ಇಂಧನ ದರ ಏರಿಕೆ ಹಿನ್ನೆಲೆ; ಚಿತ್ರದುರ್ಗದಲ್ಲಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ
ಇಂಧನ ದರ ಏರಿಕೆ ಆಗಿರುವುದರಿಂದ ಚಿತ್ರದುರ್ಗದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಹಾಗೂ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕೈಗೆತ್ತಿಕೊಂಡಿದ್ದಾರೆ.
ಚಿತ್ರದುರ್ಗ: ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಏರಿಕೆಯತ್ತ ಸಾಗುತ್ತಿದೆ. ಜೊತೆಗೆ ಗ್ಯಾಸ್ ದರ ಕೂಡಾ ಒಂದೇ ಸಮನೆ ಏರಿಕೆ ಕಂಡಿದೆ. ಹೀಗಾಗಿ ಬೆಲೆ ಏರಿಕೆಯನ್ನು ಖಂಡಿಸಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಆಗ್ರಹ ಮಾಡಲಾಗಿದೆ. ಪ್ರತಿಭಟನೆಗೆ ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ಸಾಥ್ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂಧನ ಏರಿಕೆ ಖಂಡಿಸಿ ಪ್ರತಿಭಟನೆ ಪೆಟ್ರೋಲ್, ಡೀಸೆಲ್ ದರ ಹಾಗೂ ಗ್ಯಾಸ್ ಬೆಲೆ ಏರಿಕೆಗೆ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರ ಧರಣಿ ಕೈಗೊಂಡಿದ್ದಾರೆ. ಬೈಕ್ ಹಾಗೂ ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪ್ರತಿಭಟನೆ ಕೈಗೊಳ್ಳಲಾಗಿದೆ.
ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿದ್ದಾರೆ. ಬೈಕ್ ಮೇಲೆ ಗ್ಯಾಸ್ ಸಿಲೆಂಡರ್ ಇಟ್ಟುಕೊಂಡು ಮೆರವಣಿಗೆ ನಡೆಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ, ಪೆಟ್ರೋಲ್ ಬೆಲೆ ಏರಿಕೆಯ ಕುರಿತು ಮೈಸೂರಿನಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಪೆಟ್ರೋಲ್ ಬೆಲೆ ಏರಿಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ವಾಹನ ಸವಾರರು ಕಿಡಿಕಾರಿದ್ದರು. ಪೆಟ್ರೋಲ್ ವಾಹನ ಬಿಟ್ಟು ಎಲೆಕ್ಟ್ರಿಕಲ್ ವಾಹನ ಖರೀದಿಸೋಣ ಎಂದರೆ ಅದರ ಬೆಲೆಯನ್ನೂ ಜಾಸ್ತಿ ಮಾಡಿದ್ದಾರೆ. ಅಚ್ಛೆ ದಿನ್, ಅಚ್ಛೆ ದಿನ್ ಅನ್ನೋದು ಇದೇನಾ ಎಂದು ವಾಹನ ಸವಾರರು ಪ್ರಶ್ನೆ ಒಡ್ಡಿದ್ದರು.
ಕಳೆದ ಫೆಬ್ರವರಿ ತಿಂಗಳಲ್ಲಿ ಬೆಳಗಾವಿಯಲ್ಲಿಯೂ ಪ್ರತಿಭಟನೆ ನಡೆಸಲಾಗಿತ್ತು. ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿ ಬೆಳಗಾವಿ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಂದಿನ ಪೆಟ್ರೋಲ್ ದರ ಲೀಟರ್ಗೆ 91.81 ರೂ ಹಾಗೂ ಡೀಸೆಲ್ ದರ ಲೀಟರ್ಗೆ 84 ರೂ. ಆಗಿದೆ, ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಿಸುವುದಾಗಿ ಹೇಳಿ ಇದೀಗ ಏರಿಕೆ ಮಾಡಿದ್ದೀರಿ, ಕೂಡಲೇ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: 6 ಗಂಟೆ ಸ್ತಬ್ಧವಾದ ಒಡಿಶಾ!
ಇದನ್ನೂ ಓದಿ: Petrol Price: ದೂರದ ಪ್ರಯಾಣಕ್ಕೆ ಪ್ಲಾನ್ ಮಾಡಿದ್ದೀರಾ? ಒಮ್ಮೆ ಗಮನಿಸಿ ಪೆಟ್ರೋಲ್, ಡೀಸೆಲ್ ದರದ ಮಾಹಿತಿ ಇಲ್ಲಿದೆ