ಗದಗ: ಕೈ-ಕಾಲು ಕಟ್ಟಿ, ಅರೆಬೆತ್ತಲೆ ಸ್ಥಿತಿಯಲ್ಲಿ ಕೃಷಿ ಹೊಂಡದಲ್ಲಿ ಶವ ಪತ್ತೆ; ಬೆಚ್ಚಿದ ಗ್ರಾಮಸ್ಥರು
ಗದಗ ಜಿಲ್ಲೆಯ ಕಣಗಿನಾಳ-ಹರ್ಲಾಪೂರ ಗ್ರಾಮಗಳ ಮಧ್ಯೆದರಲ್ಲಿರುವ ಕೃಷಿ ಹೊಂಡದಲ್ಲಿ ಕೈ-ಕಾಲು ಕಟ್ಟಿ, ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಇದು ಕೊಲೆಯೆಂದು ಶಂಕಿಸಲಾಗಿದೆ. ಎಸ್.ಪಿ. ರೋಹನ್ ಜಗದೀಶ್ ಸ್ಥಳ ಪರಿಶೀಲಿಸಿದ್ದು, ಕೊಲೆಯನ್ನು ಖಚಿತಪಡಿಸಿದ್ದಾರೆ. ಹಂತಕರನ್ನು ಪತ್ತೆಹಚ್ಚಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ. ಈ ನಿಗೂಢ ಕೊಲೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ.

ಗದಗ, ನವೆಂಬರ್ 12: ಗದಗ (Gadag) ತಾಲೂಕಿನ ಕಣಗಿನಾಳ ಹಾಗೂ ಹರ್ಲಾಪೂರ ಗ್ರಾಮಗಳ ಮಧ್ಯೆದಲ್ಲಿರುವ ಹೊಂಡದಲ್ಲಿ ಕೈ, ಕಾಲು ಕಟ್ಟಿ, ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವಂತಹ (Dead Body) ಘಟನೆ ನಡೆದಿದೆ. ಸದ್ಯ ಎರಡು ಗ್ರಾಮದ ಜನರು ಬೆಚ್ಚಿಬಿದಿದ್ದಾರೆ. ಹಂತಕರು ಕೊಲೆ ಮಾಡಿ ಹೊಂಡದಲ್ಲಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಹಂತಕರ ಹೆಡೆಮುರಿ ಕಟ್ಟಲು ಪೊಲೀಸರು ಶೋಧ ನಡೆಸಿದ್ದಾರೆ.
ಗದಗ ತಾಲೂಕಿನ ಕಣಗಿನಾಳ ಗ್ರಾಮದ ಈಶಪ್ಪ ಕುರಿಯವರ ಎಂಬುವ ಜಮೀನಿನಲ್ಲಿ ಶವಪತ್ತೆಯಾಗಿದೆ. ಸುಮಾರು 35-40 ವರ್ಷ ವಯಸ್ಸಿನ ವ್ಯಕ್ತಿ ಶವವಾಗಿದ್ದು, ಎರಡು ದಿನಗಳ ಹಿಂದೆ ಕೊಲೆ ಮಾಡಿ ಹೊಂಡದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸುಖಿ ಸಂಸಾರದಲ್ಲಿ ಮೂರನೇ ವ್ಯಕ್ತಿ ಎಂಟ್ರಿ: ಬಲರಾಮನಿಗಾಗಿ ಕಟ್ಟಿಕೊಂಡ ಗಂಡನನ್ನೇ ಕೊಂದ ಹೆಂಡ್ತಿ
ಮಂಗಳವಾರ ಸಂಜೆ ವೇಳೆ ಶವ ಪತ್ತೆ ಆಗಿದೆ. ಇದು ಎರಡು ಗ್ರಾಮಗಳ ಜನರಿಗೆ ಗೊತ್ತಾಗಿದೆ. ಗದಗ ಗ್ರಾಮೀಣ ಪೊಲೀಸರಿಗೂ ತಿಳಿಸಿದ್ದಾರೆ. ಗದಗ ಎಸ್ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜ್ ಖಾದ್ರಿ, ಸಿಪಿಐ ಸಿದ್ದೇಶ್ವರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಕೈಯನ್ನು ಒಳುಡುಪಿನಿಂದ ಕಟ್ಟಿದ್ದು, ಕಾಲಿಗೆ ಪ್ಯಾಂಟಿನಿಂದ ಕಟ್ಟಿ ಶವ ಎಸೆದು ಹಂತಕರು ಪರಾರಿಯಾಗಿದ್ದಾರೆ.
ಪಕ್ಕಾ ಕೊಲೆ ಎಂದ ಎಸ್ಪಿ
ಎಸ್ಪಿ ರೋಹನ್ ಜಗದೀಶ್, ಶವ ಇಂಚಿಂಚು ಪರಿಶೀಲನೆ ಮಾಡಿದ್ದು, ಇದು ಪಕ್ಕಾ ಕೊಲೆ ಅನ್ನೋದು ಖಚಿಪಡಿಸಿದ್ದಾರೆ. ಮೂರು ದಿನಗಳ ಕಾಲ ನೀರಲ್ಲಿ ದೇಹ ಇರೋದ್ರಿಂದ ಮೀನುಗಳು ತಿಂದು ಹಾಕಿವೆ. ಆದರೆ ಹಂತಕರು ಕೊಂದಿರುವ ಕುರುಹುಗಳು ದೇಹದಲ್ಲಿ ಪಕ್ಕಾ ಕಂಡು ಬಂದಿವೆ. ತಲೆ ಹಾಗೂ ಗದ್ದದ ಹತ್ತಿರ ಗಾಯವಾಗಿದ್ದು ಕಂಡುಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬೆತ್ತಲೆ ಸ್ಥಿತಿಯಲ್ಲಿರುವ ಶವ ಕೈ, ಕಾಲು ಕಟ್ಟಿ ಎಸದಿರುವ ರೀತಿ ನೋಡಿದರೆ ಇದೊಂದು ಪಕ್ಕಾ ಅನೈತಿಕ ಸಂಬಂಧಕ್ಕೆ ಕೊಲೆಯಾಗಿರಬಹದು ಅನ್ನೋ ಶಂಕೆ ವ್ಯಕ್ತವಾಗಿದೆ. ಆದರೆ ಹಂತಕರು ಯಾವುದೇ ಕುರುಹು ಬಿಟ್ಟಿಲ್ಲ. ಹೀಗಾಗಿ ಪೊಲೀಸರು ಹಂತಕರು ಹೇಗೆ ಬಂದರು, ಎಲ್ಲಿಂದ ಬಂದ್ರು ಅನ್ನೋ ಹೆಜ್ಜೆ ಗುರುತು ಪತ್ತೆ ಹಚ್ಚಲು ಜಮೀನುಗಳಲ್ಲಿ ಇಂಚಿಂಚು ಶೋಧ ನಡೆಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲೊಂದು ಟ್ರಯಾಂಗಲ್ ಲವ್ ಸ್ಟೋರಿ: ಬರ್ತ್ಡೇ ಪಾರ್ಟಿಯಲ್ಲಿ ಆಗಿದ್ದೇನು?
ಇತ್ತ ಘಟನೆ ನಡೆದ ಸುತ್ತಮುತ್ತಲಿನ ರೈತರು ಭಯಭೀತರಾಗಿದ್ದಾರೆ. ಈ ಭಾಗದ ರೈತರು ಇದೇ ಹೊಂಡದ ನೀರು ಕುಡಿಯಲು ಬಳಸುತ್ತಿದ್ದರು. ಆದರೆ ಈ ಕೊಲೆ ನೋಡಿ ರೈತಾಪಿ ವರ್ಗ ಭಯಪಡುವಂತಾಗಿದೆ. ಹರ್ಲಾಪೂರ, ಕಣಗಿನಾಳ ಎರಡು ಗ್ರಾಮಗಳ ಮಧ್ಯೆ ಆಗಿರೋದ್ರಿಂದ ಮತ್ತಷ್ಟ ಆತಂಕ ಹೆಚ್ಚಾಗಿದೆ. ಕೊಲೆಯಾದ ವ್ಯಕ್ತಿ ಎರಡು ಗ್ರಾಮದವನಲ್ಲ ಎನ್ನಲಾಗುತ್ತಿದೆ.
ಕೊಲೆಯಾದ ವ್ಯಕ್ತಿ ಯಾರು?
ಈ ಭಾಗದಲ್ಲಿ ಇಂಥ ಘಟನೆ ನಡೆದಿಲ್ಲ. ಇದು ಎರಡು ಗ್ರಾಮಗಳಲ್ಲಿ ಭಯ ಹುಟ್ಟಿಸಿದೆ. ಹಂತಕರನ್ನು ಪೊಲೀಸರು ಪತ್ತೆ ಹಚ್ಚಬೇಕು ಅಂತ ಒತ್ತಾಯಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಹಂತಕರ ಹೆಜ್ಜೆ ಗುರುತಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಮೂರು ತಂಡಗಳಲ್ಲಿ ಹಂತಕರ ಶೋಧ ನಡೆದಿದೆ. ಜೊತೆಗೆ ಕೊಲೆಯಾದ ವ್ಯಕ್ತಿ ಯಾರೂ ಅನ್ನೋದು ಪೊಲೀಸರಿಗೆ ತಲೆನೋವಾಗಿದೆ. ಸುತ್ತಮುತ್ತಲಿ ಗ್ರಾಮದಲ್ಲಿ ಯಾರು ನಾಪತ್ತೆಯಾಗಿಲ್ಲ. ಅಕ್ಕಪಕ್ಕದ ಜಿಲ್ಲೆಯಲ್ಲೂ ನಾಪತ್ತೆ ಕೇಸ್ ಬಗ್ಗೆ ಮಾಹಿತಿ ಕಲೆ ಹಾಕ್ತಾಯಿದ್ದಾರೆ. ಆದರೆ ಈ ನಿಗೂಢ ಕೊಲೆ ಪ್ರಕರಣ ಬೇಧಿಸಲು ಪೊಲೀಸ್ ಇಲಾಖೆಗೆ ಸವಾಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Wed, 12 November 25



