ಶಿವಮೊಗ್ಗ, ಮೇ 30: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ (Superintendent’s suicide case) ಸಂಬಂಧಿಸಿದಂತೆ ಡೆತ್ ನೋಟ್ನಲ್ಲಿ ನಿರ್ದಿಷ್ಟವಾಗಿ ಸಚಿವರ ಹೆಸರು ಬರೆದಿಲ್ಲ. ಹೀಗಾಗಿ ಸಚಿವರ ವಿರುದ್ದ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (G. Parameshwara) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರು ಇತ್ತು. ಇಲ್ಲಿ ಸಚಿವರ ಹೆಸರಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲೇ ಕೆಲಸ ಮಾಡೋದು. ಹೀಗಾಗಿ ತನಿಖಾ ಸಂಸ್ಥೆಗಳನ್ನು ಎಲ್ಲರೂ ನಂಬಬೇಕು. ಸಿಬಿಐ ಮೇಲೂ ಪ್ರಭಾವ ಬೀರಬಹುದು ಅಂತಾ ನಾನು ಹೇಳುತ್ತೇನೆ. ತನಿಖೆ ಸಿಬಿಐಗೆ ವಹಿಸಬೇಕಾ, ಬೇಡವಾ ಅಂತಾ ಸರ್ಕಾರ ನಿರ್ಧರಿಸುತ್ತೆ. ಬಿಜೆಪಿಯವರನ್ನು ಕೇಳಿ ನಾವು ಅಧಿಕಾರ ನಡೆಸಬೇಕಾ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ ಕೇಸ್; ಡೆತ್ನೋಟ್ನಲ್ಲಿದ್ದ ಇಬ್ಬರು ಅಧಿಕಾರಿಗಳು ಅಮಾನತು
ತನಿಖೆಯಲ್ಲಿ ಆಂಧ್ರಕ್ಕೆ ಹಣ ಹೋಗಿದೆಯಾ ಇಲ್ವಾ ಎಂದು ತಿಳಿಯಲಿದೆ. ಹಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ಆಗುತ್ತಿರುತ್ತದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂ ಹಣ ಗುಳಂ ಆರೋಪ, ಬ್ಯಾಂಕ್ ಎಂಡಿ ಸೇರಿ ಹಲವರ ವಿರುದ್ಧ ಎಫ್ಐಆರ್
ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಿಗೆಟ್ಟಿಲ್ಲ. ಬಿಜೆಪಿ ಮಾಡುತ್ತಿರುವ ಆರೋಪ ಶುದ್ದು ಸುಳ್ಳು. ಯಾವುದೇ ಗೂಂಡಾಗಳನ್ನು ನಾವು ಬಿಡುವುದಿಲ್ಲ. ಈ ಹಿಂದೆ ಧರ್ಮದ ಹೆಸರಿನಲ್ಲಿ ಕೊಲೆ ನಡೆಯುತ್ತಿದ್ದವು. ಆದರೆ ಈ ವರ್ಷ ಯಾವುದೇ ಅಂತಹ ಕೊಲೆ ನಡೆದಿಲ್ಲ. ಅವರ ಅವಧಿಯಲ್ಲಿ, ನಮ್ಮ ಅವಧಿಯಲ್ಲಿ ಆಗಿರುವ ಕೊಲೆ ಲೆಕ್ಕ ಕೊಡಬಲ್ಲೆ. ಸೈಬರ್ ಕ್ರೈಂ ಪೊಲೀಸ್ ಠಾಣೆ ಇರಲಿಲ್ಲ. ಸರಕಾರ ಬಂದ ಮೇಲೆ 45 ಸೆನ್ ಪೊಲೀಸ್ ಠಾಣೆ ಓಪನ್ ಆಗಿದೆ. ಈ ಮೂಲಕ ಜನರಿಗೆ ಅನುಕೂಲ ಆಗಿದೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಮಾನ ಹತ್ತುತ್ತಿದ್ದಾರೆ ಅಂತಾ ಟಿವಿಯಲ್ಲಿ ತೋರಿಸುತ್ತಿದ್ದರು. ನಾನು ಟಿವಿಯಲ್ಲೇ ನೋಡಿ ತಿಳಿದೆ. ವಾರೆಂಟ್ ಇದೆ ಕಾನೂನು ಪ್ರಕಾರ ಅರೆಸ್ಟ್ ಮಾಡುತ್ತಾರೆ. ಎಸ್ಐಟಿಯವರು ಕ್ರಮ ಕೈಗೊಳ್ಳುತ್ತಾರೆ. ಟೇಕಾಫ್ ಆಗಿದ್ದರೆ, ಅವರು ವಿಮಾನ ಹತ್ತಿದ್ದರೆ, ವಿಮಾನದಲ್ಲಿ ಇದ್ದರೆ 9 ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.