ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂ ಹಣ ಗುಳಂ ಆರೋಪ, ಬ್ಯಾಂಕ್ ಎಂಡಿ ಸೇರಿ ಹಲವರ ವಿರುದ್ಧ ಎಫ್ಐಆರ್
ಬೆಂಗಳೂರಿನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬರೋಬ್ಬರಿ 187.33 ಕೋಟಿ ರೂ. ಹಣ ಹಗರಣದಿಂದ ಬೇಸತ್ತು ಸೂಪರಿಂಡೆಂಟ್ ಚಂದ್ರಶೇಖರ್ ಎಂಬುವವರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ನಿಗಮದ ಅಕೌಂಟ್ಗೆ ಹಣ ವರ್ಗಾವಣೆ ಹಿನ್ನೆಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಮೇ 29: ಶಿವಮೊಗ್ಗದಲ್ಲಿ (Shivamogga) ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧಿಕಾರಿ ಆತ್ಮಹತ್ಯೆ ಘಟನೆ ಈಗ ದೊಡ್ಡ ಸದ್ದು ಮಾಡುತ್ತಿದೆ. ಇತ್ತ ಪತಿ ಕಳೆದುಕೊಂಡ ಕುಟುಂಬಸ್ಥರು ತಮಗೆ ಅನ್ಯಾಯವಾಗಿದೆ, ನ್ಯಾಯಬೇಕೆಂದು ಕಣ್ಣೀರು ಹಾಕುತ್ತಿದ್ದಾರೆ. ಇದೆಲ್ಲದರ ಮಧ್ಯೆ ನಿಮಗದ ಕೋಟ್ಯಾಂತರ ರೂ. ಹಣ ಗುಳಂ ಮಾಡಿರುವ ಆರೋಪ ಕೇಳಿಬಂದಿದೆ. ಬರೋಬ್ಬರಿ 187.33 ಕೋಟಿ ರೂ. ಹಣ ನಿಗಮದ ಅಕೌಂಟ್ಗೆ ವರ್ಗಾವಣೆ ಹಿನ್ನೆಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸೇರಿದಂತೆ ಹಲವರ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಎಂಬುವವರು ನೀಡಿದ ದೂರು ಆಧರಿಸಿ ಯೂನಿಯನ್ ಬ್ಯಾಂಕ್ನ ಎಂಡಿ ಹಾಗೂ ಸಿಇಒ ಮನಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಹ್ಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ, ಶುಚಿತಾ ಸೇರಿದಂತೆ ಬ್ಯಾಂಕ್ ಆಡಳಿತ ಮಂಡಳಿಯವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಅವ್ಯವಹಾರ: ಡೆತ್ನೋಟ್ ಬರೆದಿಟ್ಟು ಅಧೀಕ್ಷಕ ಆತ್ಮಹತ್ಯೆ
ನಿಗಮ ಹೆಸರಲ್ಲಿ ವಸಂತನಗರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಖಾತೆ ಇತ್ತು. ಫೆ.19ರಂದು ಖಾತೆಯನ್ನು ಎಂ.ಜಿ.ರೋಡ್ ಬ್ರ್ಯಾಂಚ್ಗೆ ವರ್ಗಾವಣೆ ಮಾಡಲಾಗಿದೆ. ಫೆ.26ರಂದು ನಿಗಮದ ಎಂಡಿ, ಲೆಕ್ಕಾಧಿಕಾರಿಗಳು ಸಹಿ ಪಡೆದುಕೊಂಡಿದ್ದಾರೆ. ಬಳಿಕ ಸದರಿ ಖಾತೆಯಿಂದ ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮೇ 21ರಂದು 50 ಕೋಟಿ ರೂ., ಮೇ 22ರಂದು 33 ಕೋಟಿ ರೂ. ಎಂಬಂತೆ ನಿಗಮದ ಬ್ಯಾಂಕ್ ಖಾತೆಯಿಂದ ಒಟ್ಟು 187.33 ಕೋಟಿ ರೂ. ಹಣ ವರ್ಗಾವಣೆ ಆಗಿದೆ.
ನಿಗಮದ ಅಕೌಂಟ್ನಿಂದ ಬೇರೆ ಬೇರೆ ಅಕೌಂಟ್ಗೆ ಹಾಗೂ ಸ್ಟೇಟ್ ಹುಜುರ್ ಟ್ರೇಜರಿ ಖಾಜನೆ -02 ಯಿಂದ ನಿಗಮದ ಖಾತೆಗೆ ಹಣ ಸಂದಾಯವಾಗಿದೆ. ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸದರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ. ಆದರೂ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ. ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ; ಮೂವರು ಅಧಿಕಾರಿಗಳ ಮೇಲೆ ಎಫ್ಐಆರ್
ಬ್ಯಾಂಕ್ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ಹಣ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಅಕ್ರಮದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಸೇರಿದಂತೆ ರಾಜಕೀಯ ಪ್ರಭಾವಿಗಳು ಭಾಗಿಯಾಗಿರುವ ಆರೋಪ ಕೂಡ ಇದೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡು ಹೈಗ್ರೌಂಡ್ಸ್ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.