ಗದಗ: ವಿಂಡ್ ಕಂಪನಿಗಳ ಅಟ್ಟಹಾಸಕ್ಕೆ ನಲುಗಿದ ರೈತರು, ಜಮೀನುಗಳಲ್ಲಿ ಬೃಹತ್ ವಾಹನಗಳ ಸಂಚಾರದಿಂದ ಸಂಕಷ್ಟ
ಗದಗ ಜಿಲ್ಲೆಯಲ್ಲಿ ಅನ್ನದಾತರಿಗೆ ರಕ್ಷಣೆ ಇಲ್ಲದಂತಾಗಿದೆ. ವಿಂಡ್ ಕಂಪನಿಗಳ ಅಟ್ಟಹಾಸಕ್ಕೆ ಅಕ್ಷರಶಃ ರೈತರು ತತ್ತರಿಸಿಹೋಗಿದ್ದಾರೆ. ರೈತರ ಜಮೀನುಗಳಲ್ಲಿ ಬೃಹತ್ ವಾಹನಗಳು ಬೇಕಾಬಿಟ್ಟಿ ಸಂಚಾರ ಮಾಡಿ ಜಮೀನುಗಳು ಹಾಳು ಮಾಡುತ್ತಿವೆ. ಹೀಗಾಗಿ ಸಿಟ್ಟಿಗೆದ್ದ ರೈತರು ವಿಂಡ್ ಫ್ಯಾನ್ ರೆಕ್ಕೆ ಹೊತ್ತು ತಂದ ಬೃಹತ್ ವಾಹನಗಳು ಹೋಗದಂತೆ ಅಗೆದು ತಡೆ ಹಿಡಿದಿದ್ದಾರೆ. ಕಂಪನಿ ಪರವಾಗಿ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಗದಗ, ನವೆಂಬರ್ 16: ರೈತರ ಫಲವತ್ತಾದ ಭೂಮಿಯಲ್ಲಿ ಬೃಹತ್ ವಾಹನಗಳು ಠಿಕಾಣಿ ಹೂಡಿವೆ. ವಿಂಡ್ ಕಂಪನಿಗಳ ಅಟ್ಟಹಾಸಕ್ಕೆ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಂಡ್ ಫ್ಯಾನ್ ಬೃಹತ್ ರೆಕ್ಕೆಗಳು ಹೊತ್ತು ನಿಂತಿವೆ. ರೈತರ ಅನುಮತಿ ಇಲ್ಲದೇ ಜಮೀನುಗಳಲ್ಲಿ ವಾಹನಗಳು ಅಡ್ಡಾದಿಡ್ಡಿ ಓಡಾಟ ಮಾಡಿದ್ದರಿಂದ ಜಮೀನಿನಲ್ಲೇ ಟ್ರೆಂಚ್ ಹಾಕಿ ರೈತರು ವಾಹನ ತಡೆದಿದ್ದಾರೆ. ತಕ್ಷಣ ಕಂಪನಿ ಪರವಾಗಿ ಪೊಲೀಸ್ ಅಧಿಕಾರಿಗಳು ಓಡೋಡಿ ಬಂದಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ. ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದಲ್ಲಿ. ಜಮೀನಿನಲ್ಲಿ ಬೆಳೆ ಇಲ್ಲದಿದ್ದರೂ ರೈತರು ಜಮೀನುಗಳು ಕಾವಲು ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಜಮೀನುಗಳ ರಕ್ಷಣೆಗೆ ರಾತ್ರಿಯಿಡೀ ರೈತರು ಜಮೀನಿನಲ್ಲೇ ಮಲಗುತ್ತಿದ್ದಾರೆ. ಐರಿಷ್ ವಿಂಡ್ ಕಂಪನಿ ವಿರುದ್ಧ ರೈತರು ಕೆಂಡಕಾರಿದ್ದಾರೆ. ನಮ್ಮ ಹಾಗೂ ಕಂಪನಿ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಆದರೂ ಅಕ್ರಮವಾಗಿ ನಮ್ಮ ಜಮೀನುಗಳಲ್ಲಿ ಬೃಹತ್ ವಾಹನಗಳು ಓಡುತ್ತಿವೆ. ಹೀಗಾಗಿ ಜಮೀನಿನಲ್ಲಿ ತಗ್ಗು ಅಗೆದು ಕಂಪನಿ ವಾಹನಗಳು ತಡೆಹಿಡಿದ್ದೇವೆ ಎಂದು ರೈತರು ಹೇಳಿದ್ದಾರೆ.
ಅಕ್ರಮ ಪ್ರವೇಶ ಮಾಡಿದ ಕಂಪನಿಗಳನ್ನು ಬಿಟ್ಟು, ಪೊಲೀಸ್ ಅಧಿಕಾರಿಗಳು ಕಂಪನಿಗಳಿಂದ ಲಂಚ ಪಡೆದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ರೈತರು ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರೈತರ ರಕ್ಷಣೆಗೆ ಬರಬೇಕಾದ ಪೊಲೀಸರು ಕಂಪನಿಗಳ ಪರ ಕೆಲಸ ಮಾಡ್ತಿದ್ದಾರೆ. ಕಂಪನಿ ವಾಹನಗಳು ಬಿಡದಿದ್ದರೆ ಪೊಲೀಸ್ ಫೋರ್ಸ್ ತರಬೇಕಾಗುತ್ತದೆ ಎಂದು ಅಂತ ಬೆದರಿಕೆ ಹಾಕುತ್ತಾರೆ ಎಂದು ರೈತರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ವಿರುದ್ಧ ಲಂಚದ ಆರೋಪ
ಒಂದು ರೀತಿ ಇಲ್ಲಿ ರಕ್ಷಕರೇ ಭಕ್ಷರಾಗಿದ್ದಾರೆ ಎಂದು ರೈತರು ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ. ಕಂಪನಿಯಿಂದ ಹಣ ಪಡೆದು ಪೊಲೀಸರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಹಣದ ಆಸೆಗಾಗಿ ಕಂಪನಿ ಪರ ಕೆಲಸ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಕೂಡ ನಮ್ಮ ರಕ್ಷಣೆಗೆ ಬರುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಭಾಗದ ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದಲೇ ಕಂಪನಿಗಳು, ಪೊಲೀಸ್ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಆರೋಪಿಸಿದ್ದಾರೆ.
ಪೊಲೀಸರು ಹೇಳುವುದೇನು?
ಪೊಲೀಸ್ ಅಧಿಕಾರಿಗಳ ವಿರುದ್ಧದ ಲಂಚದ ಗಂಭೀರ ಆರೋಪದ ಬಗ್ಗೆ ಗದಗ ಎಸ್ಪಿ ಬಿಎಸ್ ನೇಮಗೌಡ ಪ್ರತಿಕ್ರಿಯಿಸಿ, ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರ ವಿರುದ್ಧ ನಾವು ಇಲ್ಲ. ಮೀಡಿಯೇಟರ್ ಆಗುವ ಪ್ರಶ್ನೆ ಇಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಒತ್ತಾಯ ಪೂರ್ವಕ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಂಪನಿಗಳು ಪೊಲೀಸ್ ರಕ್ಷಣೆ ಕೇಳಿದ್ದಾರೆ, ನೀಡಲಾಗಿದೆ. ರೈತರು ಏನೇ ಸಮಸ್ಯೆಗಳಿದ್ದರೆ ನನ್ನನ್ನು ಬಂದು ಭೇಟಿ ಮಾಡಲಿ ಎಂದು ತಿಳಿಸಿದ್ದಾರೆ.
ಈ ಮೊದಲು ರೀನ್ಯೂವ್ ಕಂಪನಿಗೆ ರಸ್ತೆಗೆ ಅಗ್ರಿಮೆಂಟ್ ಮಾಡಿ ನೀಡಲಾಗಿತ್ತು. ಆ ಕಂಪನಿ ಕೆಲಸ ಮುಗಿದಿದೆ. ಆದರೆ, ಈಗ ಬೇರೆ ಕಂಪನಿ ದಬ್ಬಾಳಿಕೆಯಿಂದ ನಮ್ಮ ಜಮೀನಿನಲ್ಲಿ ವಾಹನ ಓಡಿಸುತ್ತಿದ್ದಾರೆ ಎಂಬುದು ರೈತರ ಆರೋಪ. ಈ ಬಗ್ಗೆ ಮಾಹಿತಿಗಾಗಿ ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.
ಇದನ್ನೂ ಓದಿ: ಬಸ್ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಒಟ್ಟಿನಲ್ಲಿ ಈ ಬಾರಿ ಚೆನ್ನಾಗಿ ಮಳೆಯಾಗಿ ಬಿತ್ತನೆ ಮಾಡಿ ಬದುಕು ಬಂಗಾರ ಮಾಡಿಕೊಳ್ಳಬೇಕು ಅಂದ್ಕೊಂಡ ರೈತರಿಗೆ ವಿಂಡ್ ಕಂಪನಿಗಳ ವಾಹನಗಳು ನಿದ್ದೆಗೆಡಿಸಿವೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ