ಗದಗ: ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ವಿಸ್ತರಣೆ ಶಿಕ್ಷೆ
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಸಂಸ್ಥೆಯ ಆವರಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದ್ದ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ರೀಲ್ಸ್ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಹೌಸ್‌ಮ್ಯಾನ್‌ಶಿಪ್ ಪೋಸ್ಟ್ (ಪ್ರಾಯೋಗಿಕ ತರಬೇತಿ) ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಗದಗ, ಫೆ.11: ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿದ್ದಕ್ಕಾಗಿ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದ ಒಂದು ದಿನದ ನಂತರ, ಗದಗ (Gadag) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (GIMS) ಸಂಸ್ಥೆಯ ಆವರಣದಲ್ಲಿ ರೀಲ್‌ಗಳನ್ನು ಮಾಡಿದ 38 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಹೌಸ್‌ಮ್ಯಾನ್‌ಶಿಪ್ ಪೋಸ್ಟಿಂಗ್ (ಪ್ರಾಯೋಗಿಕ ತರಬೇತಿ) ಅನ್ನು 10 ದಿನಗಳವರೆಗೆ ವಿಸ್ತರಿಸುವ ಮೂಲಕ ಶಿಕ್ಷೆ ವಿಧಿಸಲಾಗಿದೆ.
ಜನಪ್ರಿಯ ಹಿಂದಿ, ಕನ್ನಡ ಮತ್ತು ತೆಲುಗು ಸಿನಿಮಾ ಹಾಡುಗಳಿಗೆ ನೃತ್ಯ ಸೇರಿದಂತೆ ಹಲವಾರು ರೀಲ್‌ಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆ ಆವರಣದಲ್ಲೇ ಮಾಡಿದ್ದರು. ಈ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಟೀಕೆಗೆ ಕಾರಣವಾಗಿತ್ತು. ಆಸ್ಪತ್ರೆ ಆವರಣ, ಲ್ಯಾಬ್ ಮತ್ತು ಆಪರೇಷನ್ ಥಿಯೇಟರ್ ಅನ್ನು ಮನರಂಜನಾ ವಿಡಿಯೋ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದಕ್ಕೆ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು.
ಆಸ್ಪತ್ರೆಯ ಆವರಣದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ವಿದ್ಯಾರ್ಥಿಗಳು ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ ನಂತರ, ಅವು ವೈರಲ್ ಆಗಿ ಅಧಿಕಾರಿಗಳ ಗಮನ ಸೆಳೆದವು. ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ರೀಲ್‌ಗಳ ಬಗ್ಗೆ ಶನಿವಾರ ತಿಳಿಯಿತು ಎಂದರು.
ಇದನ್ನೂ ಓದಿ: ಗದಗ ಜೀಮ್ಸ್ ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು, ಪೇಶೆಂಟ್ ಜಸ್ಟ್ ಮೋಯಾ.. ಮೋಯಾ: ವಿದ್ಯಾರ್ಥಿಗಳ ರೀಲ್ಸ್ ವೈರಲ್
ರೀಲ್ಸ್ ವೈರಲ್ ಆಗುತ್ತಿದ್ದಂತೆ ನಾನು ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳನ್ನು ಕರೆಸಿ ಮಾತನಾಡಿದ್ದೆ, ಅದರಲ್ಲಿ 38 ಮಂದಿ ರೀಲ್ಸ್ ಚಿತ್ರೀಕರಿಸಿದ್ದಾರೆ. ಆಸ್ಪತ್ರೆ ಆವರಣವನ್ನು ರೀಲ್ ಚಿತ್ರೀಕರಣಕ್ಕೆ ಬಳಸಿದ್ದು ಅವರ ಪಾಲಿಗೆ ದೊಡ್ಡ ಅಪರಾಧ’ ಎಂದು ಬೊಮ್ಮನಹಳ್ಳಿ ಹೇಳಿದರು.
ಅವರು ತಮ್ಮ ಖಾಸಗಿ ಜಾಗಗಳಲ್ಲಿ ರೀಲ್‌ಗಳನ್ನು ಚಿತ್ರೀಕರಿಸಬೇಕಿತ್ತು. ಅವರು ರೋಗಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡಬಾರದು. ಪದವಿ ಪೂರ್ವ ಸಮಾರಂಭಕ್ಕಾಗಿ ಚಿತ್ರೀಕರಣ ಮಾಡಿದ್ದಾಗಿ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಆದರೆ ಅಂತಹ ಯಾವುದೇ ಚಿತ್ರೀಕರಣಕ್ಕೆ ನಾವು ಅನುಮತಿ ನೀಡಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




