ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ: ಬಿಎಂಟಿಎಫ್ ಇನ್ಸ್ಪೆಕ್ಟರ್ ಬಂಧನ
ಆದಾಯಕ್ಕಿಂತ ಶೇಕಡಾ 257ರಷ್ಟು ಅಕ್ರಮ ಆಸ್ತಿಯನ್ನು ವಿಕ್ಟರ್ ಸೈಮನ್ ಹೊಂದಿರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ. ಸದ್ಯ ಎಸಿಬಿ ಪೊಲೀಸರು ವಿಕ್ಟರ್ ಸೈಮನ್ ಅವರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಬಿಎಂಟಿಎಫ್ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಅನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸೈಮನ್ ಮನೆ ಮೇಲೆ ಎಸಿಬಿ ಎಸ್.ಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ದಾಳಿ ನಡೆಸಿದ್ದ ಎಸಿಬಿ ತಂಡ ನಗದು, ಚಿನ್ನಾಭರಣ ಸೇರಿದಂತೆ ವಿದೇಶಿ ಮದ್ಯವನ್ನು ಜಪ್ತಿ ಮಾಡಿದ್ದರು.
ಈ ವೇಳೆ ಆದಾಯಕ್ಕಿಂತ ಶೇಕಡಾ 257 ರಷ್ಟು ಅಕ್ರಮ ಆಸ್ತಿಯನ್ನು ವಿಕ್ಟರ್ ಸೈಮನ್ ಹೊಂದಿರುವುದು ಬೆಳಕಿಗೆ ಬಂದಿದೆ. ಸದ್ಯ ಎಸಿಬಿ ಪೊಲೀಸರು ವಿಕ್ಟರ್ ಸೈಮನ್ ಅವರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ನಿನ್ನೆ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಮಂಡ್ಯ ಹಾಗೂ ಯಾದಗಿರಿ ಸೇರಿದಂತೆ ಕೆಲ ಕಡೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಆರ್‌ಟಿಒ ಪ್ರಥಮ ದರ್ಜೆ ಸಹಾಯಕ ಏ.ವಿ. ಚನ್ನವೀರಪ್ಪನವರ ಮನೆ ಮೇಲೆ ದಾಳಿ ನಡೆದಿದೆ. ಮಂಡ್ಯದ ಕುವೆಂಪುನಗರ, ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಎಸಿಬಿ ಎಸ್ಪಿ ಅರುಣಾಂ ಗೊಸ್ಸ್, ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ಪೆಕ್ಟರ್ ಸತೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ನು ಯಾದಗಿರಿಯ ಜೆಸ್ಕಾಂ ಕೆಇಬಿ ಲೆಕ್ಕಾಧಿಕಾರಿ ರಾಜು ಪತ್ತಾರ ನಿವಾಸದ ಮೇಲೂ ಎಸಿಬಿ ದಾಳಿ ನಡೆದಿದೆ. ಎಸಿಬಿ ಎಸ್ಪಿ ಮಹೇಶ ಮೇಗ್ಗಣ್ಣನವರ್ ಹಾಗೂ ಡಿವೈಎಸ್ಪಿ ಉಮಾಶಂಕರ ನೇತೃತ್ವದಲ್ಲಿ ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ನಿವಾಸದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ನಿನ್ನೆ ಏಕಕಾಲಕ್ಕೆ 28 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದ್ದು, ರಾಜ್ಯದ 11 ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ. ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸೂಪರಿಂಟೆಂಡೆಂಟ್ ಇಂಜಿನಿಯರ್ ಮುನಿಗೋಪಾಲರಾಜು, ಮೈಸೂರು ನಗರ ಯೋಜನೆ ಇಲಾಖೆ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ.ವಡ್ಡರ್, ಮೈಸೂರು ಆರ್‌ಟಿಒ, ಎಫ್‌ಡಿಎ ಚೆನ್ನವೀರಪ್ಪ, ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕೃಷ್ಣೇಗೌಡ, ಬೆಳಗಾವಿ ವಿಭಾಗ ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಹನಮಂತ ಶಿವಪ್ಪ ಚಿಕ್ಕಣ್ಣನವರ್, ಯಾದಗಿರಿ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತರ್, ಬಿಎಂಟಿಎಫ್ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸಿಮೊನ್, ದಾವಣಗೆರೆ ವಿಭಾಗ ಫ್ಯಾಕ್ಟರೀಸ್ & ಬಾಯ್ಲರ್ಸ್ ಡೆಪ್ಯುಟಿ ಡೈರೆಕ್ಟರ್ ಕೆ.ಎಂ.ಪ್ರಥಮ್, ಯಲಹಂಕ ವಿಭಾಗ ಬಿಬಿಎಂಪಿ ನಗರ ಯೋಜನೆ ಕಚೇರಿ ಅಸಿಸ್ಟೆಂಟ್ ಡೈರೆಕ್ಟರ್, ಜೂನಿಯರ್ ಇಂಜಿನಿಯರ್ ಕೆ.ಸುಬ್ರಹ್ಮಣ್ಯಂ ಸೇರಿದಂತೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಮಂಡ್ಯ, ಯಾದಗಿರಿಯಲ್ಲಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
Published On - 3:18 pm, Wed, 10 March 21