ಗದಗ: ಮನೆ ಮುಂದೆ ಹಾರ್ನ್ ಹೊಡೆದಿದ್ದಕ್ಕೆ ನಡೆಯಿತು ರಕ್ತಪಾತ! ಗಂಭೀರ ಸ್ಥಿತಿಯಲ್ಲಿ ತಂದೆ-ಮಗ
ಗದಗ ಜಿಲ್ಲೆಯ ಅಡವಿ ಸೋಮಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಲಾಗಿದ್ದು, ಗದಗ ಜಿಮ್ಸ್‌ಗೆ ದಾಖಲಿಸಲಾಗಿದೆ. ಕುಟುಂಬಗಳ ನಡುವೆ ಹಿಂದಿನ ವೈಷಮ್ಯವಿದ್ದು, ಅದೇ ದ್ವೇಷಕ್ಕೆ ಎರಡು ಕುಟುಂಬಗಳ ನಡುವೆ ಕಲಹ ನಡೆದಿದೆ ಎಂದು ಹೇಳಲಾಗಿದೆ. ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ, ಜನವರಿ 20: ಮನೆ ಮುಂದೆ ಹಾರ್ನ್ ಹೊಡೆದ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಭೀಕರ ಜಗಳ ಉಂಟಾಗಿ ತಂದೆ–ಮಗನನಿಗೆ ಚಾಕುವಿನಿಂದ ಇರಿದ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ತಂದೆ-ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ಇತ್ತು ವೈಷಮ್ಯ
ಕಂಬಳಿ ಕುಟುಂಬ ಮತ್ತು ಚಕ್ರಣ್ಣವರ ಕುಟುಂಬದ ನಡುವೆ ನಡೆದ ಗಲಾಟೆಯಲ್ಲಿ 17 ವರ್ಷದ ಶರಣಬಸಪ್ಪ ಕಂಬಳಿ ಹಾಗೂ ಅವರ ತಂದೆ 45 ವರ್ಷದ ಹೂವಪ್ಪ ಕಂಬಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಗಳ ಬಿಡಿಸಲು ಹೋದ ಸಹೋದರ ಮಲ್ಲಪ್ಪ ಕಂಬಳಿ ಮೇಲೂ ಹಲ್ಲೆ ನಡೆಸಲಾಗಿದೆ. ಚಕ್ರಣ್ಣವರ ಕುಟುಂಬದ ಈರಪ್ಪ, ಚಿನ್ನಪ್ಪ, ದೊಡ್ಡ ಯಲ್ಲಪ್ಪ ಹಾಗೂ ರಮೇಶ್ ಎಂಬವರು ಚಾಕು ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರತಿಯಾಗಿ ಇನ್ನೊಂದು ಗುಂಪಿನ ಈರವ್ವ ಹಾಗೂ ದೊಡ್ಡ ಯಲ್ಲಪ್ಪನಿಗೂ ಗಾಯಗಳಾಗಿವೆ. ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದು, ಈ ಹಿಂದೆ ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ನಡೆಸಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ನಡೆದ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು
ಮೈಸೂರಿನಲ್ಲಿ ಯುವಕನ ಕೊಲೆ
ಮೈಸೂರಿನ ಉದಯಗಿರಿ ಬೀಡಿ ಕಾಲೋನಿ ಬಳಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಗೌಸಿಯಾ ನಗರದ ನಿವಾಸಿ ಶಹಬಾಜ್ (26) ಎಂಬ ಯುವಕನನ್ನು ಜುಬೇರ್ ಎಂಬಾತನು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಉಂಟಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:53 am, Tue, 20 January 26