
ಗದಗ, ಆಗಸ್ಟ್ 31: ಧರ್ಮದ ಹೆಸರಿನಲ್ಲಿ ದ್ವೇಷ-ಅಸೂಯೆಗಳು ಬಿತ್ತಲ್ಪಡುತ್ತಿರುವ ಇಂದಿನ ದಿನಗಳಲ್ಲಿ, ಗದಗ ನಗರ ಮಾನವೀಯತೆ ಹಾಗೂ ಕೋಮು ಸೌಹಾರ್ದತೆಯ ಅಪರೂಪದ ಸಂಗಮಕ್ಕೆ ಸಾಕ್ಷಿಯಾಗಿದೆ. ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಜಯಂತ್ಯುತ್ಸವದ ಅಂಗವಾಗಿ ಬೆಟಗೇರಿ ಈದ್ಗಾ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ಸರ್ವಧರ್ಮ ಸಾಮೂಹಿಕ ವಿವಾಹ (Mass Marriage) ಮಹೋತ್ಸವದಲ್ಲಿ ಒಟ್ಟು 18 ನವಜೋಡಿಗಳು ಸಾವಿರಾರು ಜನರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಹೆಜ್ಜೆಯಿಟ್ಟವು.
ಗದಗ ನಗರದಲ್ಲಿ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಜಯಂತ್ಯೋತ್ಸವದ ಹಿನ್ನೆಲೆ ಬೆಟಗೇರಿ ಈದ್ಗಾ ಕಮಿಟಿ ವತಿಯಿಂದ ಅದ್ಧೂರಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿತ್ತು. ಹಿಂದೂ ಮದುವೆ, ಅರ್ಚಕರು, ಮುಸ್ಲಿಂ ನಿಕಾಹ್, ಧರ್ಮಗುರುಗಳು ಒಂದೇ ವೇದಿಕೆಯಲ್ಲಿ ಅದ್ಧೂರಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಎರಡು ಧರ್ಮಗಳ ಸಂಪ್ರದಾಯದಂತೆ ಮದುವೆ ನಡೆದಿರುವುದು ವಿಶೇಷ.

ಹಿಂದೂ ನವಜೋಡಿಗಳಿಗೆ ಹಿಂದೂ ಸಂಪ್ರದಾಯದಂತೆ ಅರ್ಚಕರಿಂದ ವಿವಾಹ ನೆರವೇರಿದರೆ, ಮುಸ್ಲಿಂ ನವಜೋಡಿಗಳಿಗೆ ಮುಸ್ಲಿಂ ಧರ್ಮಗುರುಗಳು ಸಂಪ್ರದಾಯ ಬದ್ಧವಾಗಿ ವಿವಾಹ ನೆರವೇರಿಸಿದರು. ಇಲ್ಲಿ ಯಾರ ಧರ್ಮಕ್ಕೂ ಧಕ್ಕೆ ಇಲ್ಲ. ಯಾರ ಸಂಪ್ರದಾಯಕ್ಕೂ ಅಡ್ಡಿಯಿಲ್ಲ. ತಮ್ಮ ತಮ್ಮ ಧರ್ಮವನ್ನು ಗೌರವಿಸುತ್ತಲೇ, ಮತ್ತೊಂದು ಧರ್ಮದವರೊಂದಿಗೆ ಸೌಹಾರ್ದದಿಂದ ಬದುಕಬಹುದು ಎಂಬ ಸಂದೇಶವನ್ನು ಸಾರಲಾಯಿತು.
ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಶಕ್ತಿಗಳಿಗೆ ಈ ಸಮಾರಂಭವು ಪ್ರೀತಿ ಮತ್ತು ಸಹಬಾಳ್ವೆಯ ಉತ್ತರ ನೀಡಿತು. ಸಾವಿರಾರು ಜನರ ಹರ್ಷೋದ್ಗಾರ, ಚಪ್ಪಾಳೆಯ ನಡುವೆ ಹಸೀಮಣೆ ಏರಿದ ವಧು-ವರರ ಮುಖದಲ್ಲಿ ನೂರಾರು ಕನಸುಗಳ ಮಂದಹಾಸ ತುಂಬಿತ್ತು. ಇದು ಕೇವಲ ಎರಡು ಮನಸ್ಸುಗಳ ಮಿಲನ ಮಾತ್ರವಾಗಿರದೆ, ಸಮಾಜದಲ್ಲಿ ಸೌಹಾರ್ದದ ಬಾಂಧವ್ಯವನ್ನು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಆರಾಧಿಸುವ ದೇವರು ಹಾಗೂ ಆಚರಿಸುವ ಪದ್ಧತಿಗಳು ಭಿನ್ನವಾಗಿರಬಹುದು, ಆದರೆ ಹೃದಯದ ಮಿಡಿತ ಮತ್ತು ಮನುಷ್ಯತ್ವ ಒಂದೇ ಎಂಬುದನ್ನು ಗದಗ ನಗರ ಇಡೀ ದೇಶಕ್ಕೆ ಸಾರಿ ಹೇಳಿದೆ. ಯಾವುದೇ ಬೇಧ-ಭಾವವಿಲ್ಲದೆ ಒಗ್ಗಟ್ಟಿನಿಂದ ಬದುಕುವ ಈ ಸೌಹಾರ್ದತೆಯ ಸಂದೇಶ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.