ಕೆಆರ್‌ಐಡಿಎಲ್ ಎಇಇ ನಾಪತ್ತೆ: 14 ದಿನವಾದರೂ ಸುಳಿವಿಲ್ಲ; ಪೊಲೀಸರ ವಿಶೇಷ ತಂಡ ರಚನೆ
ಗದಗದಲ್ಲಿ ಕೆಆರ್‌ಡಿಐಎಲ್ ಎಇಇ ಪರ್ವೇಜ್ ಧಾರವಾಡ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿ ಇಂದಿಗೆ 14 ದಿನಗಳು ಕಳೆದಿದ್ದು, ಯಾವುದೇ ಸುಳಿವು ಸಿಗದ ಕಾರಣ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿದೆ. ಗದಗ ಪೊಲೀಸರು ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ, ನಗರದಲ್ಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೂಡ ತೀವ್ರ ಶೋಧ ನಡೆಸಿದ್ದಾರೆ.

ಗದಗ, ಸೆಪ್ಟೆಂಬರ್ 27: ಅನುದಾನ ಬಾರದ ಹಿನ್ನೆಲೆ ಡೆತ್‌ನೋಟ್ ಬರೆದಿಟ್ಟು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪರ್ವೇಜ್ ಧಾರವಾಡ (34 ವರ್ಷ) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಧಿಕಾರಿಯ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಕಚೇರಿ ಸಭೆಗೆಂದು ತೆರಳಿದ್ದ ಅಧಿಕಾರಿ ನಿಗೂಢ ನಾಪತ್ತೆ: ಸಿಗದ ಸುಳಿವು
ಪ್ರಕರಣ ಕುರಿತಾಗಿ ಗದಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ‘ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಇಇ ನಾಪತ್ತೆ ಕುರಿತು ಪ್ರಕರಣ ದಾಖಲಾಗಿದೆ. ಇವರು ಸೆಪ್ಟೆಂಬರ್ 13ರಂದು ಕಚೇರಿ ಸಭೆಯ ನಿಮಿತ್ತ ಹಂಪಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಗದಗದಿಂದ ಬೆಂಗಳೂರಿಗೆ ತೆರಳಿದ್ದರು. ಆದರೆ, ಆ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದರು. ಇನ್ನು 14 ದಿನಗಳು ಕಳೆದರೂ ಅವರ ಯಾವುದೇ ಸುಳಿವು ಸಿಗದ ಕಾರಣ ಕುಟುಂಬ ಸದಸ್ಯರಲ್ಲಿ ಆತಂಕ ಮನೆಮಾಡಿದೆ.
ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡಗಳ ರಚನೆ
ನಾಪತ್ತೆಯಾಗಿರುವ ಅಧಿಕಾರಿಯ ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಅವರ ಸೂಚನೆಯಂತೆ ಗದಗ ಡಿವೈಎಸ್ಪಿ ಮುರ್ತುಜ್ ಖಾದ್ರಿ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ತಂಡಗಳಿಗೆ ಪ್ರತ್ಯೇಕ ಜವಾಬ್ದಾರಿ ವಹಿಸಲಾಗಿದೆ.
ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ತೀವ್ರ ಹುಡುಕಾಟ
ಆಂಧ್ರಪ್ರದೇಶ ತಂಡ: ಅಧಿಕಾರಿಯ ಮೊಬೈಲ್ ಕೊನೆಯದಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಲೊಕೇಶನ್ ತೋರಿಸಿದ್ದು, ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಎರಡು ತಂಡಗಳು ವಿಜಯವಾಡ ಮತ್ತು ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದು, ರೈಲು ಮಾರ್ಗ ಹಾಗೂ ಯುಡಿಆರ್ ಪರಿಶೀಲನೆ ನಡೆಸುತ್ತಿವೆ.
ಬೆಂಗಳೂರು ತಂಡ: ಬೆಂಗಳೂರಿನ ಕೆಆರ್‌ಐಡಿಎಲ್ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಗದಗದಲ್ಲಿ ಕೆಆರ್ಡಿಎಲ್ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ರಿಯಾಕ್ಷನ್ ಹೀಗಿತ್ತು
ಸ್ಥಳೀಯ ತಂಡ: ಎಇಇ ಪರ್ವೇಜ್ ಅವರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆಯ ವಿವರಗಳ ಸಂಗ್ರಹದ ಜೊತೆಗೆ ಹಾವೇರಿಯಲ್ಲಿರುವ ಅವರ ಪತ್ನಿಯ ತವರು ಮನೆ ಹಾಗೂ ಇತರ ಸಂಬಂಧಿಕರ ವಿಚಾರಣೆ ನಡೆಸಲಾಗುತ್ತಿದೆ.
ತಾಂತ್ರಿಕ ತಂಡ: ಕಾಲ್ ಡೀಟೇಲ್ ರೆಕಾರ್ಡ್ಸ್ ಮತ್ತು ಮೊಬೈಲ್ ನೆಟ್‌ವರ್ಕ್ ಲೊಕೇಶನ್ ದತ್ತಾಂಶಗಳನ್ನು ವಿಶ್ಲೇಷಿಸಿ ಅಧಿಕಾರಿಯ ಸಂಚಾರದ ಮೇಲೆ ನಿರಂತರ ನಿಗಾ ಇರಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Sun, 27 September 26




