ಗದಗ ಭೀಕರ ಅಪಘಾತ: ಹಸೆಮಣೆ ಏರಬೇಕಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಸೇರಿ ಮೂವರು ಸಾವು
ಗದಗ ತಾಲೂಕಿನ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಟಿವಿ9 ಪೊಲೀಸ್ ಸೆಲ್ಯೂಟ್ ಪ್ರಶಸ್ತಿ ಪಡೆದಿದ್ದ ಅರ್ಜುನ್ ನೆಲ್ಲೂರ ಕೂಡ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಗದಗ, ಸೆಪ್ಟೆಂಬರ್ 19: ಭೀಕರ ರಸ್ತೆ ಅಪಘಾತದಲ್ಲಿ (Accident) ಇಬ್ಬರು ಕಾನ್ಸ್ಟೇಬಲ್‌ಗಳು ಸೇರಿದಂತೆ ಮೂವರು (death) ದುರ್ಮರಣ ಹೊಂದಿರುವಂತಹ ಘಟನೆ ಗದಗ ತಾಲೂಕಿನ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ. ಕಾರಿನಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ಗಳಾದ ಅರ್ಜುನ್ ನೆಲ್ಲೂರ(29) ಮತ್ತು ವೀರೇಶ್ ಉಪ್ಪಾರ(31) ಸೇರಿ ಅರ್ಜುನ್ ಚಿಕ್ಕಪ್ಪ ರವಿ ನೆಲ್ಲೂರ(43) ಮೃತರು. ಅರ್ಜುನ್ ನೆಲ್ಲೂರ ಟಿವಿ9 ಪೊಲೀಸ್ ಸೆಲ್ಯೂಟ್ ಅವಾರ್ಡ್ ಪಡೆದಿದ್ದರು.
ನಡೆದದ್ದೇನು?
ಅರ್ಜುನ್ ನೆಲ್ಲೂರ, ವೀರೇಶ್ ಉಪ್ಪಾರ ಮತ್ತು ರವಿ ನೆಲ್ಲೂರ ಕಾರಿನಲ್ಲಿ ತೆರಳುತ್ತಿದ್ದರು. ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಬಳಿಕ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ಭೀಕರತೆಗೆ ಕಾರಿನ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿವೆ.
ಅಪಘಾತದ ಭಯಾನಕತೆ ಬಿಚ್ವಿಟ್ಟ ಗೋವಾ ಬಸ್ ಚಾಲಕ ಮತ್ತು ನಿರ್ವಾಹಕ
ಟಿವಿ9ಗೆ ಗೋವಾ ಬಸ್ ಚಾಲಕ ದಿಲೀಪ್ ಹಾಗೂ ನಿರ್ವಾಹಕ ಹೀರೇಶ ಅಪಘಾತದ ಭಯಾನಕತೆ ಬಿಚ್ವಿಟ್ಟಿದ್ದಾರೆ. ಕಾರು ವೇಗವಾಗಿ ಬರುತ್ತಿತ್ತು. ಏಕಾಏಕಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಜಂಪ್ ಆಗಿ ಫುಟ್ಬಾಲ್ನಂತೆ ಬಂದು ಬಸ್ಗೆ ಡಿಕ್ಕಿ ಹೊಡೆಯಿತು. ಆಗ ಎದೆ ಝಲ್ ಅಂತು. ಕೆಳಗೆ ಇಳಿದು ನೋಡಿದರೆ ಕಾರ್ನಲ್ಲಿ ಇದ್ದ ಮೂವರು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ಹಸೆಮಣೆ ಏರಬೇಕಿದ್ದವರು ದಾರುಣ ಅಂತ್ಯ
ಇನ್ನು ಘಟನೆಯಲ್ಲಿ ಮೃತಪಟ್ಟ ಮೂವರ ಪೈಕಿ ಇಬ್ಬರು ಕಾನ್ಸ್ಟೇಬಲ್‌ಗಳು ಹಸೆಮಣೆ ಏರಬೇಕಿತ್ತು. ಅರ್ಜುನ ನೆಲ್ಲೂರ ಮತ್ತು ವೀರೇಶ್ ಉಪ್ಪಾರ ಹಸೆಮಣಿ ಏರಬೇಕಿತ್ತು. ಇವರಿಬ್ಬರು ಪೊಲೀಸ್ ಇಲಾಖೆ ಸೇರಿ ಏಳು ವರ್ಷವಾಗಿತ್ತು.
ಇದನ್ನೂ ಓದಿ: ಸಾವಿನಲ್ಲೂ ಮಾನವೀಯತೆ ಮೆರೆದ ಕೆಎಸ್ಆರ್ಟಿಸಿ ಚಾಲಕ: ಹೃದಯಾಘಾತವಾದರೂ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಣೆ!
ವೀರೇಶ್ ಉಪ್ಪಾರ ಕೊಪ್ಪಳ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದರೆ, ಅರ್ಜುನ್ ನೆಲ್ಲೂರ ಹಾವೇರಿ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅರ್ಜುನ್ ನೆಲ್ಲೂರ ಟಿವಿ9 ಪೊಲೀಸ್ ಸೆಲ್ಯೂಟ್ ಅವಾರ್ಡ್ ಪಡೆದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:50 am, Fri, 19 September 25



