ಶಿಕ್ಷಕರ ನೇಮಕಾತಿ: ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದರೂ ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಹುದ್ದೆ ಕೈತಪ್ಪುವ ಆತಂಕ
ಶಿಕ್ಷಕರ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಪಾಸ್ ಆಗಿ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ನೀಡಿದ ವಿವಾಹಿತ ಮಹಿಳೆಯರಿಗೆ ಶಿಕ್ಷಣ ಇಲಾಖೆಯ ನಿಯಮ ಶಾಕ್ ನೀಡಿದೆ. ಶಿಕ್ಷಕ ಹುದ್ದೆ ಕೈತಪ್ಪುವ ಆತಂಕದಲ್ಲಿ ಸಾವಿರಾರು ವಿವಾಹಿತ ಮಹಿಳೆಯರಿದ್ದಾರೆ.
ಗದಗ: ಪದವೀಧರರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆಯ ನಿಯಮ ಶಾಕ್ ನೀಡಿದೆ. ತಂದೆ ಮನೆಯ ಆದಾಯ, ಜಾತಿ ಪ್ರಮಾಣ ಪತ್ರ ಆಗುವುದಿಲ್ಲ, ಪತಿ ಮನೆಯ ಆದಾಯ, ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ ಎಂಬ ಶಿಕ್ಷಣ ಇಲಾಖೆಯ ನಿಯಮವು ವಿವಾಹಿತ ಮಹಿಳೆಯರಲ್ಲಿ ಹುದ್ದೆ ಕೈತಪ್ಪುವ ಭೀತಿಯನ್ನು ಉಂಟುಮಾಡಿದೆ. ಸರ್ಕಾರಿ ನೌಕರಿ ಸಿಗುವವರೆಗೂ ಮಹಿಳೆಯರು ಮದುವೆ ಆಗಬಾರದಾ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ ನಿಯಮದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಾನೂನು ನಾಗೇಶ್ ಬಂದ ಮೇಲೆ, ಬಿಜೆಪಿ ಸರ್ಕಾರ ಬಂದ ಮೇಲೆ ಆಗಿಲ್ಲ ಎಂದು ಹೇಳಿದ್ದಾರೆ. ಶಿಕ್ಷಣ ಇಲಾಖೆ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುವ ವಿವಾಹಿತ ಮಹಿಳಾ ಅಭ್ಯರ್ಥಿಗಳು, ಸರ್ಕಾರ ನೋಟಿಫಿಕೇಶನ್ಲ್ಲಿ ಯಾವುದೇ ಸೂಚನೆ ಕೊಟ್ಟಿಲ್ಲ. ಬೇರೆ ಇಲಾಖೆ ಹುದ್ದೆಗಳ ನೇಮಕದಲ್ಲಿ ಇರದ ನಿಯಮ, ಕಾನೂನು ನಮಗೆ ಯಾಕೆ ಎಂದು ಗದಗ ನಗರದಲ್ಲಿ ಮಹಿಳಾ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ 2022 ಮಾರ್ಚ್ ತಿಂಗಳಲ್ಲಿ ಪದವೀಧರರ ಪ್ರಾಥಮಿಕ ಶಿಕ್ಷಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಹೀಗಾಗಿ ಬಹುವರ್ಷಗಳ ನಂತರ ಶಿಕ್ಷಕರ ನೇಮಕಾತಿ ನಡಿಯುತ್ತಿರುವುದರಿಂದ ಅಭ್ಯರ್ಥಿಗಳು ಶತಾಯಗತಾಯ ಶಿಕ್ಷಕ ಹುದ್ದೆ ಗಿಟ್ಟಿಸಿಕೊಳ್ಳಲು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದ್ದಾರೆ. ಮೇ 21-22ರಂದು ಪರೀಕ್ಷೆ ಬರೆದ ಸಾವಿರಾರು ಮಹಿಳೆಯರು ಆಯ್ಕೆ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.
ಅದರಂತೆ ದಾಖಲೆಗಳ ಪರಿಶೀಲನೆಯೂ ನಡೆದಿದೆ. ಈ ವೇಳೆ ಶಿಕ್ಷಣ ಇಲಾಖೆ ಕೊಟ್ಟ ಶಾಕ್ಗೆ ವಿವಾಹಿತ ಮಹಿಳಾ ಅಭ್ಯರ್ಥಿಗಳು ಅಕ್ಷರಶಃ ಕಂಗಾಲಾಗಿದ್ದಾರೆ. ದಾಖಲೆ ಪರಿಶೀಲನೆಯಲ್ಲಿ ತಂದೆ ಮನೆಯ ಆದಾಯ, ಜಾತಿ ನಡೆಯಲ್ಲ, ಪತಿ ಮನೆಯ ಆದಾಯ, ಜಾತಿ ಪ್ರಮಾಣ ಪತ್ರ ಕಡ್ಡಾಯ ಅಂತ ಶಿಕ್ಷಣ ಇಲಾಖೆ ಹೇಳುತ್ತಿದೆ. ಇದು ವಿವಾಹಿತ ಮಹಿಳಾ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೆ, ಪತಿ ಮನೆಯ ಆದಾಯ, ಜಾತಿ ಪ್ರಮಾಣ ಪತ್ರ ನೀಡದಿದ್ದರೆ ನಿಮ್ಮನ್ನು ಜಿಎಂನಲ್ಲಿ ಪರಿಗಣಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಹೀಗೆ ಮಾಡಿದರೆ ಟಾಪ್ 5ರಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ ಅಂತ ಮಹಿಳೆಯರು ಗೋಳಾಡುತ್ತಿದ್ದಾರೆ. ಮಹಿಳೆಯರು ಸರ್ಕಾರಿ ನೌಕರಿ ಮಾಡಬೇಕೆಂದರೆ ಮದುವೆ ಆಗಬಾರದಾ ಅಂತ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲಾ ಇಲಾಖೆ ನೇಮಕಾತಿಯಲ್ಲಿ ತಂದೆ ಮನೆಯ ಜಾತಿ, ಆದಾಯ ಕಡ್ಡಾಯ ಇದೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಈ ನೀತಿ ಯಾಕೆ ಎಂದು ಕೇಳಲಾಗುತ್ತಿದೆ.
ಗದಗ ನಗರಕ್ಕೆ ಭಾನುವಾರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಆಗಮಿಸಿದ್ದಾರೆ. ಹೀಗಾಗಿ ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟೆ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ 30ಕ್ಕೂ ಅಧಿಕ ಮಹಿಳಾ ಅಭ್ಯರ್ಥಿಗಳು ಆಗಮಿಸಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಕೈಮುಗಿದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ಬೇಡಿಕೊಂಡರು. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 3 ಸಾವಿರ ಮದುವೆಯಾದ ಮಹಿಳೆಯರು ಅತಂತ್ರ ಸ್ಥಿತಿಯಲ್ಲಿ ಇದ್ದೇವೆ. ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದರೂ ಕಳೆದುಕೊಳ್ಳುವ ಭಯ, ಆತಂಕದಲ್ಲಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ನ್ಯಾಯ ಕೊಡಿ ಅಂತ ಶಿಕ್ಷಣ ಸಚಿವರಲ್ಲಿ ಬೇಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಕಾನೂನು ನಾಗೇಶ್ ಬಂದ ಮೇಲೆ, ಬಿಜೆಪಿ ಸರ್ಕಾರ ಬಂದ ಮೇಲೆ ಆಗಿಲ್ಲ. ಅನ್ಯಾಯ ಅನ್ನುವಂಥದ್ದು ಮೊದಲೇ ವಿಷಯವಾಗಿತ್ತು. ಈಗ ವಯಕ್ತಿಕ ಆಗಿದೆ. ಡಿಪಿಆರ್ ಅನ್ನುವಂಥದ್ದು ಎಲ್ಲರಿಗೂ ಫ್ರೇಮ್ ಮಾಡುತ್ತದೆ. ಇದು ರಿಸರ್ವೇಶನ್ ಇದ್ದವರಿಗೆ ಮಾತ್ರ ಅನ್ವಯ ಆಗುತ್ತದೆ. ಮೀಸಲಾತಿ ಕ್ಲೈಮ್ ಮಾಡಬೇಕು ಅಂದರೆ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ಮೀಸಲಾತಿ ಬೇಡ ಅಂದರೆ ಆದಾಯ ಪ್ರಮಾಣಪತ್ರ ಕೇಳಲ್ಲ. ನೋಟಿಫಿಕೇಷನ್ ನಲ್ಲಿ ಇದೆಲ್ಲಾ ಇರಲ್ಲ. ಎಲ್ಲಾ ಇಲಾಖೆಯಲ್ಲಿ ಇದೇ ಕಾನೂನು ಇದೆ. ಈ ಬಗ್ಗೆ ಗೋತ್ತಿಲ್ಲದೆ ಮಾತಾಡಿದ್ದಾರೆ. ಮದುವೆ ಆಗಬಾರದರು ಅಂತ ಹೇಳಿಲ್ಲ. ಸುಳ್ಳು ಹೇಳಬೇಡಿ ಅಂತ ಸಚಿವರು ಹೇಳಿದರು.
ರಾಜ್ಯದಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ಸುಮಾರು 3ಸಾವಿರ ವಿವಾಹಿತ ಮಹಿಳೆಯರು ಇದ್ದಾರೆ. ನಮ್ಮ ದಾಖಲೆಗಳೆಲ್ಲವೂ ತವರು ಮನೆಯ ಹೆಸರಲ್ಲಿ ಇವೆ. ಈಗ ಏಕಾಏಕಿ ಪತಿಯ ಮನೆಯ ಆದಾಯ, ಜಾತಿ ಅಂದರೆ ಹೇಗೆ? ಮೊದಲೇ ಅಧಿಸೂಚನೆಯಲ್ಲಿ ತಿಳಿಸಿದ್ದರೆ ಹಾಗೇ ಮಾಡುತ್ತಾ ಇದ್ದೆವು. ಸರ್ಕಾರ ಪತಿ ಮನೆಯ ಆದಾಯ, ಜಾತಿ ನೋಡಿ ನೇಮಕ ಮಾಡುತ್ತೋ ಅಥವಾ ನಮ್ಮ ಶಿಕ್ಷಣ ಪ್ರಮಾಣ ಪತ್ರ ನೋಡಿ ನೇಮಕ ಮಾಡಿಕೊಳ್ಳುತ್ತದೆಯೋ ಅಂತ ಸ್ಪಷ್ಟಪಡಿಸಬೇಕು ಅಂತ ಮಹಿಳೆಯರು ಹೇಳಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ