ಗದಗ: ಬಸವೇಶ್ವರ ಜಾತ್ರೆಯ ರಥೋತ್ಸವದ ವೇಳೆ ಅವಘಡ; ರಥದ ಗಾಲಿಗೆ ಸಿಲುಕಿ ವ್ಯಕ್ತಿ ಸಾವು
ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ರಥೋತ್ಸವದ ಗಾಲಿಗೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹೌದು, ರಥದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಗದಗ, ಆ.30: ಬಸವೇಶ್ವರ ಜಾತ್ರೆಯ (Basaveshwar Jatre) ರಥೋತ್ಸವದ ವೇಳೆ ವ್ಯಕ್ತಿಯೋರ್ವನ ಮೇಲೆ ಗಾಲಿ ಹಾಯ್ದು ಸಾವನ್ನಪ್ಪಿದ ದುರ್ಘಟನೆ ಗದಗ (Gadag) ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಕರ್ಕಿಕಟ್ಟಿ ಗ್ರಾಮದ ಯಲ್ಲಪ್ಪಗೌಡ (42) ಮೃತದುರ್ದೈವಿ ಎನ್ನಲಾಗಿದೆ. ತೇರು ಎಳೆಯುವ ವೇಳೆ ಮೈ ಮೇಲೆ ರಥದ ಗಾಲಿ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪಗೌಡನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಯಲ್ಲಪ್ಪಗೌಡ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವಾಕಿಂಗ್ ಮಾಡುವ ವೇಳೆ ಕಾರು ಅಪಘಾತ; ಗಾಯಗೊಂಡಿದ್ದ ಪಾದಚಾರಿ 2 ತಿಂಗಳ ಬಳಿಕ ಸಾವು
ಬೆಂಗಳೂರು: ಜೂ.10ರಂದು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ವಾಕಿಂಗ್ ಮಾಡುವ ವೇಳೆ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಪಾದಚಾರಿ ವೃದ್ಧ, ಚಿಕಿತ್ಸೆ ಫಲಿಸದೆ 2 ತಿಂಗಳ ನಂತರ ಸಾವನ್ನಪ್ಪಿದ್ದಾರೆ. ವೃದ್ಧ ಸುಬ್ರಮಣಿಯನ್(63) ಮೃತವ್ಯಕ್ತಿ. ಶಿರ್ಕೆ ಅಪಾರ್ಟ್ಮೆಂಟ್ ಕಡೆಯಿಂದ ನಾಗದೇವನಹಳ್ಳಿ ಕಡೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿರ್ಲಕ್ಷ್ಯದಿಂದ ಪಾದಚಾರಿಗೆ ಕಾರು ಡಿಕ್ಕಿಯಾಗಿತ್ತು. ಪಾದಚಾರಿ ಸುಬ್ರಮಣಿಯನ್ ತಲೆ, ಬಲಗೈ, ಬಲಗಾಲಿಗೆ ತೀವ್ರ ಪೆಟ್ಟಾಗಿತ್ತು.
ಇದನ್ನೂ ಓದಿ:ಅಕ್ಕ-ತಂಗಿ ಇಬ್ಬರೂ ಟೆಕ್ಕಿಗಳು, WFH ಮಾಡ್ತಿದ್ದರು: ಆದರೆ ಅಕ್ಕ ಸಾವು, ತಂಗಿ ಪರಾರಿ! ಸಂಚಲನ ಮೂಡಿಸಿದೆ ಆ ನಿಗೂಢ ಸಾವು
ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಸಂಭವಿಸಿದ್ದ ಅಪಘಾತ
ಇನ್ನು ಅಪಘಾತವಾಗುತ್ತಿದ್ದಂತೆ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 304(ಎ) ಅಡಿ ಪ್ರಕರಣ ದಾಖಲಾಗಿತ್ತು. ಇದೀಗ ವೃದ್ಧ ಸುಬ್ರಮಣಿಯನ್ ಚಿಕಿತ್ಸೆ ಫಲಿಸದೆ ಎರಡುವರೆ ತಿಂಗಳ ಬಳಿಕ ಕೊನೆಯುಸಿರೆಳೆದಿದ್ದಾರೆ.
ಬೈಕ್ಗಳ ನಡುವೆ ಡಿಕ್ಕಿ; ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು
ರಾಮನಗರ: ತಾಲೂಕಿನ ಚೆನ್ನಯ್ಯನಹಳ್ಳಿ ಬಳಿ ಬೈಕ್ ಡಿಕ್ಕಿಯಾಗಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ನಂಜಯ್ಯ ಮಾಸ್ಟರ್(75) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮತ್ತೊಂದು ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಮೃತ ನಂಜಯ್ಯ ಅವರು ಟಿವಿಎಸ್ ಎಕ್ಸಲ್ ತೆಗೆದುಕೊಂಡು ರಾಮನಗರದಿಂದ ಅಂಕನಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಅಪಘಾತವಾಗಿದ್ದು, ಗುದ್ದಿದ ಪರಿಣಾಮ ಕಾಲು ಮುರಿತವಾಗಿ, ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ