ತುಮಕೂರಿಗೆ ಮೆಟ್ರೋ, ಕ್ರಿಕೆಟ್ ಸ್ಟೇಡಿಯಂ ಬೆನ್ನಲ್ಲೇ ಸಿಎಂ ಮುಂದೆ ಮತ್ತೊಂದು ಮಹತ್ವದ ಬೇಡಿಕೆ ಇಟ್ಟ ಪರಮೇಶ್ವರ್
ತುಮಕೂರಿನಲ್ಲಿ ಮೆಟ್ರೋ, ಕ್ರಿಕೆಟ್ ಸ್ಟೇಡಿಯಂ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತೊಂದು ಮಹತ್ವದ ಬೇಡಿಕೆ ಇಟ್ಟಿದ್ದಾರೆ. ತುಮಕೂರು ನಗರ ಬೆಂಗಳೂರು ಸಮೀಪದಲ್ಲಿದೆ. ಹೀಗಾಗಿ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನಗೆ ಮನವಿ ಮಾಡಿದ್ದಾರೆ.
ತುಮಕೂರು, ಡಿಸೆಂಬರ್ 02: ನಗರದಲ್ಲಿ ವಿವಿಧ ಸವಲತ್ತುಗಳ ವಿತರಣೆ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳು ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ (G.Parameshwara) ಸಿಎಂ ಮುಂದೆ ಮತ್ತೊಂದು ಮಹತ್ವದ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಿಲ್ಲೆಯಲ್ಲಿ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
ಎರಡನೇ ವಿಮಾನ ನಿಲ್ದಾಣ ಸ್ಥಾಪನಗೆ ಮನವಿ
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 1,250 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಪರಮೇಶ್ವರ್, ಸರ್ಕಾರ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ತೀರ್ಮಾನಿಸಿದೆ. ಆ ಎರಡನೇ ವಿಮಾನ ನಿಲ್ದಾಣ ತುಮಕೂರು ಜಿಲ್ಲೆಯಲ್ಲಿ ಆಗಬೇಕು. ತುಮಕೂರು ನಗರ ರಾಜಧಾನಿ ಬೆಂಗಳೂರು ಸಮೀಪದಲ್ಲಿದೆ. ಹೀಗಾಗಿ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ತುಮಕೂರು ಮೆಟ್ರೋ: ಜಿ ಪರಮೇಶ್ವರ್ ಕೊಟ್ರು ಬಿಗ್ ಅಪ್ಡೇಟ್
ಜಿಲ್ಲೆಯಲ್ಲಿ ಒಂದು ಇತಿಹಾಸ ಸೃಷ್ಟಿ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ತುಮಕೂರಿಗೆ ಮೆಟ್ರೋ ರೈಲು ಯೋಜನೆ ನೀಡುವಂತೆ ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ ಡಿಪಿಆರ್ (DPR) ತಯಾರಿ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ವಿಶ್ವದ ಭೂಪಟದಲ್ಲಿ ಸ್ಥಾನ ಸಿಗಲಿದೆ ಎಂದಿದ್ದಾರೆ.
ತುಮಕೂರು ನೂತನ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟನೆ, ಕೊರಟಗೆರೆಯಲ್ಲಿ ಕೆಎಸ್ಆರ್ಪಿ (KSRP) ಬೆಟಾಲಿಯನ್ ಸ್ಥಾಪನೆ, ಅದೇ ರೀತಿ ಪಾವಗಡ ಭದ್ರಾ ನೀರು ಯೋಜನೆ ಉದ್ಘಾಟನೆ, ತುಮಕೂರು ನಗರ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ನೀಡುವಂತೆ ಮತ್ತು ಹಲವು ಕಾಮಗಾರಿ ಉದ್ಘಾಟನೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್, ಸ್ಥಳಿಯರಿಗೆ ಸಿಗುತ್ತಾ ಉದ್ಯೋಗ? ಪರಮೇಶ್ವರ್ಕೊಟ್ರು ಹಿಂಟ್
10 ಸಾವಿರ ಕೋಟಿ ರೂ. ಖರ್ಚು ಮಾಡಿ ನಿಮ್ಮ ಮುಂದೆ ಪ್ರದರ್ಶನ ಮಾಡುತ್ತೇವೆ. ಕಂದಾಯ ಇಲಾಖೆಯಿಂದ ಹಕ್ಕುಪತ್ರ ಕೊಡುವ ಕೆಲಸ ಆಗಿದೆ. ನಮ್ಮ ಜಿಲ್ಲೆಯಲ್ಲಿ 10 ಸಾವಿರ ಹಕ್ಕುಪತ್ರ ಸಿದ್ದವಾಗಿದೆ. ಈ ಪೈಕಿ 2 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಹಂಚಲಾಗಿದೆ. ಸ್ಮಾರ್ಟ್ ಸಿಟಿ ಕೆಲವೇ ವಾರ್ಡ್ಗಳಲ್ಲಿ ಅಭಿವೃದ್ಧಿ ಆಗಿದೆ. ಬಾಕಿ 35 ವಾರ್ಡ್ ಹಾಗೆ ಉಳಿದಿದೆ ಎಂದು ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ವೇಗವಾಗಿ ಬೆಳೆಯಲಿದೆ
2023ರಲ್ಲಿ ರಾಜ್ಯದ ಜನತೆಗೆ ಸಿಎಂ ಹಾಗೂ ಅಧ್ಯಕ್ಷರು ಭರವಸೆ ನೀಡಿದ್ದರು. ಐದು ಗ್ಯಾರಂಟಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಅದರಂತೆ ಗ್ಯಾರಂಟಿಗಳನ್ನ ಜಾರಿ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಅಂತಾ ಹೇಳಿದ್ದೇವು. ಆದರೆ ಕಾರಣಾಂತರಗಳಿಂದ ಅದು ಆಗಿಲ್ಲ. ಅದರ ಬದಲು ಅವರ ಖಾತೆಗಳಿಗೆ ಹಣ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 22 ಲಕ್ಷ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಅಡಿ ಹಣ ನೀಡಲ್ತಾಗಿದೆ. ಗೃಹ ಜ್ಯೋತಿ, ಯುವನಿಧಿ ಜಾರಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ವೇಗವಾಗಿ ಬೆಳೆಯಲಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಲ್ಲಿಕ್ ಮಾಡಿ.