ಗದಗ: ಅಧಿಕಾರಿಗಳ ಕುಮ್ಮಕ್ಕಿನಿಂದ ತುಂಗಭದ್ರಾ ನದಿಯಲ್ಲಿ ಮರಳು ದಂಧೆ, ಎಸ್ಪಿ ಖಡಕ್​ ಎಚ್ಚರಿಕೆ

|

Updated on: Mar 24, 2023 | 9:33 AM

ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಒಡಲು ಬಗೆದು, ಮರಳು ಲೂಟಿ ಮಾಡಲಾಗುತ್ತಿದೆ. ತಾಲೂಕಾಡಳಿತದ ಪ್ರಮುಖ ಅಧಿಕಾರಿಗಳ ಕುಮ್ಮಕ್ಕಿನಿಂದ ಮರಳು ದಂಧೆ ಗದಗ ಜಿಲ್ಲೆಯಲ್ಲಿ ಜೋರಾಗಿದೆ. ಈಗ ಎಸ್ಪಿ ಗಮನಕ್ಕೆ ಬಂದಿದ್ದು, ಅಕ್ರಮದಲ್ಲಿ ಭಾಗಿಯಾದವರು ಕಠಿಣ ಕಾನೂನು ಶಿಕ್ಷೆ ಎದುರಿಸಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗದಗ: ಅಧಿಕಾರಿಗಳ ಕುಮ್ಮಕ್ಕಿನಿಂದ ತುಂಗಭದ್ರಾ ನದಿಯಲ್ಲಿ ಮರಳು ದಂಧೆ, ಎಸ್ಪಿ ಖಡಕ್​ ಎಚ್ಚರಿಕೆ
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ; ಎಸ್ಪಿ ಖಡಕ್​ ಎಚ್ಚರಿಕೆ
Follow us on

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ(sand Mafia) ಇಡೀ ಜಿಲ್ಲಾಡಳಿತ ಚುನಾವಣೆ ಕೆಲಸದಲ್ಲಿ ಫುಲ್ ಬ್ಯೂಸಿಯಾಗಿದೆ. ಹೀಗಾಗಿ ಡಿಸಿ, ಎಸ್ಪಿ ಚುನಾವಣೆ ಟೆನ್ಷನ್ ನಲ್ಲಿದ್ದಾರೆ. ಹೀಗಾಗಿ ನಾವು ಆಡಿದ್ದೇ ಆಟ, ಮಾಡಿದ್ದೇ ಕಮಾಯಿ ಎಂದುಕೊಂಡು ಕೆಲ ಅಧಿಕಾರಿಗಳು ಈ ಅಕ್ರಮ ಮರಳುಗಾರಿಕೆಗೆ ಸಾಥ್ ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ತುಂಗಭದ್ರಾ ನದಿಯಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೇ ಮರಳು ಗಣಿಗಾರಿಕೆ ಬಲು ಜೋರಾಗಿದೆ. ಹಗಲು ಹೊತ್ತಿನಲ್ಲಿ ಮಾಡಿದರೆ ಎಲ್ಲರಿಗೂ ಗೋತ್ತಾಗುತ್ತೆ ಅನ್ನೋ ಕಾರಣಕ್ಕೆ ಇಡೀ ದಿನ ನದಿಯಲ್ಲಿನ ಮರಳು ತೆಗೆದು ಗುಡ್ಡೆ ಹಾಕುತ್ತಾರೆ. ಬಳಿಕ ರಾತ್ರೋ ರಾತ್ರಿ ಸಾಗಾಟ ಮಾಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ.

ಇನ್ನು ಈ ಮರಳುಗಾರಿಕೆಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿಲ್ಲ. ಆದರೂ ಕೂಡ ಮರಳು ದಂಧೆಕೋರರು ಅಧಿಕಾರಿಗಳ ಜೊತೆಗೆ ಶಾಮೀಲಾಗಿದ್ದು, ಮರಳು ಸಾಕಾಣಿಕೆ ಮಾಡಲು ಸಾಥ್ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೇನು ಚುನಾವಣೆ ಸಮೀಪ ಬರುತ್ತಾಯಿದ್ದು, ಹಿರಿಯ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದನ್ನೇ ವರದಾನ ಮಾಡಿಕೊಂಡು ದಂಧೆಕೋರರು ರಾಜಾರೋಷವಾಗಿ‌ ಮರಳು ಲೂಟಿ ಮಾಡುತ್ತಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಗದಗ ಜಿಲ್ಲೆಯಾದ್ಯಂತ ಪೊಲೀಸರ ಭರ್ಜರಿ ಕಾರ್ಯಾಚರಣೆ; ಕಂತೆ ಕಂತೆ ಹಣ, ತಂಬಾಕು ಜಪ್ತಿ

ಇನ್ನು ಯಾವುದೇ ಪರವಾನಿಗೆ ಇಲ್ಲದೆ ಮುಂಡರಗಿ ತಾಲೂಕಿನಿಂದ ಗದಗ, ಹುಬ್ಬಳ್ಳಿ ಹಾಗೂ ಬೇರೆ ಬೇರೆ ಸ್ಥಳಗಳಿಗೆ ಮರಳು ಹೋಗುತ್ತಿದೆ. ಈ ಅಕ್ರಮ ತಡೆಯಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ನಡೆಯುತ್ತಿರುವುದು ಗೊತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನು ಎಸ್ಪಿ ನೇಮಗೌಡ ಅವರು ಪೊಲೀಸ್ ಭದ್ರತೆ ನೀಡಲಾಗುತ್ತೆ. ಅಕ್ರಮ ತಡೆಯುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ಹೇಳಿದ್ರು ಅಧಿಕಾರಿಗಳು ಮಾತ್ರ ಕಚೇರಿ ಬಿಟ್ಟು ಹೋಗುತ್ತಿಲ್ಲ.

ಹೀಗಾಗಿ ಗಣಿ ಇಲಾಖೆ ಅಧಿಕಾರಿಗಳು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಮೂಡಿದೆ. ಜೆಸಿಬಿ ಮೂಲಕ ಮರಳು ತೆಗೆದು, ನದಿ‌ ಹಾಗೂ ದಡದಲ್ಲಿ ಶೇಖರಣೆ ಮಾಡಿ, ರಾತ್ರೋ ರಾತ್ರಿ ಮರಳು ಸಾಗಾಣಿಕೆ ಮಾಡುತ್ತಾರೆ. ಇನ್ನು ಈ ಕುರಿತು ಗದಗ ಎಸ್ಪಿ ಅವರನ್ನು ಕೇಳಿದರೆ, ಮಾಹಿತಿ ಸಿಕ್ಕ ಕೂಡಲೇ ಎರಡು ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಪೊಲೀಸ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚುನಾವಣೆ ಕೆಲಸದಲ್ಲಿದ್ರು ಅಕ್ರಮ ದಂಧೆ ಮಾಡಲು ಅವಕಾಶ ನೀಡೋದಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಚುನಾವಣೆ ಹೊಸ್ತಿಲಲ್ಲಿ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ ಗದಗ ಜಿಲ್ಲಾಡಳಿತ

ಚುನಾವಣೆ ಸಮೀಪ ಬರ್ತಾಯಿದ್ದು, ಮರಳು ದಂಧೆಕೋರರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಜಿಲ್ಲಾಡಳಿತ ಚುನಾವಣೆ ಕೆಲಸದಲ್ಲಿ ಬ್ಯೂಸಿಯಾಗಿರುತ್ತೆ ಎಂದು ಸ್ಥಳೀಯ ಅಧಿಕಾರಿಗಳನ್ನು ಬಲೆಗೆ ಹಾಕಿಕೊಂಡು ಅಕ್ರಮ ಮರಳು ದಂಧೆ ನಡೆಸಿದ್ದಾರೆ. ಈಗ ಜಿಲ್ಲಾಧಿಕಾರಿಗಳು, ಎಸ್ಪಿ ಅವರು ಅಲರ್ಟ್ ಆಗಿದ್ದು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಕ್ರಮಕ್ಕೆ ಬ್ರೇಕ್ ಹಾಕದಿದ್ರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಏನೇ ಇರಲಿ ಅಕ್ರಮಕ್ಕೆ ಬ್ರೇಕ್ ಹಾಕುವ ಮೂಲಕ ತುಂಗೆಯ ಒಡಲನ್ನು ಉಳಿಸುವ ಕೆಲಸ ಮಾಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ