ಗದಗ, ಜನವರಿ 13: ಉತ್ತರ ಕರ್ನಾಟಕ ಪ್ರಸಿದ್ಧ ಮಠ ವೀರೇಶ್ವರ ಪುಣ್ಯಾಶ್ರಮ (Veereshwara Punyashrama) ಅಂಧ, ಅನಾಥರ ಬಾಳಿನಲ್ಲಿ ನಂದಾದೀಪ. ಸಾವಿರಾರು ಅಂಧರ ಬಾಳಲ್ಲಿ ಸಂಗೀತದ ಜ್ಯೋತಿ ಬೆಳಗಿಸುವ ಮೂಲಕ ಶ್ರೀಮಠದ ಲಿಂಗೈಕ್ಯ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳು (Pandit Puttaraj Gawai) ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ನಡೆದಾಡುವ ದೇವರ ಸ್ಮಾರಕ ಕಾಮಗಾರಿ ಶುರುವಾಗಿ 9 ವರ್ಷಗಳು ಉರುಳಿದರೂ, ಕಾಮಗಾರಿ ಮಾತ್ರ ಇನ್ನೂ ಪೂರ್ಣವಾಗಿಲ್ಲ. ಸರ್ಕಾರ ಅನುದಾನ ನೀಡುತ್ತಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ, ಸ್ಮಾರಕ ಭವನ ನಿರ್ಮಾಣಕ್ಕೆ ಭಕ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಮುಂದಾಗಿದ್ದಾರೆ.
ಉತ್ತರ ಕರ್ನಾಟಕ ಪ್ರಸಿದ್ಧ ಮಠ ವೀರೇಶ್ವರ ಪುಣ್ಯಾಶ್ರಮದ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳು 2010 ರಲ್ಲಿ ಅಸಂಖ್ಯಾತ ಭಕ್ತಗಣ ಬಿಟ್ಟು ಅಗಲಿದರು. ಹೀಗಾಗಿ, ಗದಗ ನಗರದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಲ್ಲಿ ಸ್ಮಾರಕ ಭವನ ನಿರ್ಮಾಣವಾಗಬೇಕು ಎಂಬುವುದು ಭಕ್ತರ ಒತ್ತಾಯವಾಗಿತ್ತು. ಹೀಗಾಗಿ, ಅಂದಿನ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ 5 ಕೋಟಿ ಅನುದಾನ ಘೋಷಣೆ ಮಾಡಿದರು. 2011ರ ಮಾರ್ಚ್ 25 ರಂದು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಮಾಡಿತ್ತು.
ಗದಗ ಶಾಸಕ ಹೆಚ್.ಕೆ ಪಾಟೀಲ್ 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 5 ಕೋಟಿ ಅನುದಾನ ತರುವಲ್ಲಿ ಹಚ್ಚಿನ ಕಾಳಜಿ ವಹಿಸಿದರು. ಲೋಕೋಪಯೋಗಿ ಇಲಾಖೆ ಮೂಲಕ ಮಹಾರಾಷ್ಟ್ರ ಮೂಲದ ಶಿರ್ಕೆ ಕನ್ಸಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, 9 ವರ್ಷಗಳು ಕಳೆದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸ್ಮಾರಕ ಭವನದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. 5 ಕೋಟಿಯ ಅನುಮೋದನೆ ನೀಡಿದ್ದ ಕಟ್ಟಡ 6.25 ಕೋಟಿ ಖರ್ಚು ಮಾಡಿದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.
ಹತ್ತಾರು ಬಾರಿ ಮನವಿ ಮಾಡಿದರೂ, ಅನುದಾನ ಮಾತ್ರ ಬಿಡುಗಡೆ ಮಾತ್ರಯಾಗಿಲ್ಲ. ಹೀಗಾಗಿ ಜೆಡಿಎಸ್ ಮುಖಂಡರು ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ: ಸಚಿವ ಹೆಚ್ ಕೆ ಪಾಟೀಲ್ ತವರು ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ: ಗದಗ-ಬೆಟಗೇರಿ ಜನರಿದ ಹಿಡಿಶಾಪ
ಶ್ರೀ ಮಠದಲ್ಲಿ ಪೂಜೆ ಸಲ್ಲಿಸಿ, ಮಠದ ಆವರಣದಿಂದ ಭಿಕ್ಷಾಟನೆ ಆರಂಭಿಸಿ, ಗದಗ ನಗರ ವಿವಿಧ ಬೀದಿಯಲ್ಲಿ ಭಿಕ್ಷಾಟನೆ ಮಾಡಿದರು. ಬಂದ ಹಣವನ್ನು ಸರ್ಕಾರಕ್ಕೆ ನೀಡಿ ಆ ಹಣದಿಂದ ಸ್ಮಾರಕ ಭವನವನ್ನು ನಿರ್ಮಾಣ ಮಾಡಲಿ ಎಂದು ಜೆಡಿಎಸ್ ಮುಖಂಡರು ಸವಾಲು ಹಾಕಿದ್ದಾರೆ. ಇನ್ನು, ಸ್ಥಳೀಯ ಶಾಸಕ ಹೆಚ್ ಕೆ ಪಾಟೀಲ್ ಕಳೆದ ವರ್ಷ ಶ್ರೀಮಠಕ್ಕೆ ಭೇಟಿ ನೀಡಿ ಶೀಘ್ರವೇ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಕಾಮಗಾರಿ ಮುಗಿಯುವದಿರಲಿ ಆರಂಭ ಕೂಡ ಆಗಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಟ್ಟಡದ ಅನುದಾನದ ಬಗ್ಗೆಯೇ ಸಾಕಷ್ಟು ಅನುಮಾನ ಮೂಡುತ್ತಿದೆ. ಆರಂಭದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳ್ಳಲು ಎಸ್ಟಿಮೆಟ್ ಮಾಡಲಾಗಿತ್ತು. ಆ ಮೇಲೆ 1.25 ಕೋಟಿ ಹೆಚ್ಚುವರಿ ಹಣ ನೀಡಲಾಗಿದೆ. ಆದರೆ, ಈಗ ಮತ್ತೆ 5 ಕೋಟಿ ರೂ. ಹಣ ಬೇಕು ಅಂತ ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಚಿಚ ಹೆಚ್ ಕೆ ಪಾಟೀಲ್ ಭೇಟಿ ನೀಡಿ ಅನುದಾನ ನೀಡುವ ಭರವಸೆ ನೀಡಿದರೂ ಕೂಡಾ ಈವರಿಗೆ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ, ಈ ಬಾರಿಯ ಬಜೆಟ್ನಲ್ಲಿ ಹಣ ಮೀಸಲು ಇಡಬೇಕು ಎಂದು ಜನರು ಒತ್ತಾಯ ಮಾಡಿದರು.
ರಾಜ್ಯ ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಮಾಡುತ್ತಿದೆ. ಹೀಗಾಗಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಉದ್ದೇಶದಿಂದ ಜೆಡಿಎಸ್ ಭಿಕ್ಷಾಟನೆಗೆ ಮುಂದಾಗಿದೆ. ಇನಾದರೂ, ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಾ ಕಾದು ನೋಡಬೇಕು.