ಕೆಆರ್‌ಐಡಿಎಲ್ ಎಇಇ ನಾಪತ್ತೆ ಕೇಸ್, ಪರ್ವೇಜ್ ಬಗ್ಗೆ ಮಹತ್ವದ ಸುಳಿವು: ಗದಗ ಎಸ್ಪಿ ಮಿಥುನ್ ಮಾಹಿತಿ
ಕೆಆರ್‌ಐಡಿಎಲ್ ಎಇಇ ಪರ್ವೇಜ್ ನಾಪತ್ತೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಪರ್ವೇಜ್ ಅವರ ಮೊಬೈಲ್‌ನ ಕೊನೆಯ ಲೊಕೇಶನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿದ್ದು, ಐದು ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ಶೋಧ ನಡೆಸುತ್ತಿವೆ ಎಂದು ಗದಗ ಎಸ್ಪಿ ಮಿಥುನ್ ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು
- ವಿಜಯವಾಡದಲ್ಲಿ ಪರ್ವೇಜ್ ಕೊನೆಯ ಲೊಕೇಶನ್ ಪತ್ತೆ
- ಐದು ವಿಶೇಷ ತಂಡಗಳಿಂದ ಪರ್ವೇಜ್‌ಗಾಗಿ ಶೋಧ
- ಸಿಡಿಆರ್, ಬ್ಯಾಂಕ್ ವಿವರಗಳ ಪರಿಶೀಲನೆ ಮುಂದುವರಿಕೆ
ಗದಗ, ಸೆಪ್ಟೆಂಬರ್ 28: ಕೆಆರ್‌ಐಡಿಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಪರ್ವೇಜ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಪರ್ವೇಜ್ ಅವರ ಮೊಬೈಲ್‌ನ ಕೊನೆಯ ಲೊಕೇಶನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿದ್ದು, ಅವರ ಪತ್ತೆಗಾಗಿ ಐದು ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಗದಗ ಎಸ್ಪಿ ಮಿಥುನ್ ಸೋಮವಾರ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ಸಂಬಂಧ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ನಡೆಸಿದ ಅವರು, 34 ವರ್ಷದ ಪರ್ವೇಜ್ ಸೆಪ್ಟೆಂಬರ್ 13ರಂದು ಕಚೇರಿ ಸಭೆಯ ನಿಮಿತ್ತ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗದಗದಿಂದ ಬೆಂಗಳೂರಿಗೆ ತೆರಳಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ಈ ಸಂಬಂಧ ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 85/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಪರ್ವೇಜ್ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಗದಗ ಡಿವೈಎಸ್‌ಪಿ ಅವರ ಮೇಲ್ವಿಚಾರಣೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯ ಪೊಲೀಸ್ ತಂಡ ಪರ್ವೇಜ್ ಅವರ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸುತ್ತಿದೆ. ಹಾವೇರಿಯಲ್ಲಿರುವ ಅವರ ಪತ್ನಿಯ ತವರು ಮನೆ ಸೇರಿದಂತೆ ಇತರ ಸಂಬಂಧಿಕರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಕೊನೆಯ ಲೊಕೇಶನ್ ಆಂಧ್ರದ ವಿಜಯವಾಡದಲ್ಲಿ ಪತ್ತೆ
ಪರ್ವೇಜ್ ಅವರ ಮೊಬೈಲ್‌ನ ಕೊನೆಯ ಲೊಕೇಶನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿದೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ಎರಡು ವಿಶೇಷ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ. ಇನ್ನು ಬೆಂಗಳೂರಿನಲ್ಲಿರುವ ಕೆಆರ್‌ಐಡಿಎಲ್ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ರೈಲ್ವೆ ನಿಲ್ದಾಣಗಳಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ತಾಂತ್ರಿಕ ತಂಡ ಗದಗದಲ್ಲೇ ಇದ್ದು, ಪರ್ವೇಜ್ ಅವರ ಕಾಲ್ ಡೀಟೇಲ್ ರೆಕಾರ್ಡ್ಸ್ (CDR) ಹಾಗೂ ಮೊಬೈಲ್ ಲೊಕೇಶನ್ ದತ್ತಾಂಶವನ್ನು ವಿಶ್ಲೇಷಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗದಗದಲ್ಲಿ ಕೆಆರ್ಡಿಎಲ್ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ರಿಯಾಕ್ಷನ್ ಹೀಗಿತ್ತು
ಪರ್ವೇಜ್ ನಾಪತ್ತೆ ಪ್ರಕರಣದಲ್ಲಿ ಪೊಲೀಸರ ತನಿಖೆ ಮುಂದುವರಿದಿದ್ದು, ವಿಜಯವಾಡದಲ್ಲಿ ಪತ್ತೆಯಾಗಿರುವ ಕೊನೆಯ ಮೊಬೈಲ್ ಲೊಕೇಶನ್ ಆಧರಿಸಿ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.
ಗದಗ ಜಿಲ್ಲಾ ಅಲ್ಪಸಂಖ್ಯಾತರ ಒಕ್ಕೂಟದಿಂದ ಪ್ರತಿಭಟನೆ
ನಾಪತ್ತೆ ಪ್ರಕರಣದಲ್ಲಿ, ಪರ್ವೇಜ್ ಡೆತ್ನೋಟ್ ಬರೆದಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಆದರೂ ಸರ್ಕಾರ, ಗೃಹಮಂತ್ರಿ ಹುಡುಕಿಸುವ ಕೆಲಸ ಮಾಡಿಲ್ಲವೆಂದು ಗದಗ ಜಿಲ್ಲಾ ಅಲ್ಪಸಂಖ್ಯಾತರ ಒಕ್ಕೂಟ ಕಿಡಿ ಕಾರಿದೆ. ಈ ಸಂಬಂಧ ಗದಗ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಡಿಸಿ ಮೂಲಕ ಸಿಎಂ ಹಾಗೂ ಗೃಹಮಂತ್ರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




