Gadag: ಧೂಳು ತಿನ್ನುತ್ತಿವೆ ಸರ್ಕಾರದ ಲಕ್ಷಾಂತರ ಮೌಲ್ಯದ ಹೈಟೆಕ್ ಕಂಪ್ಯೂಟರ್ ಲ್ಯಾಬ್; ವಿದ್ಯಾರ್ಥಿಗಳಿಗಿಲ್ಲ ಕಂಪ್ಯೂಟರ್ ಭಾಗ್ಯ
ಜಿಲ್ಲೆಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ತಾಂತ್ರಿಕ ಬಾಲಕರ ವಸತಿ ನಿಲಯದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸರ್ಕಾರ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿದ್ದು, ಇದೀಗ ಧೂಳು ತಿನ್ನುತ್ತಿವೆ. ಲಕ್ಷಾಂತರ ಮೌಲ್ಯದ ಕಂಪ್ಯೂಟರ್ಸ್ಗಳು.
ಗದಗ: ಜಿಲ್ಲೆಯ ಕಳಸಾಪೂರ ರಸ್ತೆಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ತಾಂತ್ರಿಕ ಬಾಲಕರ ವಸತಿ ನಿಲಯದಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸರ್ಕಾರ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿದೆ. ಈ ಲ್ಯಾಬ್ ನಿರ್ಮಾಣ ಮಾಡಿ ಸುಮಾರು ವರ್ಷಗಳು ಕಳೆದಿವೆ. ಆದರೆ ಇವತ್ತಿನವರೆಗೂ ಈ ಹೈಟೆಕ್ ಕಂಪ್ಯೂಟರ್ ಲ್ಯಾಬ್ಗೆ ನಮ್ಮ ದರ್ಶನವಾಗಿಲ್ಲ. ಸುಮಾರು 20 ವಿದ್ಯಾರ್ಥಿಗಳು ಏಕಕಾಲಕ್ಕೆ ಕುಳಿತು ಕಂಪ್ಯೂಟರ್ ಕಲಿಯುವ ವ್ಯವಸ್ಥೆ ಇದ್ದು, ಆದರೆ ಈ ದಲಿತ ವಿದ್ಯಾರ್ಥಿಗಳಿಗೆ ಮಾತ್ರ ಕಂಪ್ಯೂಟರ್ ಕಲಿಯುವ ಭಾಗ್ಯವಿಲ್ಲದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರ ಲಕ್ಷಾಂತರ ಮೌಲ್ಯದ ಯೋಜನೆ ಇಲ್ಲಿ ಧೂಳು ತಿನ್ನುತ್ತಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ದಲಿತ ವಿದ್ಯಾರ್ಥಿಗಳು ಕೂಡ ಎಲ್ಲ ಮಕ್ಕಳಂತೆ ಗುಣಮಟ್ಟ ಶಿಕ್ಷಣ ಕಲಿಯಲಿ ಎಂದು ಕೋಟಿ ಕೋಟಿ ಅನುದಾನ ನೀಡುತ್ತದೆ. ಆದರೆ ಆ ಮಕ್ಕಳಿಗೆ ಸರ್ಕಾರದ ಎಷ್ಟು ಯೋಜನೆಗಳು ಮುಟ್ಟುತ್ತವೆಯೋ, ಇಲ್ಲವೋ ದೇವರೇ ಬಲ್ಲ. ಇಂಜಿನೀಯರಿಂಗ್, ಡಿಪ್ಲೋಮಾ, ಡಿ ಫಾರ್ಮಾ, ಬಿಸಿಎ ಸೇರಿ ತಾಂತ್ರಿಕ ಕೋರ್ಸ್ ಕಲಿಯುವ 300ಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇದ್ದಾರೆ. ಈ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ. ಹೀಗಾಗಿ ನಾಲ್ಕು ವರ್ಷಗಳ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಬಳಿಕ ಬೀಗ ಜಡಿದು ಅಧಿಕಾರಿಗಳು ಸುಮ್ನನಾಗಿದ್ದಾರೆ.
ವಿದ್ಯಾರ್ಥಿಗಳು ಹಲವಾರು ಬಾರಿ ಕಂಪ್ಯೂಟರ್ ಲ್ಯಾಬ್ ಬಳಕಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ಕಂಪ್ಯೂಟರ್ ಸೆಂಟರ್ ನಲ್ಲಿ ಹಣ ಕೊಟ್ಟು ಕಲಿಯುವ ದುಸ್ಥಿತಿ ಅಧಿಕಾರಿಗಳು ನಿರ್ಮಾಣ ಮಾಡಿದ್ದಾರೆ. ಕಂಪ್ಯೂಟರ್ ಮಾತ್ರವಲ್ಲ. ಎಸಿಗಳು ಜಾಡು ಹಿಡಿದಿವೆ. ವಿಪರ್ಯಾಸ ಅಂದರೆ ಯಾವ ಯೋಜನೆಯಲ್ಲಿ ಈ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿದ್ದಾರೆ ಎನ್ನುವುದೇ ಅಧಿಕಾರಿಗಳಿಗೆ ಗೊತ್ತಿಲ್ಲ.
ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳಿಗೆ ಎದುರಾಗಿದೆ. ಸರ್ಕಾರ ಲಕ್ಷ ಲಕ್ಷ ಹಣ ಖರ್ಚು ಮಾಡಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಮಾಡಿದ್ದರೂ ಎಸ್ಸಿ, ಎಸ್ಟಿ ಮಕ್ಕಳಿಗೆ ಸರ್ಕಾರ ಯೋಜನೆ ಲಾಭ ಆಗುತ್ತಿಲ್ಲ. ಲಕ್ಷ ಲಕ್ಷ ಮೌಲ್ಯದ ಕಂಪ್ಯೂಟರ್ಸ್, ಎಸಿ ಧೂಳು ತಿನ್ನುತ್ತಿವೆ. ಇನ್ನಾದರೂ ಜಿಲ್ಲಾ ಪಂಚಾಯತ್ ಸಿಇಓ ಎಚ್ಚೆತ್ತುಕೊಂಡು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಯುವ ಭಾಗ್ಯ ಕಲ್ಪಿಸಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ