
ಗದಗ, ಸೆಪ್ಟೆಂಬರ್ 30: ಸರ್ಕಾರದ ಅನುದಾನ ಬಿಡುಗಡೆಯಾಗದಿದ್ದಕ್ಕೆ ನೊಂದು, ಕಳೆದ 18 ದಿನಗಳಿಂದ ಗೂಢವಾಗಿ ನಾಪತ್ತೆಯಾಗಿರುವ ಗದಗ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಧಾರವಾಡ ಅವರ ಸುಳಿವು ಕೊನೆಗೂ ಸಿಕ್ಕಿದ್ದು, ಅವರು ಮಧ್ಯಪ್ರದೇಶದ ಭೂಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಪ್ರಕರಣದ ಆರಂಭಿಕ ತನಿಖೆಯಲ್ಲಿ ಎಇಇ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಆದರೆ, ತಮ್ಮ ಜಾಡು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಅವರು ವಿಜಯವಾಡದಿಂದಲೇ ತಮ್ಮ ಮೊಬೈಲ್ ಫೋನ್ ಸಂಪೂರ್ಣ ಆಫ್ ಮಾಡಿಕೊಂಡಿದ್ದರು. ಕಳೆದ 18 ದಿನಗಳಿಂದ ಮೊಬೈಲ್ ಆನ್ ಮಾಡದೇ ಇದ್ದರೂ, ಪಟ್ಟುಬಿಡದ ಗದಗ ಪೊಲೀಸರು ಸುಮಾರು 1,200 ಕಿಲೋಮೀಟರ್ ವ್ಯಾಪ್ತಿಯ ನಿರಂತರ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅವರ ಪ್ರಯಾಣದ ಹಾದಿಯನ್ನು ಭೇದಿಸಿದ್ದಾರೆ.
ಇದನ್ನೂ ಓದಿ ಗದಗದಲ್ಲಿ ಕೆಆರ್ಡಿಎಲ್ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ರಿಯಾಕ್ಷನ್ ಹೀಗಿತ್ತು
ವಿಜಯವಾಡದಿಂದ ಪ್ರಯಾಣ ಬೆಳೆಸಿದ ಪರ್ವೀಜ್ ಧಾರವಾಡ ಭೂಪಾಲ್ ತಲುಪಿದ್ದು, ಅಲ್ಲಿನ ರೈಲ್ವೇ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡ್ಡಾಡುತ್ತಿರುವ ದೃಶ್ಯಗಳು ಟಿವಿ9ಗೆ ಲಭ್ಯವಾಗಿವೆ. ಮೊಬೈಲ್ ಸಂಪರ್ಕ ಸಂಪೂರ್ಣ ಬಂದ್ ಆಗಿರುವುದರಿಂದ ಪತ್ತೆ ಕಾರ್ಯ ಅತ್ಯಂತ ಸವಾಲಿನಿಂದ ಕೂಡಿದೆ. ಆದರೂ ಗದಗ ಪೊಲೀಸ್ ತಂಡವು ಭೂಪಾಲ್‌ನಲ್ಲಿ ನೆಲೆಸಿರುವ ಎಇಇ ಪರ್ವೀಜ್ ಅವರ ಪ್ರತಿ ಹೆಜ್ಜೆಯ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದು, ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯುವ ನಿರೀಕ್ಷೆಯಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ