ಪಿನ್​ ಸೆಟ್​ ಮಾಡಿಕೊಡುತ್ತೇನೆ ಅಂತ ATM ಕಾರ್ಡ್ ಬದಲಾಯಿಸಿ ಅಮಾಯಕರ ಖಾತೆಯಿಂದ ಹಣ ದೋಚುತ್ತಿದ್ದ ಆರೋಪಿ ಅರೆಸ್ಟ್​

| Updated By: ವಿವೇಕ ಬಿರಾದಾರ

Updated on: Dec 24, 2024 | 8:32 AM

ಗದಗದ ಬೆಟಗೇರಿಯಲ್ಲಿ ATM ಕಾರ್ಡ್ ಬದಲಾಯಿಸಿ 62,000 ರೂಪಾಯಿಗಳನ್ನು ದೋಚಿದ ಆರೋಪದ ಮೇಲೆ ಸತೀಶ್ ಬಿರಾದಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ATM ಯಲ್ಲಿ ಪಿನ್ ಸೆಟ್ ಮಾಡಲು ಸಹಾಯ ಮಾಡುವ ನೆಪದಲ್ಲಿ ವಂಚಿಸಿದ್ದಾನೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿವಿಧ ಸ್ಥಳಗಳಲ್ಲಿ ಇದೇ ರೀತಿಯ ಅಪರಾಧಗಳನ್ನು ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿನ್​ ಸೆಟ್​ ಮಾಡಿಕೊಡುತ್ತೇನೆ ಅಂತ ATM ಕಾರ್ಡ್ ಬದಲಾಯಿಸಿ ಅಮಾಯಕರ ಖಾತೆಯಿಂದ ಹಣ ದೋಚುತ್ತಿದ್ದ ಆರೋಪಿ ಅರೆಸ್ಟ್​
ಆರೋಪಿ ಸತೀಶ್​
Follow us on

ಗದಗ, ಡಿಸೆಂಬರ್​ 24: ಪಿನ್ ಸೆಟ್ ಮಾಡಿಕೊಡುತ್ತೇನೆ ಅಂತ ಹೇಳಿ ಎಟಿಎಂ ಕಾರ್ಡ್ (ATM Card) ಬದಲಾಯಿಸಿ, ಹಣ ದೋಚುತ್ತಿದ್ದ ಕಳನನ್ನು ಬೆಟಗೇರಿ ಬಡಾವಣೆ ಪೊಲೀಸರು (Betageri Police) ಬಂಧಿಸಿದ್ದಾರೆ. ಸತೀಶ ಬಿರಾದಾರ ಬಂಧಿತ ಆರೋಪಿ. ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕವೇನೂರು ಗ್ರಾಮದ ನಿವಾಸಿಯಾಗಿರುವ ಸತೀಶ್ ಬಿರಾದಾರ ಓದಿದ್ದು ಕೇವಲ 3ನೇ ತರಗತಿ. ಆದರೆ, ವಂಚನೆ ಮಾಡುವುದರಲ್ಲಿ ಪಿಎಚ್‌ಡಿ ಮಾಡಿದ್ದಾನೆ.

ಬೆಟಗೆರಿ ನಗರದ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ಇರುವ ಕೆನರಾ ಬ್ಯಾಂಕ್ ಎಂಟಿಎಂ ಬಳಿ ಸತೀಶ್​ ಬಿರಾದಾರ ನಿಂತಿದ್ದನು. ಇದೇ ವೇಳೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಹುಲಿಗೆವ್ವ ಕುರಿ ಎಂಬುವರು ಎಟಿಎಂಗೆ ಬಂದಿದ್ದಾರೆ. ಹೊಸ್​ ಎಟಿಎಂ ಕಾರ್ಡ್​ಗೆ ಪಿನ್ ಸೆಟ್ ಮಾಡಲು ಪರದಾಡುತ್ತಿದ್ದರು. ಹುಲಿಗೆವ್ವ ಅವರ ಪರದಾಟ ಕಂಡು ಎಂಟಿಎಂ ಒಳಗೆ ಹೋದ ಸತೀಶ್ ಪಿನ್ ಸೆಟ್ ಮಾಡಿಕೊಡುವುದಾಗಿ ಹೇಳಿದ್ದಾನೆ.

ಬಳಿಕ, ನಿಮ್ಮ ಎಟಿಎಂಗೆ ಪಿನ್ ಸೆಟ್ ಆಗಿದೆ ಎಂದು ಹೇಳಿದ್ದಾನೆ. ನಂತರ ಹುಲಿಗೆವ್ವ ಅವರಿಗೆ ಬೇರೆ ಎಟಿಎಂ ಕಾರ್ಡ್ ಕೊಟ್ಟು ಕಳಿಸಿದ್ದಾನೆ. ನಂತರ, ಹುಲಿಗೆವ್ವ ಅವರ ಎಂಟಿಎಂ ಕಾರ್ಡ್​​ನಿಂದ ಹಂತ ಹಂತವಾಗಿ 62 ಸಾವಿರ ಹಣ ಡ್ರಾ ಮಾಡಿದ್ದಾನೆ. ಹಣ ಕಳೆದುಕೊಂಡು ಹುಲಿಗೆವ್ವ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನೂ ಕಿಲಾಡಿ ಸತೀಶ್ ಬಿರಾದಾರ ದುಶ್ಚಟಗಳಿಗೆ ಬಲಿಯಾಗಿದ್ದಾನೆ. ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಾ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಎಟಿಎಂ ಬಳಿ ನಿಂತು ವಂಚನೆ ಮಾಡುತ್ತಿದ್ದನು. ಬೇರೆ ಬೇರೆ ಬ್ಯಾಂಕ್​ಗಳ ಎಟಿಎಂ ಬಳಿ ನಿಂತು ಅಮಾಯಕರು ಬಂದಾಗ, ಅವರಿಗೆ ಸಹಾಯ ಮಾಡುವ ರೀತಿ ನಾಟಕವಾಡಿ, ಕ್ಷಣಾರ್ಧದಲ್ಲಿ ಎಟಿಎಂ ಬದಲಾವಣೆ ಮಾಡಿ, ಅಲ್ಲಿಂದ ಎಸ್ಕೇಪ್ ಆಗುತ್ತಿದ್ದನು. ಬಂದ ಹಣದಿಂದ ಗ್ರಾಮದಲ್ಲಿ ಓಸಿ, ಎಸ್ಟೇಟ್, ಮದ್ಯ ಸೇವನೆ ಮಾಡುತ್ತಾ ಹಣ ಉಡಾಯಿಸುತ್ತಿದ್ದನು.

ಇದನ್ನೂ ಓದಿ: ಹೊಸ ನಿಯಮದಿಂದ ಎಂಆರ್​ಐ, ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಲು ಪರದಾಡುತ್ತಿರುವ ಜಿಮ್ಸ್ ​​ರೋಗಿಗಳು

ಹಣ ಖಾಲಿಯಾದ ಮೇಲೆ ಮತ್ತೆ, ಇದೇ ಕೃತ್ಯ ತೊಡಗಿಸುಕೊಳ್ಳುತ್ತಿದ್ದನು. ಗದಗ ನಗರದಲ್ಲಿ ತನ್ನ ಕೈಚಳಕ ತೋರಿಸಿದ್ದ ಸತೀಶ್​ನ ಎಲ್ಲ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿಯ ದೃಶ್ಯಗಳನ್ನು ಆಧರಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ‌.

ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಹೊಸದಾಗಿ ಎಟಿಎಂ ಪಿನ್ ಸೆಟ್ ಮಾಡುವ ಅಲ್ಲಿನ ಸಿಬ್ಬಂದಿಗಳ ಹತ್ತಿರ ಮಾಡಿಸಿಕೊಳ್ಳಬೇಕು, ಇಲ್ಲವಾದರೆ ಇಂತಹ ಖದೀಮರ ನಿಮ್ಮ ಹಣವನ್ನು ಲಪಟಾಯಿಸುತ್ತಾರೆ. ಅಪರಿಚಿತ ವ್ಯಕ್ತಿಗಳ ಹತ್ತಿರ ಎಟಿಎಂ ಕಾರ್ಡ್ ಕೊಡುವಾಗ ಎಚ್ಚರಿಕೆಯಿಂದ ಇರಬೇಕು, ಇಲ್ಲವಾದರೆ ನಿಮ್ಮ ಹಣ ಕಂಡವರ ಪಾಲಾಗುತ್ತೆ ಎಚ್ಚರಿಕೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 am, Tue, 24 December 24