದು” ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಕೆಲಕಾಲ ವಾಗ್ವಾದ ನಡೆದಿತ್ತು.
ಇದನ್ನೂ ಓದಿ: ನಿಧಿ ಆಸೆಗೆ ದೇವಸ್ಥಾನದ ಗರ್ಭಗುಡಿಯಲ್ಲಿನ ಲಿಂಗವನ್ನ ಒಡೆದ ಕಳ್ಳರು
ಬಳಿಕ ಜಯಶ್ರೀ ತಮ್ಮ ವರ್ಗಾವಣೆ ತಡೆಯಾಜ್ಞೆ ತರಲು ಹಿರಿಯ ಅಧಿಕಾರಿಗಳ ಭೇಟಿಗೆ ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದ ವೇಳೆ, ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಆಪ್ತನೆಂದು ರಾಮಯ್ಯ ಎಂಬಾತ ಪರಿಚಯನಾಗಿದ್ದನು. ರಾಮಯ್ಯ ತಾನು ಕೆಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದನು. ಆಗ ಜಯಶ್ರೀ ಆತನಿಗೆ ನಡೆದ ಸಂಗತಿ ಹೇಳಿದ್ದಾಳೆ. ನಂತರ ರಾಮಯ್ಯ ನಾನು ಸಮಸ್ಯೆ ಬಗೆ ಹರಿಸುತ್ತೇನೆ 50 ಸಾವಿರ ರೂ. ನೀಡಿ ವಿವಾದ ಸರಿಪಡಿಸುವುದಾಗಿ ಹೇಳಿದ್ದಾನೆ. ಬಳಿಕ ಹಂತ ಹಂತವಾಗಿ ಒಟ್ಟು 7 ಲಕ್ಷ ರೂ. ಹಣ ರಾಮಯ್ಯ ಪಡೆದಿದ್ದಾನೆ.
ನಂತರ ಆರೋಪಿ ರಾಮಯ್ಯ ಡಿಹೆಚ್ಓ ಜಯಶ್ರೀ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ಡಿಹೆಚ್ಓ ಜಯಶ್ರೀ ವಂಚನೆ ಬಗ್ಗೆ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ