ಸಚಿವ ಹೆಚ್ ಕೆ ಪಾಟೀಲ್ ತವರು ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ: ಗದಗ-ಬೆಟಗೇರಿ ಜನರಿದ ಹಿಡಿಶಾಪ
ಗದಗ-ಬೆಟಗೇರಿಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿದ್ದು, 20 ದಿನಗಳಿಂದ 35 ವಾರ್ಡ್‌ಗಳಿಗೆ ನೀರು ಪೂರೈಕೆಯಾಗಿಲ್ಲ. ಕಾಂಗ್ರೆಸ್ ಸದಸ್ಯರು ನಗರಸಭೆ ಆಡಳಿತವನ್ನು ಖಂಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 500 ಕೋಟಿ ರೂಪಾಯಿ ವೆಚ್ಚದ ಯೋಜನೆಯ ಹೊರತಾಗಿಯೂ ಸಮಸ್ಯೆ ಮುಂದುವರಿದಿದೆ.ಜನರು ಬೋರ್‌ವೆಲ್ ನೀರನ್ನು ಅವಲಂಬಿಸಿದ್ದಾರೆ. ಕಳಪೆ ಕಾಮಗಾರಿಯನ್ನು ಅಧಿಕಾರಿಗಳು ದೂರಿದ್ದಾರೆ.
ಗದಗ, ಜನವರಿ 07: ರಾಜ್ಯದ ಪ್ರಭಾವಿ ಸಚಿವ ಹೆಚ್.ಕೆ ಪಾಟೀಲ್ (HK Patil) ತವರು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಗದಗ-ಬೆಟಗೇರಿ (Gadag-Betageri) ಅವಳಿ ನಗರದ 35 ವಾರ್ಡ್‌ಗಳಿಗೆ ಕಳೆದ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಇದರಿಂದ, ಕಾಂಗ್ರೆಸ್ ಪಕ್ಷದ ಸದಸ್ಯರು ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಗರಸಭೆಗೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೇಮಕವಾಗಿದ್ದಾರೆ. ಹೀಗಾಗಿ, ಸಾರ್ವಜನಿಕರು ನೀರು ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗದಗ-ಬೆಟಗೇರಿ ನಗರದಲ್ಲಿ ನೀರಿನ ಸಮಸ್ಯೆ ಹಲವು ದಶಕಗಳಿಂದ ಮನೆ ಮಾಡಿದೆ. ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಒದಗಿಸಲು ಸುಮಾರು 500 ಕೋಟಿ ರೂ. ಯೋಜನೆ ರೂಪಿಸಿದರೂ ನೀರಿನ ಭವಣೆ ನಿವಾರಣೆಯಾಗಿಲ್ಲ. ಇಂದಿಗೂ ಜನ ನೀರಿಗಾಗಿ ಪರದಾಡುತ್ತಿದ್ದಾರೆ.
ಸದ್ಯ 35 ವಾರ್ಡ್ನ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಜನರು ಬೋರ್‌ವೆಲ್ ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಸರಿಯಾಗಿ ನೀರು ಪೂರೈಸದೆ ಇರುವುದಕ್ಕೆ ಜನರು ವಾರ್ಡ್ಗಳ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕುಡಿಯುವ ನೀರು ಪೂರೈಸಿ ಅಂತ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗದಗ: ವಿಂಡ್ ಕಂಪನಿಗಳ ಅಟ್ಟಹಾಸಕ್ಕೆ ನಲುಗಿದ ರೈತರು
ಜನರ ಆಕ್ರೋಶಕ್ಕೆ ಎಚ್ಚೆತ್ತ ನಗರಸಭೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ವಿರುದ್ಧವೇ ಸ್ವಪಕ್ಷದ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಆದರೆ, ವಿಚಿತ್ರ ಅಂದ್ರೆ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಂಬಂತೆ ಸಚಿವರನ್ನು ಬಿಟ್ಟು ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಸದಸ್ಯರು ಬೊಟ್ಟು ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ಧಾರಿತನದಿಂದ ಕುಡಿಯುವ ನೀರು ಸಿಗುತ್ತಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ನಗರಸಭೆ ಆಯುಕ್ತ ಮಹೇಶ್ ಅವರನ್ನು ಸದಸ್ಯರು ಕೇಳಲು ಹೋದರೇ, ಆಯುಕ್ತರು ಕಚೇರಿಯಲ್ಲಿರಲಿಲ್ಲ. ಇದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ನಗರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಅಂತ ಸದಸ್ಯರು ಕಿಡಿಕಾರಿದ್ದಾರೆ.
ಇತ್ತ ಬಿಜೆಪಿ ಸದಸ್ಯರು ಸಚಿವ ಹೆಚ್ ಕೆ ಪಾಟೀಲ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿರೋ ಕಾಂಗ್ರೆಸ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಕರ್ಯಗಳಲ್ಲೊಂದಾದ ನೀರನ್ನೇ ಪೂರೈಸಲು ನಿಮ್ಮ ಕೈಯಿಂದ ಆಗುತ್ತಿಲ್ಲ ಅಂತ ವ್ಯಂಗ್ಯವಾಡಿದ್ದಾರೆ. ಹೆಚ್ ಕೆ ಪಾಟೀಲರು ಪಕ್ಕದ ಕ್ಷೇತ್ರ ಅಭಿವೃದ್ಧಿ ಮಾಡಲು ಹೋಗುತ್ತಾರೆ. ಮೊದಲು ತಮ್ಮ ಕ್ಷೇತ್ರದ ಜನರಿಗೆ ಕುಡಿಯುವ ನೀರು ಕೊಡಲಿ ಅಂತ ವಾಗ್ದಾಳಿ ಮಾಡಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ನೀರು 24/7 ಯೋಜನೆಯ ಕಾಮಗಾರಿ ಸರಿಯಾಗಿಲ್ಲ. ಗುತ್ತಿಗೆದಾರನ ಅಪೂರ್ಣ ಕಾಮಗಾರಿಯಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ, ತುಂಗಭದ್ರಾ ನದಿಯಿಂದ ಗದಗಿಗೆ ಸಂಪರ್ಕಿಸುವ ಪೈಪ್ಲೈನ್ ಒಡೆದು ದುರಸ್ಥಿ ಹಂತದಲ್ಲಿ ಇದೆ. ಹೀಗಾಗಿ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಗದಗ-ಬೆಟಗೇರಿ ಮಂದಿಯ ಹಣೆಬರವೇ ಸರಿಯಿಲ್ಲ ಅಂತ ಜನರು ಗೊಣಗಾಡುತ್ತಿದ್ದಾರೆ. ಏಕೆಂದರೆ, ಯಾರೇ ಅಧಿಕಾರಕ್ಕೆ ಬಂದರೂ ನಮ್ಮಲ್ಲಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಕಳಪೆ ಕಾಮಗಾರಿಯಿಂದ ಮತ್ತಷ್ಟು ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Tue, 7 January 25