ಡಿಸೆಂಬರ್ 6ರಂದು ಕಪ್ಪತ್ತಗುಡ್ಡ ಉತ್ಸವ! ಪರಿಸರ ಪ್ರೇಮಿಗಳಿಂದ ಗಣಿ ಕುಳಗಳಿಗೆ ಎಚ್ಚರಿಕೆ ಸಂದೇಶ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡಕ್ಕೆ ಈಗ ಉತ್ಸವದ ಸಂಭ್ರಮ. ಇದೇ ಮೊದಲ ಬಾರಿಗೆ ಕಪ್ಪತ್ತಗುಡ್ಡ ಉತ್ಸವ-2023 ಆಯೋಜನೆ ಮಾಡಲಾಗಿದೆ. ಹಸಿರು ಸೌಂದರ್ಯದ ಮಡಿಲಲ್ಲಿ ಕಾವಿಧಾರಿಯ ನೇತೃತ್ದಲ್ಲಿ ಉತ್ಸವ ನಡೆಯಲಿದೆ. ಪಂಚ ಖನಿಜಗಳ ಸಂಪತ್ತು ಕಪ್ಪತ್ತಗುಡ್ಡ‌ ಲೂಟಿಗೆ ಗಣಿ‌ ಕುಳಗಳ ಸಂಚು ನಡೆಯುವಾಗಲೇ ಔಷಧಿ‌ ಸಸ್ಯಕಾಶಿಯಲ್ಲಿ ಉತ್ಸವದ ಮೂಲಕ ಎಚ್ವರಿಕೆ ಸಂದೇಶ ರವಾನೆಗೆ ಸಜ್ಜಾಗಿದೆ.

ಡಿಸೆಂಬರ್ 6ರಂದು ಕಪ್ಪತ್ತಗುಡ್ಡ ಉತ್ಸವ! ಪರಿಸರ ಪ್ರೇಮಿಗಳಿಂದ ಗಣಿ ಕುಳಗಳಿಗೆ ಎಚ್ಚರಿಕೆ ಸಂದೇಶ
ಕಪ್ಪತ್ತಗುಡ್ಡ ಉತ್ಸವ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2023 | 7:51 PM

ಗದಗ, ಡಿ.03: ಔಷಧಿ ಸಸ್ಯಕಾಶಿ ಕಪ್ಪತ್ತಗುಡ್ಡ ಉತ್ಸವ(Kappattagudda Utsava) ಕ್ಕಾಗಿ ಉತ್ತರ ಕರ್ನಾಟಕದ ಸಹ್ಯಾದ್ರಿ ಸಜ್ಜಾಗಿದೆ. ಸದಾ ಗಣಿಕುಳಗಳ ಅಟ್ಟಹಾಸಕ್ಕೆ ಸಿಲುಕಿ ನಲಗುತ್ತಿದ್ದ ಕಪ್ಪತ್ತಗುಡ್ಡ, ಈಗ ವನ್ಯಜೀವ ಧಾಮವಾಗಿದೆ. ಆದರೂ, ಸಸ್ಯಕಾಶಿ‌ ಮೇಲೆ ಗಣಿಕುಳಗಳ ವಕ್ರದೃಷ್ಠಿ ಇನ್ನೂ‌ ಕೊನೆಯಾಗಿಲ್ಲ. ಕಪ್ಪತಗುಡ್ಡ ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಹೋರಾಟದ ಫಲವಾಗಿ ಅಂದಿನ ಕಾಂಗ್ರೆಸ್ ಸರ್ಕಾರ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದೆ. ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಕೂಡ ನಿರಂತರವಾಗಿ ಕಪ್ಪತ್ತಗುಡ್ಡ ಉಳಿವಿಗಾಗಿ ಹೋರಾಟ ಮಾಡಿದ್ದಾರೆ. ಆದ್ರೆ, ಗಣಿಕುಳಗಳು, ಶತಾಯಗತಾಯಿ ಗಣಿ ಲೂಟಿಗೆ ಕಸರತ್ತು ಮಾಡುತ್ತಿದ್ದಾರೆ. ಹೀಗಾಗಿ ಕಪ್ಪತ್ತಗುಡ್ಡದಲ್ಲಿ ‘ಕಪ್ಪತ್ತಗುಡ್ಡ ಉತ್ಸವ’ ಮಾಡುವ ಮೂಲಕ ಕಪ್ಪತ್ತಗುಡ್ಡ ಸೆರಗಿನ ರೈತರು, ಜನರಿಗೆ ಸಸ್ಯಕಾಶಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ.

ಕಪ್ಪತ್ತಗುಡ್ಡ ಉಳಿವಿಗಾಗಿ ಉತ್ಸವ ಆಯೋಜನೆ

ಕಪ್ಪತ್ತಗುಡ್ಡ ನಂದಿವೇರಿ ‌ಮಠದ ಆವರಣದಲ್ಲಿ ಆಯೋಜನೆ ಮಾಡಲಾಗಿದೆ. ಇದೇ ಮೊಟ್ಟಮೊದಲ ಬಾರಿಗೆ ಕಪ್ಪತ್ತಗುಡ್ಡ ನಂದಿವೇರಿ‌ ಮಠದ ವತಿಯಿಂದ ಉತ್ಸವ ಆಯೋಜನೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡ ಸೆರಗಿನಲ್ಲಿ ಗಣಿಗಾರಿಕೆಗೆ ಅನುಮತಿ ಕೊಡಬಾರದು ಎನ್ನುವ ಎಚ್ಚರಿಕೆ ಉತ್ಸವ ಮೂಲಕ ಸರ್ಕಾರಕ್ಕೆ ನೀಡಲು ಆಯೋಜಕರು ನಿರ್ಧಾರ ಮಾಡಿದ್ದಾರೆ. ಉತ್ತರ ಕರ್ನಾಟಕ ಸಹ್ಯಾದ್ರಿ ಕಪ್ಪತ್ತಗುಡ್ಡ ಉಳಿವಿಗಾಗಿ ಉತ್ಸವ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ:ಬೆಂಕಿಯ ಕೆನ್ನಾಲಿಗೆಯಲ್ಲಿ ಕಪ್ಪತ್ತಗುಡ್ಡ.. ಮೂರು ದಿನದಲ್ಲಿ 5 ಸಾವಿರ ಹೆಕ್ಟೇರ್​ಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿ

ಡಿಸೆಂಬರ್ 6ರಂದು ಕಪ್ಪತ್ತಗುಡ್ಡ ಉತ್ಸವ

ಪಂಚ ಖನಿಜಗಳ ಸಂಪತ್ತು ಕಪ್ಪತ್ತಗುಡ್ಡ‌ ಲೂಟಿಗೆ ಗಣಿ‌ ಕುಳಗಳ ಸಂಚು ರೂಪಿಸಿದ್ದಾರೆ. ವನ್ಯಜೀವಿ ಧಾಮ ಆದರೂ ನಿರಂತರ ಪ್ರಯತ್ನ ನಡೆದಿದೆ. ಈ ಉತ್ಸವದಲ್ಲಿ ಕಪ್ಪತ್ತಗುಡ್ಡದ ಸಕಲ ಪಶು,ಪಕ್ಷಿ, ಪ್ರಾಣಿ ಸಂಕುಲ, ಮತ್ತು ಸಂಪೂರ್ಣ ಜೀವವೈವಿದಧ್ಯತೆಯ ಸಂರಕ್ಷಣೆ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಮುಖ್ಯ ಎನ್ನುವ ಸಂದೇಶ ಇದಾಗಿದೆ. ಡಿಸೆಂಬರ್ 6ರಂದು ನಡೆಯುವ ಉತ್ಸವಕ್ಕೆ ಕೊಲ್ಲಾಪುರ ಕಣೇರಿವಾಡಿ ಸಿದ್ಧಗಿರಿ ಮಹಾಸಂಸ್ಥಾನಮಠದ ಅದೃಶ್ಯ ಕಾಡಸಿದೇಶ್ವರ ಶ್ರೀಗಳು ಚಾಲನೆ ನೀಡಲಿದ್ದಾರೆ.

ಕಪ್ಪತ್ತಗುಡ್ಡ ನಂದೀಶ್ವರ ಮಠದ ಶಿವಕುಮಾರ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ಸವದಲ್ಲಿ ನಾಡಿನ ಕೃಷಿ ತಜ್ನರು, ಪರಿಸರ ಪ್ರೇಮಿಗಳು ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ. ಕಪ್ಪತ್ತಗುಡ್ಡ ರಕ್ಷಣೆಯೇ ಉತ್ಸವದ ಪ್ರಮುಖ ಅಜೆಂಡಾ ಎಂದು ಉತ್ಸವ ಸಮಿತಿ ಅಧ್ಯಕ್ಷರು ಹೇಳಿದ್ದಾರೆ. ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡು ಎಂಬ ನಾಣ್ಣುಡಿ ಜನತೆಯ ಹೃದಯದಲ್ಲಿದೆ. ಉತ್ತರ ಕರ್ನಾಟಕ ಸಹ್ಯಾದ್ರಿ ಸೌಂದರ್ಯ ನೋಡಲು ಕಣ್ಣಿಗೆ ಹಬ್ಬವೇ ಸರಿ. ನೂರಾರು ನಮೂನೆ ಔಷಧಿಯ ಸಸ್ಯಗಳು. ಶುದ್ಧ ಗಾಳಿ, ಹಸಿರಿನ ಸಿರಿ, ಸೌಂದರ್ಯದ ಮಡಿಲಲ್ಲಿ ನಡೆಯುವ ಕಪ್ಪತ್ತಗುಡ್ಡ ಉತ್ಸವ ಕಣ್ತುಂಬಿಕೊಳ್ಳಲು ಬನ್ನಿ, ಕಪ್ಪತ್ತಗುಡ್ಡ ರಕ್ಷಣೆಗೆ ಕೈಜೋಡಿಸಿ ಎನ್ನುವುದು ಗದಗ ಜಿಲ್ಲೆಯ ಪರಿಸರ ಪ್ರೇಮಿಗಳ ಆಸೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ