ಸಿಸಿಬಿ ಎದುರು ಮೊದಲ ಬಾರಿಗೆ ಸತ್ಯ ಬಾಯಿಬಿಟ್ಟ ಚೈತ್ರಾ ಕುಂದಾಪುರ; ಟಿವಿ9 ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ
Chaitra Kundapura Fraud case; ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಕೂರಿಸಿ ಸಿಸಿಬಿ ತಂಡ ವಿಚಾರಣೆ ನಡೆಸಿತು. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ. ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ ಮೊಬೈಲ್ ಕರೆಗಳು, ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್ ಠೇವಣಿ, ಜಪ್ತಿ ಮಾಡಿದ್ದ ಕಾರು, ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ತಂಡ ಪ್ರಶ್ನೆ ಮಾಡಿತು.
ಬೆಂಗಳೂರು, ಸೆಪ್ಟೆಂಬರ್ 21: ಚೈತ್ರಾ ಕುಂದಾಪುರ (Chaitra Kundapura) 5 ಕೋಟಿ ರೂ. ವಂಚನೆ ಮಾಡಿ ಉದ್ಯಮಿಗೆ ನಾಮ ಹಾಕಿದ್ದ ಬಗ್ಗೆ ಸಿಸಿಬಿ (CCB) ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಚೈತ್ರಾ ತಪ್ಪೊಪ್ಪಿಗೆಯಿಂದ ಪ್ರಕರಣದಲ್ಲಿ ಅತಿದೊಡ್ಡ ತಿರುವು ಸಿಕ್ಕಿದೆ. ಸಿಸಿಬಿ ಮುಂದೆ ಚೈತ್ರಾ ನೀಡಿರೋ ತಪ್ಪೊಪ್ಪಿಗೆ ಹೇಳಿಕೆಯ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. ಮೊದಲ ಬಾರಿಗೆ ಸಿಸಿಬಿ ಮುಂದೆ ತಪೊಪ್ಪಿಕೊಂಡಿರೋ ಚೈತ್ರಾ, ಮೊದಲು ಡ್ರಾಮ ಮಾಡ್ತಿದ್ದರು. ಊಟ ಬಿಟ್ಟು ಆಸ್ಪತ್ರೆಯನ್ನೂ ಸೇರಿದ್ದರು. ಹಾಲಶ್ರೀ ಸಿಗಲಿ ದೊಡ್ಡ ದೊಡ್ಡವರೇ ಹೆಸರೇ ಹೊರಬರುತ್ತೆ ಅಂತಾ ಹೇಳಿದ್ದರು. ತನ್ನನ್ನ ಬಲವಂತವಾಗಿ ಫಿಕ್ಸ್ ಮಾಡಲಾಗಿದೆ ಅಂತಾ ಆರೋಪಿಸಿದ್ದರು.
ಹೀಗೆ ಬಹಿರಂಗವಾಗಿಯೇ ಹಾಲಶ್ರೀ ಕಡೆ ಬೊಟ್ಟು ಮಾಡ್ತಿದ್ದ ಚೈತ್ರಾ, ಸಿಸಿಬಿ ಮುಂದೆಯೂ ಇದನ್ನೇ ಹೇಳಿದ್ದಾರೆ. ಯಾಕಂದ್ರೆ, ಹಾಲಶ್ರೀ ಎಸ್ಕೇಪ್ ಆಗಿದ್ದಾರೆ. ಅವರು ಸಿಗಲ್ಲ ಅಂತಾ ಚೈತ್ರಾ ಅಂದುಕೊಂಡಿದ್ದರು. ಆದ್ರೆ, ಅದ್ಯಾವಾಗ ಹಾಲಶ್ರೀ ಒಡಿಶಾ ಕಟಕ್‌ನಲ್ಲಿ ಲಾಕ್ ಆದರೋ ಇತ್ತ ಚೈತ್ರಾ ನಡುಗಿ ಹೋಗಿದ್ದರು. ಇದೀಗ ಹಾಲಶ್ರೀ ಮುಂದೆ ಚೈತ್ರಾರನ್ನ ಕೂರಿಸಿ ವಿಚಾರಣೆ ಮಾಡಿದಾಗ ಶ್ರೀಕಾಂತ್ ಪೂಜಾರಿ ಜೊತೆ ಸೇರಿ ವಂಚನೆಗೆ ಪ್ಲ್ಯಾನ್ ಮಾಡಿದ್ದಾಗಿ ಹೇಳಿದ್ದಾರೆ.
ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಕೂರಿಸಿ ಸಿಸಿಬಿ ತಂಡ ವಿಚಾರಣೆ ನಡೆಸಿತು. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ. ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ ಮೊಬೈಲ್ ಕರೆಗಳು, ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್ ಠೇವಣಿ, ಜಪ್ತಿ ಮಾಡಿದ್ದ ಕಾರು, ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ತಂಡ ಪ್ರಶ್ನೆ ಮಾಡಿತು. ಸಿಸಿಬಿ ಇಟ್ಟ ದಾಖಲೆ ಕಂಡು ಎಲ್ಲವನ್ನೂ ಬಾಯ್ಬಿಟ್ಟ ಚೈತ್ರಾ, ತಾನು ಹಣ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪರಿಚಿತರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನಲೆಗೆ ತರುವುದು, ಟಿಕೆಟ್ ವಿಚಾರವಾಗಿ ನಂಬಿಕೆ ಬರುವಂತಹ ಸನ್ನಿವೇಶ ಸೃಷ್ಟಿಸುವುದು, ಒಂದು ವೇಳೆ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತಾ ಚೈತ್ರಾ ಪ್ಲ್ಯಾನ್ ಮಾಡಿದ್ದರು.
ಇದಿಷ್ಟೇ ಅಲ್ಲ, ಯೋಜನೆಯಂತೆ ನಡೆಯದೇ ಟಿಕೆಟ್ ಕೈ ತಪ್ಪಿದರೆ ಏನು ಮಾಡಬೇಕು ಅನ್ನೋದಕ್ಕೂ ಚೈತ್ರಾ ಗ್ಯಾಂಗ್ ಪ್ಲ್ಯಾನ್ ಬಿ ರೆಡಿ ಮಾಡಿತ್ತು.
ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣಗೆ ನೋಟಿಸ್ ನೀಡಲು ಮುಂದಾದ ಸಿಸಿಬಿ
ಟಿಕೆಟ್ ಸಿಗದೇ ಹೋದರೆ, ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ್ ಜೀಗೆ ಕೊಟ್ಟಿದ್ದಾಗಿ ಹೇಳಿಕೆ ನೀಡಲು ತಂಡ ಸಿದ್ಧವಾಗಿತ್ತು. ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ, ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಮತ್ತು ವಿಶ್ವನಾಥ್ ಜೀ ಮೃತಪಟ್ಟಿದ್ದಾರೆ ನಮಗೇ ಗೊತ್ತೇ ಇಲ್ಲ ಎಂದು ಹೇಳಲು ತಂಡ ಸಂಚು ರೂಪಿಸಿತ್ತು. ಈ ರೀತಿ ಗೋವಿಂದಬಾಬುಗೆ ಹೇಳಿ ನಂಬಿಸೋ ಪ್ಲ್ಯಾನ್ ಮಾಡಿದ್ದರು. ಅದರಂತೆಯೇ ನಡೆದುಕೊಂಡಿದ್ದರು. 5 ಕೋಟಿ ರೂ. ಪೈಕಿ ಸುಮಾರು ಮೂರುವರೆ ಕೋಟಿ ಚೈತ್ರಾ ಕೈ ಸೇರಿತ್ತು. ಒಂದೂವರೆ ಕೋಟಿ ರೂಪಾಯಿ ಹಾಲಶ್ರೀ ಪಡೆದುಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು ಚೈತ್ರಾ ಸಿಸಿಬಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ಎಂಟು ಜನರನ್ನ ಬಂಧಿಸಲಾಗಿದ್ದು, 2 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಚೈತ್ರಾ ವಂಚನೆ ಪುರಾಣವನ್ನು ಬಹುತೇಕ ಕೆದಕಿರೋ ಸಿಸಿಬಿ, ಉಳಿದ ಕ್ಯಾಶ್ ಎಲ್ಲಿದೆ, ಎಲ್ಲಿ ಹೋಯ್ತು ಎಂಬುದನ್ನು ಪತ್ತೆ ಮಾಡ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ