ಹೂಳು ಎತ್ತುವ ನೆಪದಲ್ಲಿ ಐತಿಹಾಸಿಕ ವಿಕ್ಟೋರಿಯಾ ಕೆರೆಯ ಮಣ್ಣು ಲೂಟಿ..!

ಭೀಕರ ಬರಗಾಲಕ್ಕೆ ಗದಗದ ಐತಿಹಾಸಿಕ ವಿಕ್ಟೋರಿಯಾ ಕೆರೆ ಬತ್ತಿ ಹೋಗಿದೆ. ಆದ್ರೆ, ಇಟ್ಟಿಗೆ ಭಟ್ಟಿ ಮಾಲೀಕರು ಇದನ್ನೇ ವರದಾನ ಮಾಡಿಕೊಂಡು ಭರ್ಜರಿ ಮಣ್ಣು ಲೂಟಿ ಮಾಡುತ್ತಿದ್ದಾರೆ‌. ಹೌದು, ಕೆರೆ ಅಂಗಳದಲ್ಲಿನ ಫಲವತ್ತಾದ ಮಣ್ಣು ಲೂಟಿ ಮಾಡಲಾಗುತ್ತಿದೆ. ರಾಜಾರೋಷವಾಗಿ ಜೆಸಿಬಿಗಳ ಮೂಲಕ ಕೆರೆ ಬಗೆಯುತ್ತಿದ್ದಾರೆ. ಟಿಪ್ಪರ್, ಟ್ರ್ಯಾಕ್ಟರ್ ಮೂಲಕ ಕೆರೆ ಮಣ್ಣು ಇಟ್ಟಿಗೆ ಭಟ್ಟಿಗಳ ಪಾಲಾಗುತ್ತಿದೆ. ಇಷ್ಟೊಂದು ಮಣ್ಣು ಲೂಟಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೂಳು ಎತ್ತುವ ನೆಪದಲ್ಲಿ ಐತಿಹಾಸಿಕ ವಿಕ್ಟೋರಿಯಾ ಕೆರೆಯ ಮಣ್ಣು ಲೂಟಿ..!
ಐತಿಹಾಸಿಕ ವಿಕ್ಟೋರಿಯಾ ಕೆರೆಯ ಮಣ್ಣು ಲೂಟಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 23, 2024 | 7:23 PM

ಗದಗ, ಮೇ.23: ಭೀಕರ ಬರಗಾಲಕ್ಕೆ ಮುಂಡರಗಿ(Mundaragi) ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ವಿಕ್ಟೋರಿಯಾ ರಾಣಿ ಕೆರೆ(Lake) ಖಾಲಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಯಾರ ಭಯವೂ ಇಲ್ಲದೇ ಹಾಡಹಗಲೇ ಕೆರೆಯ ಮಣ್ಣು ಲೂಟಿ ಮಾಡುತ್ತಿದ್ದಾರೆ. ಹೌದು, ಈ ಕೆರೆ ಸುಮಾರು‌ 530 ಎಕರೆ ವಿಸ್ತೀರ್ಣ ಹೊಂದಿದೆ. ಡಂಬಳ ಮೇವುಂಡಿ, ಸೇರಿದಂತೆ 300 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಇದೆ ಕೆರೆ ನೀರಾವರಿ ಒದಗಿಸುತ್ತದೆ. ಆದ್ರೆ, ಈ ಬಾರಿ ಭೀಕರವಾದ ಬರಗಾಲಕ್ಕೆ ಕೆರೆ ಬತ್ತಿ ಹೋಗಿದೆ. ಡಂಬಳ ಭಾಗದಲ್ಲಿ ಹತ್ತಾರು ಇಟ್ಟಿಗೆ ಭಟ್ಟಿಗಳಿವೆ. ಇದೇ ಫಲವತ್ತಾದ ಮಣ್ಣು ಇಟ್ಟಿಗೆ ಭಟ್ಟಿಗಳ ಪಾಲಾಗುತ್ತಿದೆ. ಕೆರೆಯ ಅಂಗಳದಲ್ಲಿ ಜೆಸಿಬಿ ಮೂಲಕ ಮಣ್ಣು ಬಗೆದು, ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಮೂಲಕ ಇಟ್ಟಿಗೆ ಭಟ್ಟಿಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.

ರೈತರು ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋದರೆ ಪರವಾಗಿಲ್ಲ. ಆದ್ರೆ, ಇಟ್ಟಿಗೆ ಭಟ್ಟಿಗ ಪಾಲಾಗುತ್ತಿದ್ದು, ಸರ್ಕಾರಕ್ಕೆ ಯಾವುದೇ ಕರ ತುಂಬದೇ ಉಚಿತ ಮಣ್ಣು ಲೂಟಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಹೀಗಾಗಿ ಕೂಡಲೇ ಮಣ್ಣು ಲೂಟಿ ಮಾಡುವುದನ್ನು ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಜನರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:ರಾತ್ರೋರಾತ್ರಿ ವಿಶಾಲ ಕೆರೆಯಲ್ಲಿ ನೂರಾರು ಮರಗಳ ಮಾರಣಹೋಮ.. ಕಣ್ಮುಚ್ಚಿ ಕುಳಿತ ಅಧಿಕಾರಿಗಳ ಧೋರಣೆ ಏನು?

ಇನ್ನು ಕೆರೆ ಖಾಲಿಯಾಗಿದ್ದು, ಹೂಳು ತೆಗೆಯಬೇಕು, ಅದನ್ನು ಗ್ರಾಮ‌ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಮಾಡುತ್ತದೆ. ಆ ಫಲವತ್ತಾದ ಮಣ್ಣು ರೈತರು ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋದರೆ ರೈತರಿಗೆ ಅನುಕೂಲ. ಆದ್ರೆ, ಈ ಫಲವತ್ತಾದ ಮಣ್ಣನ್ನು ಇಟ್ಟಿಗೆ ಭಟ್ಟಿಗಳ ಮಾಲೀಕರು ತೆಗೆದುಕೊಂಡು ಹೋಗುತ್ತಿದ್ದು, ಕೋಟ್ಯಾಂತರ ರೂಪಾಯಿ ಮಣ್ಣು ಉಚಿತವಾಗಿ ಇಟ್ಟಿಗೆ ಭಟ್ಟಿಗಳ ಪಾಲಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಯಾವುದೇ ಆದಾಯ ಬರುತ್ತಿಲ್ಲ.

ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಓ, ಕಂದಾಯ ಇಲಾಖೆ ಅಧಿಕಾರಿಗಳು ಇಟ್ಟಿಗೆ ಭಟ್ಟಿಗಳ ಮಾಲೀಕರ ಜೊತೆಗೆ ಶಾಮೀಲಾಗಿ ಮಣ್ಣು ಲೂಟಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮವಾಗಿ ನಡೆಯುತ್ತಿರುವ ಮಣ್ಣು ಸಾಗಾಣಿಕೆಗೆ ಬ್ರೇಕ್ ಹಾಕಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡಲಾಗುತ್ತಿದೆ. ಹಾಡು ಹಗಲೇ ಮಣ್ಣು ಕಳ್ಳತನ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚಿ ಕುಳತ್ತಿದ್ದಾರೆ‌. ಈ ಕೂಡಲೇ ಜಿಲ್ಲಾಡಳಿತ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್​ಕೆ ಪಾಟೀಲ್ ಅವರು ಅಕ್ರಮಕ್ಕೆ ಬ್ರೇಕ್ ಹಾಕಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ