ಎಥೆನಾಲ್ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಕೇಂದ್ರದ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ
ಮುಖ್ಯಾಂಶಗಳು
- ಕರ್ನಾಟಕದಲ್ಲಿ ಉತ್ಪಾದನೆ ಆಗುತ್ತಿರುವ ಪೈಕಿ ಶೇ.40ರಷ್ಟು ಖರೀದಿಸುತ್ತಿಲ್ಲ
- ಕಳೆದ 9 ವರ್ಷಗಳಿಂದ ಎಂಎಸ್‌ಪಿ ದರ ಹೆಚ್ಚಳ ಮಾಡಿಲ್ಲ
- ಕೇಂದ್ರ ಸರ್ಕಾರದವರೇ ಇದೆಲ್ಲಾ ಮಾಡಿ ಗಬ್ಬು ಎಬ್ಬಿಸಿದ್ದಾರೆ
ಕೇಂದ್ರ ಸರ್ಕಾರದ ಎಥೆನಾಲ್ ನೀತಿಯು ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಂಕಷ್ಟ ತಂದಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದ್ದ ಕೇಂದ್ರವು, ಈಗ ಖರೀದಿಗೆ ಹಿಂದೇಟು ಹಾಕುತ್ತಿದೆ. ಎಂಎಸ್‌ಪಿ ಹೆಚ್ಚಿಸದೆ ಇರುವುದು ಮತ್ತು ಎಫ್‌ಆರ್‌ಪಿ ಗೊಂದಲಗಳೂ ಸಮಸ್ಯೆಗಳಾಗಿವೆ. ಈ ಕುರಿತು ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಬೆಂಗಳೂರು, ನವೆಂಬರ್ 08: ‘ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಭಾರಿ ಉತ್ತೇಜನ ನೀಡಿತ್ತು. ಇದನ್ನ ನಂಬಿ ಹಲವು ಸಕ್ಕರೆ ಕಾರ್ಖಾನೆಗಳು ಎಥೆನಾಲ್ ತಯಾರಿಕೆಯನ್ನು ಪ್ರಾರಂಭಿಸಿದವು. ಆದರೆ ಇದೀಗ ಕೇಂದ್ರ ಸರ್ಕಾರ ಉತ್ಪಾದಿಸಿದ ಎಥೆನಾಲ್ ಅನ್ನು ಖರೀದಿಸುತ್ತಿಲ್ಲ. ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಥೆನಾಲ್‌ನ ಶೇ 40ರಷ್ಟು ಕೂಡ ಖರೀದಿ ಆಗುತ್ತಿಲ್ಲ, ಕೇವಲ ಶೇ 20ರಿಂದ 30ರಷ್ಟು ಮಾತ್ರ ಖರೀದಿ ಮಾಡಲಾಗುತ್ತಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಲ್ಲರಿಗೂ ಎಥೆನಾಲ್ ಉತ್ಪಾದಿಸಿ ಅಂದರು, ಆದರೆ ಈಗ ಖರೀದಿಸುತ್ತಿಲ್ಲ. ಕೇಂದ್ರ ಸರ್ಕಾರದವರು ಮಾಡಿದ ತಪ್ಪನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದಾರೆ, ಎಲ್ಲದರ ಬಗ್ಗೆ ತನಿಖೆ ಆಗಲಿ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಇದರ ಬಗ್ಗೆ ತೀರ್ಮಾನ ಮಾಡುತ್ತದೆ. ಮುಂದೆ ಏನು ಮಾಡಬೇಕೆಂದು ಸಿಎಂ ಹಾಗೂ ಆಹಾರ ಸಚಿವರು ನಿರ್ಧರಿಸುತ್ತಾರೆ’ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

